ADVERTISEMENT

ಅಖಾಡಕ್ಕೆ ಹೊರಟ ಮಗ ಮಸಣ ಸೇರಿದ....

ಕುಟುಂಬಕ್ಕೆ ಬರ ಸಿಡಿಲು; ಹೊಟ್ಟೆ ಉರಿ ಎಂದು ಗೋಳಿಟ್ಟ ಸಂತೋಷ್‌ ಹೊಸಮನಿ; ಹಲವು ಪ್ರಶ್ನೆ ಮೂಡಿಸಿದ ಸಾವು

ಇ.ಎಸ್.ಸುಧೀಂದ್ರ ಪ್ರಸಾದ್
Published 15 ಫೆಬ್ರುವರಿ 2017, 13:03 IST
Last Updated 15 ಫೆಬ್ರುವರಿ 2017, 13:03 IST
ಸಂತೋಷ ಹೊಸಮನಿ ಪಾರ್ಥಿವ ಶರೀರವನ್ನು ನೋಡಿ ಶೋಕಸಾಗರದಲ್ಲಿ ಮುಳುಗಿದ ಮೃತನ ತಾಯಿ ಮತ್ತು ಸಂಬಂಧಿಕರು
ಸಂತೋಷ ಹೊಸಮನಿ ಪಾರ್ಥಿವ ಶರೀರವನ್ನು ನೋಡಿ ಶೋಕಸಾಗರದಲ್ಲಿ ಮುಳುಗಿದ ಮೃತನ ತಾಯಿ ಮತ್ತು ಸಂಬಂಧಿಕರು   

ಧಾರವಾಡ: ಚಿಕ್ಕಮಲ್ಲಿಗವಾಡದ ದ್ಯಾಮಣ್ಣ ಅವರ ಕುಟುಂಬಕ್ಕೆ ಕಳೆದ ಎರಡು ವರ್ಷಗಳಿಂದ ಎದುರಿಸಿದ್ದ ಸಮಸ್ಯೆಗೆ ಮತ್ತೊಂದು ಬರೆ ಎಳೆದಂತೆ ಮಂಗಳವಾರ ಪುತ್ರ ಶೋಕ ಬರಸಿಡಿಲು ಬಂದೆರಗಿದಂತಾಗಿತ್ತು.

ರಾಜ್ಯ ಒಲಿಂಪಿಕ್‌ನಲ್ಲಿ ಚಿನ್ನ ಗೆಲ್ಲುವ ಕನಸಿನೊಂದಿಗೆ ಮನೆಯಿಂದ ಹೊರಬಿದ್ದ ಪೈಲ್ವಾನ್‌್ ಸಂತೋಷ್‌ ಹೊಸಮನಿ ಮರಳಿ ಮನೆಗೆ ಬರಲಿಲ್ಲ. ಅಖಾಡಾದಲ್ಲಿನ ಎದುರಾಳಿಯನ್ನು ಚಿತ್ ಮಾಡುವ ಹಿಡಿತದಲ್ಲಿ ತಮ್ಮ ತೊಡೆಯ ಮೂಳೆ ಮುರಿದುಕೊಂಡರು. ಆದರೆ ಆತನನ್ನು ಕಳೆದುಕೊಳ್ಳಲು ಅದೊಂದು ಕಾರಣವಾಯಿತು ಎಂದರೆ ನಂಬಲು ಸಾಧ್ಯವಿಲ್ಲ ಎಂದು ಚಿಕ್ಕಮಲ್ಲಿಗವಾಡದ ದ್ಯಾಮಣ್ಣ ಅವರ ಮನೆಯ ಮುಂದೆ ಸೇರಿದ್ದ ಸಂತೋಷ ಅವರ ಸ್ನೇಹಿತರು ಕಣ್ಣೀರಿಡುತ್ತಿದ್ದರು.

ಊರಿನ ರಸ್ತೆಯಲ್ಲಿ ಸಂತೋಷ ಅವರ ಪಾರ್ಥೀವ ಶರೀರ ಬರುವ ದಾರಿಯನ್ನು ಕಾಯುತ್ತಾ ವೃದ್ಧೆಯರು ರಸ್ತೆಯ ಇಕ್ಕೆಲಗಳಲ್ಲಿ ಕುಳಿತಿದ್ದರು. ಹಿರಿಯರು ಮನೆಯ ಕಟ್ಟೆಯ ಮೇಲೆ ಕುಳಿತು ಮಾತನಾಡುತ್ತಿದ್ದರು. ಸಂತೋಷನ ಒಡನಾಡಿಗಳು ಗುಂಪು ಗುಂಪಾಗಿ ಸೇರಿ ಮೊನ್ನೆಯವರೆಗೂ ಜತೆಗಿದ್ದು, ಹಲವು ಕನಸುಗಳನ್ನು ಕಟ್ಟಿಕೊಂಡ ಗೆಳೆಯ ಇಂದಿಲ್ಲ ಎಂಬ ಕೊರಗಿನಲ್ಲಿದ್ದರು.

ಅಲ್ಲೇ ಇದ್ದ ವೃದ್ಧರೊಬ್ಬರು ಮಾತನಾಡಿ, ‘21 ವರ್ಷ ಬಾಳಿ ಬದುಕುವ ವಯಸ್ಸೇ ಹೊರತು ಸಾಯುವ ವಯಸ್ಸಲ್ಲ. ಆದರೆ ಅದೇನು ಕೆಟ್ಟ ದೃಷ್ಟಿ ಬಿದ್ದಿದೆಯೋ ಆ ಕುಟುಂಬಕ್ಕೆ, ಕಳೆದ ಮೂರು ವರ್ಷಗಳಿಂದ ಮೇಲಿಂದ ಮೇಲೆ ಆಘಾತಗಳು ಆಗುತ್ತಲೇ ಇವೆ. ಎರಡು ವರ್ಷಗಳ ಹಿಂದೆ ಕುಟುಂಬ ಹಣಕಾಸಿನ ಇಕ್ಕಟ್ಟಿನಲ್ಲಿ ಸಿಲುಕಿತ್ತು. ಕಳೆದ ವರ್ಷ ಕುಸ್ತಿ ಕ್ರೀಡೆ ಪೋಷಕರೊಬ್ಬರ ಮನೆಯ ಗೃಹಪ್ರವೇಶಕ್ಕೆ ಧಾರವಾಡದ ಪೈಲ್ವಾನರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಮರಳಿ ಬರುವಾಗ ಆದ ಭೀಕರ ರಸ್ತೆ ಅಪಘಾತದಲ್ಲಿ ಪೈಲ್ವಾನ್‌ ಒಬ್ಬರು ಮೃತಪಟ್ಟಿದ್ದರು. ಈ ಮನೆಯ ವಾಹನವನ್ನೇ ಆ ಪ್ರವಾಸಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಸಂಪೂರ್ಣ ನುಜ್ಜುಗುಜ್ಜಾದ ವಾಹನದಿಂದ ಆದ ನಷ್ಟ ಅಷ್ಟಿಷ್ಟಲ್ಲ. ಅದನ್ನು ಮಾರಿದರು. ಈ ವರ್ಷ ವಿಧಿ ಮಗನನ್ನೇ ಕಳೆದುಕೊಳ್ಳುವಂತೆ ಮಾಡಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಊರಿನ ಬಸವರಾಜ ಎಂಬುವವರು ಮಾತನಾಡಿ, ‘ರಾಷ್ಟ್ರಮಟ್ಟದಲ್ಲಿ ಪದಕ ಗೆಲ್ಲಬೇಕು ಎಂದು ಕನಸು ಕಂಡಿದ್ದ ಸಂತೋಷನಿಗೆ ಬಾಲ್ಯದಿಂದಲೂ ಕುಸ್ತಿಯ ಕನಸು. ಐದು ವರ್ಷಗಳ ಹಿಂದೆ ಮನೆಯಲ್ಲಿ ನೀರು ಎತ್ತಿ ಹಾಕಿ, ಜಾನುವಾರುಗಳಿಗೆ ಮೇವು ತಂದಿದ್ದಕ್ಕೆ ಅತ್ತೆ ನೀಡಿದ ₹ 20 ಹಿಡಿದು ಕುಸ್ತಿ ಆಡಲು ಹೋದವನು ಟ್ರೋಫಿ ತಂದಿದ್ದ. ಮನೆಯಲ್ಲಿ ಗೊತ್ತಾಗಬಾರದು ಎಂದು ಸಂತೋಷ್ ಚಿಕ್ಕಮಲ್ಲಿಗವಾಡ ಎಂದು ಅಲ್ಲಿ ಹೆಸರು ಬರೆಸಿದ್ದ. ಆದರೆ ಪತ್ರಿಕೆಯಲ್ಲಿ ಚಿತ್ರ ಸಹಿತ ವರದಿ ಪ್ರಕಟವಾಗಿದ್ದಾಗ ಮನೆಯವರಿಗೂ ಈತನ ಸಾಮರ್ಥ್ಯದ ಅರಿವಾಗಿತ್ತು. ಮಿತಭಾಷಿಯಾಗಿದ್ದ ಸಂತೋಷ ಇಡೀ ಊರಿಗೇ ಅಚ್ಚುಮೆಚ್ಚಿನ ಯುವಕನಾಗಿದ್ದ’ ಎಂದರು.

ಬರೆದ ಚೀಟಿ ಎಲ್ಲಿ?: ‘ಆದರೆ ರಾಜ್ಯ ಒಲಿಂಪಿಕ್‌ನ ಪಂದ್ಯದಲ್ಲಿ ತೊಡೆಗೆ ಪೆಟ್ಟಾಗಿದ್ದಾಗ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಅಲ್ಲಿಂದ ಹೆಚ್ಚಿನ ಸೌಲಭ್ಯವಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ಅದರಂತೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದರೆ ಅವರೂ ಬೇರೆ ಕಡೆ ಹೋಗುವಂತೆ ಹೇಳಿದರು. ಕಿಮ್ಸ್‌ನ ವೈದ್ಯರು ನಮಗೆ ಭರವಸೆ ತುಂಬಿದರು. ನಾವು ನಂಬಿದೆವು. ಸೋಮವಾರ ಮಧ್ಯಾಹ್ನ ಶಸ್ತ್ರಚಿಕಿತ್ಸೆ ಆಗುವವರೆಗೂ ಎಲ್ಲರೊಂದಿಗೆ ಸಂತೋಷ ಚೆನ್ನಾಗಿಯೇ ಮಾತನಾಡುತ್ತಿದ್ದ. ಆದರೆ ಶಸ್ತ್ರಚಿಕಿತ್ಸೆ ನಂತರ ಹೊಟ್ಟೆ ಉರಿ ಎಂದು ಗೋಳಿಡಲು ಆರಂಭಿಸಿದ.

ನಂತರ ವೈದ್ಯರು ಆತನ ಬಾಯಿಗೆ ಪ್ಲಾಸ್ಟರ್ ಅಂಟಿಸಿದರು. ಬರೆಯಲು ಕಾಗದ ಹಾಗೂ ಪೆನ್‌ ನೀಡಿ ಎಂದು ಗೋಗರೆದಿದ್ದಕ್ಕೆ ಆಸ್ಪತ್ರೆ ಸಿಬ್ಬಂದಿ ನೀಡಿದರು. ಈ ಸಂದರ್ಭದಲ್ಲಿ ನಮ್ಮನ್ನೂ ಒಳಗೆ ಬಿಡಲಿಲ್ಲ. ನಂತರ ಆತ ಏನು ಬರೆದ ಎಂಬುದು ನಮಗೆ ಗೊತ್ತೇ ಆಗಲಿಲ್ಲ. ಆಸ್ಪತ್ರೆ ಸಿಬ್ಬಂದಿಯೂ ಈ ಕುರಿತು ಏನನ್ನೂ ಹೇಳುತ್ತಿಲ್ಲ’ ಎಂದು ಸ್ನೇಹಿತ ಬಸವರಾಜ ಆಕ್ರೋಶ ವ್ಯಕ್ತಪಡಿಸಿದರು.

ಹೆಣವಾಗಿ ಮನೆಗೆ ಬಂದ ಮಗನನ್ನು ಕಂಡು ತಾಯಿ ಶಾಂತವ್ವ ಗೋಳಿಡುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು. ಮನೆ ಬಾಗಿಲಿನಲ್ಲಿ ಕ್ಷಣ ಕಾಲ ನಿಂತ ಪಾರ್ಥಿವ ಶರೀರ ಹೊತ್ತ ವಾಹನ ನೇರವಾಗಿ ಮಸಣದ ಕಡೆ ಹೊರಟಿತು. ಇನ್ನೂ ಬದುಕಿ ಬಾಳಬೇಕಾದ ಯುವಕ ಸಂತೋಷನ ಅಂತಿಮ ಸಂಸ್ಕಾರಕ್ಕೆ ಎಕ್ಕೆ ಗಿಡವೂ ಸೇರಿದಂತೆ ಸಕಲ ಸಿದ್ಧತೆಗಳು ನಡೆದು, ಅಂತಿಮವಾಗಿ ಭರವಸೆ ಮೂಡಿಸಿದ ಪೈಲ್ವಾನ ಹಲವು ಪ್ರಶ್ನೆಗಳನ್ನು ಬಿಟ್ಟು ಸೂರ್ಯನೊಂದಿಗೆ ಅಸ್ತಂಗತನಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT