ADVERTISEMENT

ಅಧಿಕಾರಿಗಳಿಗೆ ಸೇವಾ ಮನೋಭಾವ ಅಗತ್ಯ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2017, 8:40 IST
Last Updated 25 ಡಿಸೆಂಬರ್ 2017, 8:40 IST

ಧಾರವಾಡ: ‘ಸಾರ್ವಜನಿಕ ಮತ್ತು ಆಡಳಿತ ಸೇವೆಗೆ ಬರಲು ಕೇವಲ ಉತ್ಕೃಷ್ಠ ಜ್ಞಾನವಿದ್ದರೆ ಸಾಲದು, ಸಮಾಜಮುಖಿ ಹಾಗೂ ಸೇವಾ ಮನೋಭಾವ ಅಗತ್ಯ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ ಹೇಳಿದರು.

ನಾಗನೂರು ಶಿವಬಸವ ಸ್ವಾಮೀಜಿ ಕಲ್ಯಾಣ ಕೇಂದ್ರ ವತಿಯಿಂದ ಭಾನುವಾರ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಸಿದ್ಧರಾಮೇಶ್ವರ ಮಾರ್ಗದರ್ಶಿಯ ರಜತ ಮಹೋತ್ಸವ, ನೂತನ ಕಟ್ಟಡ ಉದ್ಘಾಟನೆ ಹಾಗೂ ಹಳೇ ವಿದ್ಯಾರ್ಥಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಯುವ ಸಮುದಾಯವು ಪ್ರಾಮಾಣಿಕ ಸೇವಾ ಮನೋಭಾವ ಇಟ್ಟುಕೊಂಡು ಕೆಎಎಸ್, ಐಎಎಸ್ ನಂತಹ ಉನ್ನತ ಹುದ್ದೆಗಳಿಗೆ ಬರಬೇಕು. ಕೇವಲ ದುಡ್ಡು ಗಳಿಸುವ ಉದ್ದೇಶದಿಂದ ಈ ಹುದ್ದೆಗಳಿಗೆ ಬಂದರೆ ಅದರಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ. ಉನ್ನತ ಹುದ್ದೆಗಳು ಸೇವೆ ಮಾಡಲು ಒಂದು ಸದವಕಾಶ. ಇಂಥ ಹುದ್ದೆಯಲ್ಲಿರುವವರು ಸಾಮಾಜಿಕ ಕಳಕಳಿ ಹೊಂದಿದ್ದರೆ ಮಾತ್ರ ದೇಶದ ಪ್ರಗತಿ ಸಾಧ್ಯ’ ಎಂದರು.

ADVERTISEMENT

‘ಇಂದು ಎಲ್ಲಾ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಇಂಥ ಸ್ಥಿತಿಯ ನಡುವೆಯೂ ಪ್ರಾಮಾಣಿಕವಾಗಿ ನೈತಿಕ ಮೌಲ್ಯಗಳನ್ನು ಉಳಿಸಿಕೊಂಡು ಬದುಕಲು ಸಾಧ್ಯವಿದೆ. ಅದಕ್ಕೆ ಗಟ್ಟಿ ಮನಸ್ಥಿತಿ ಬೇಕು. ಉತ್ತಮ ಜ್ಞಾನ, ನಿರಂತರ ಅಧ್ಯಯನದ ಮೂಲಕ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಿದೆ. ಆ ಯಶಸ್ಸಿನೊಂದಿಗೆ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಂಡರೆ ಅದಕ್ಕೂ ಒಂದು ಗೌರವ ದೊರೆಯುತ್ತದೆ’ ಎಂದು ಹೇಳಿದರು.  

’ವಿರಕ್ತಮಠದ ಹಿಂದಿನ ಮಠಾಧೀಶರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಇಂದಿನ ಸ್ವಾಮೀಜಿಗಳು ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದ್ದಾರೆ. ಧಾರವಾಡದಲ್ಲಿ ಸಂಪನ್ಮೂಲಗಳಿಗೆ ಯಾವುದೇ ಕೊರತೆ ಇಲ್ಲ.  ಹೀಗಾಗಿ ಪ್ರತಿಯೊಬ್ಬರೂ ಉನ್ನತ ಸಾಧನೆ ಮಾಡುವ ವಿಶ್ವಾಸ ಹೊಂದಿ
ಗುಣಾತ್ಮಕ ತರಬೇತಿ ಪಡೆಯುವ ಅಗತ್ಯವಿದೆ’ ಎಂದು ಹೇಳಿದರು.

ನೂತನ ಕಟ್ಟಡ ಉದ್ಘಾಟಿಸಿದ ಗದಗಿನ ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ‘ಈ ಹಿಂದೆ ಲಿಂಗಾಯತರ ಪರಿಸ್ಥಿತಿ ಬಹಳಷ್ಟು ಕಷ್ಟಕರವಾಗಿತ್ತು. ಒಳ್ಳೆಯ ಬಟ್ಟೆ ತೊಡಲು ಸಹ ವೈದಿಕರ ಅನುಮತಿ ಪಡೆಯಬೇಕಿತ್ತು. ಹೀಗಾಗಿ ಅನಾದಿ ಕಾಲದಿಂದಲೂ ಲಿಂಗಾಯತರು ಹಾಗೂ ವೈದಿಕರ ನಡುವೆ ಸಣ್ಣಪುಟ್ಟ ಮನಸ್ತಾಪಗಳು ಇದ್ದೇ ಇದ್ದವು. ಆದರೆ, ಅವು ಈಗ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದ ನೆಪದಲ್ಲಿ ಬದಲಾಗುತ್ತಿವೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ‘ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಲಕ್ಷಾಂತರ ಹಣ ಖರ್ಚು ಮಾಡುತ್ತಿರುವ ಈ ಸಂದರ್ಭದಲ್ಲಿ ನಾಡಿನ ವಿರಕ್ತ
ಮಠಗಳು ಉಚಿತ ಶಿಕ್ಷಣ ನೀಡುತ್ತಿವೆ. ಆರ್ಥಿಕವಾಗಿ ತೊಂದರೆಯಲ್ಲಿರುವ ವಿದ್ಯಾರ್ಥಿಗಳು ಇಂಥ ಮಠಗಳು ನೀಡುವ ಸೌಲಭ್ಯದ ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ನಿರ್ಮಾಣ ಮಾಡಿಕೊಳ್ಳಬೇಕು’ ಎಂದರು. ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಡಾ.ಸಿದ್ಧರಾಮ ಸ್ವಾಮೀಜಿ, ಶಿವಕುಮಾರ ಸಂಬರಗಿಮಠ, ಡಾ. ಜಿ.ಸಿ. ಚಿಕ್ಕೂರ, ಪ್ರಾಚಾರ್ಯ ಕುಮಾರ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.