ADVERTISEMENT

ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ

ಮೊದಲ ದಿನವೇ 49,928 ಮಕ್ಕಳಿಗೆ ಲಸಿಕೆ– ಡಾ.ಆರ್‌.ಎಂ. ದೊಡ್ಡಮನಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 9:16 IST
Last Updated 8 ಫೆಬ್ರುವರಿ 2017, 9:16 IST

ಹುಬ್ಬಳ್ಳಿ: ಆರೋಗ್ಯ ಇಲಾಖೆಯು 9 ತಿಂಗಳಿಂದ 15 ವರ್ಷದೊಳಗಿನ ಎಲ್ಲ ಮಕ್ಕಳಿಗೆ ದಡಾರ ಮತ್ತು ರುಬೆಲ್ಲಾ ಲಸಿಕೆ ಹಾಕುವ ಅಭಿಯಾನ ಜಿಲ್ಲೆಯಲ್ಲಿ ಮಂಗಳವಾರ ಆರಂಭವಾಗಿದ್ದು, ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜಿಲ್ಲೆಯಲ್ಲಿ 49,928 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಸರ್ಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆದ ಅಭಿಯಾನಕ್ಕೆ ಲಯನ್ಸ್‌, ರೋಟರಿ ಸಂಸ್ಥೆ ಸೇರಿದಂತೆ ಇತರೆ ಸಂಘ ಸಂಸ್ಥೆಗಳು ಕೈಜೋಡಿಸಿವೆ.

‘ಅಭಿಯಾನಕ್ಕೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಲಸಿಕೆ ಹಾಕಿಸಿಕೊಂಡ ಕೆಲ ಮಕ್ಕಳಿಗೆ ತಲೆ ಸುತ್ತು ಬಂದಿದೆ. ತಕ್ಷಣ ಸ್ಥಳದಲ್ಲಿದ್ದ ವೈದ್ಯರು ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.

ಉಳಿದಂತೆ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ. ಕೆಲ ಪೋಷಕರು ಖುದ್ದು ಶಾಲೆಗೆ ಬಂದು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಿ ಹೋಗಿದ್ದಾರೆ. ಫೆ. 28ರವರೆಗೆ ಅಭಿಯಾನ ಮುಂದುವರಿಯಲಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್‌.ಎಂ.ದೊಡ್ಡಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಭಿಯಾನದ ಮೊದಲ ವಾರದಲ್ಲಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಚುಚ್ಚುಮದ್ದು ಹಾಕಲಾಗುತ್ತದೆ. ಎರಡನೇ ವಾರದಲ್ಲಿ ಪೊಲಿಯೋ ಲಸಿಕೆ ಅಭಿಯಾನದ ಮಾದರಿಯಲ್ಲಿ ಸಮುದಾಯದ ಬಳಿ (ಆಸ್ಪತ್ರೆ, ದೇವಸ್ಥಾನ, ಬಸ್‌ ನಿಲ್ದಾಣ, ಮಾರುಕಟ್ಟೆ) ತೆರಳಿ ಚುಚ್ಚು ಮದ್ದು ಹಾಕಲಾಗುವುದು. ಚುಚ್ಚುಮದ್ದು ಹಾಕದ ಮಕ್ಕಳನ್ನು ಗುರುತಿಸಿ ಅವರಿಗೆ ಮೂರನೇ ವಾರದಲ್ಲಿ ಹಾಕಲಾಗುವುದು’ ಎಂದು ವಿವರಿಸಿದರು.

‘ದಡಾರ ಮತ್ತು ರುಬೆಲ್ಲಾ ಲಸಿಕೆಯನ್ನು ಚುಚ್ಚುಮದ್ದಿನ ಮೂಲಕ ನೀಡಲಾಗುತ್ತದೆ. ಸದ್ಯಕ್ಕೆ ಇದು ಒಂದೇ ಸುತ್ತಿನ ಅಭಿಯಾನವಾಗಿದ್ದು, ಈ ಹಿಂದೆ ಲಸಿಕೆ ಹಾಕಿಸಿಕೊಂಡಿದ್ದರೂ ಮತ್ತೆ ಹಾಕಿಸಿಕೊಳ್ಳಬೇಕಿದೆ’ ಎಂದು ತಿಳಿಸಿದರು.

‘ಚುಚ್ಚುಮದ್ದು ಹಾಕಿಸಿಕೊಂಡ ಮಕ್ಕಳ ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸವಾದರೆ ತಕ್ಷಣ ಅವರಿಗೆ ಚಿಕಿತ್ಸೆ ನೀಡುವ ಸಲುವಾಗಿ ಧಾರವಾಡದ ಎಸ್‌ಡಿಎಂ ಮತ್ತು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ತಲಾ 5 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.