ADVERTISEMENT

ಅವಳಿ ನಗರ ತೆರಿಗೆದಾರರಿಗೆ ‘ಹೆಚ್ಚುವರಿ’ ಸಂಕಟ

ತೆರಿಗೆ ಹೆಚ್ಚಿಸಲು ಕೋರಿದ್ದಕ್ಕೆ ಅಲೆದಾಟದ ಶಿಕ್ಷೆ!

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 5:24 IST
Last Updated 21 ಫೆಬ್ರುವರಿ 2017, 5:24 IST
ಹುಬ್ಬಳ್ಳಿ: ಒಂದನೇ ಪ್ರಸಂಗ: ಸ್ವಂತ ವಾಸದ ಮನೆಯನ್ನು ಬಾಡಿಗೆಗೆ ನೀಡಿದ ವ್ಯಕ್ತಿ ಈ ವಿಷಯವನ್ನು ಸಂಬಂಧ­ಪಟ್ಟವರ ಗಮನಕ್ಕೆ ತಂದು ತೆರಿಗೆ ಹೆಚ್ಚಿಸುವಂತೆ ಕೋರಿದರು. ಅವರ ಪ್ರಾಮಾಣಿಕ ‘ಬೇಡಿಕೆ’ಗೆ ಮನ್ನಣೆ ಸಿಕ್ಕಿತು. ಆದರೆ ಆ ಮನೆಯಲ್ಲಿ ತಾವೇ ವಾಪಸ್ ವಾಸಕ್ಕೆ ಬಂದ ನಂತರವೂ ತೆರಿಗೆ ‘ವಾಣಿಜ್ಯ ಉದ್ದೇಶ’ದ್ದಾಗಿಯೇ ಉಳಿಯಿತು!
 
ಮತ್ತೊಂದು ಪ್ರಸಂಗ: ವಾಣಿಜ್ಯ ಮಳಿಗೆಯೊಂದನ್ನು ಖರೀದಿಸಿದ ವ್ಯಕ್ತಿಗೆ ಅದರ ಮೂಲ ಮಾಲೀಕನ ಹೆಸರಿನಲ್ಲಿರುವ ಮತ್ತೊಂದು ಮಳಿಗೆಯ ತೆರಿಗೆ ಕೂಡ ಕಟ್ಟುವ ದಂಡ!
 
ಮೂರನೇ ಪ್ರಸಂಗ: ವಾಣಿಜ್ಯ ಮಳಿಗೆಯ ಬಾಕಿ ಇರುವ ತೆರಿಗೆಗೆ ಸಂಬಂಧಿಸಿದ ವ್ಯೂ ರಿಪೋರ್ಟ್‌ನಲ್ಲಿ ₹ 194 ಆದರೆ, ಚಲನ್‌ನಲ್ಲಿ ₹ 9882! 
ಮಹಾನಗರ ಪಾಲಿಕೆಯ ತೆರಿಗೆ ವಿಭಾಗದಲ್ಲಿ ಆಗುತ್ತಿರುವ ತೊಂದರೆಗಳ ಕುರಿತು ತೆರಿಗೆದಾರರ ದೂರುಗಳ ಪಟ್ಟಿ ಹೀಗೆ ಸಾಗುತ್ತದೆ. 
 
ನಗರದ ಮಧುರಾ ಕಾಲೊನಿ ನಿವಾಸಿ, ಔಷಧಿ ಕಂಪೆನಿಯೊಂದರ ಪ್ರಾದೇಶಿಕ ವ್ಯವಸ್ಥಾಪಕ ಎನ್‌.ಎಸ್.­ಅನಂತಪ್ರಕಾಶ (ಪಿಐಡಿ ಸಂಖ್ಯೆ 30/1910) ಅವರು ಮನೆ ಬಾಡಿಗೆ ಕೊಡುವುದಾಗಿ ಮಾಹಿತಿ ನೀಡಿ ತೆರಿಗೆ ವಿಭಾಗದಿಂದ ‘ದಂಡ’ ವಿಧಿಸಿಕೊಂಡಿದ್ದಾರೆ.
 
‘ಪಾಲಿಕೆ ಗಣಕೀಕೃತ ರಶೀದಿ ನೀಡಲು ಆರಂಭ ಮಾಡಿದಾಗಿ­ನಿಂದಲೂ ನಾನು ತೆರಿಗೆ ಪಾವತಿಸು­ತ್ತಿದ್ದೇನೆ. 2008ರಲ್ಲಿ ಬೆಂಗಳೂರಿಗೆ ವರ್ಗ ಆದ ಕಾರಣ ಮನೆಯನ್ನು ಬಾಡಿಗೆಗೆ ನೀಡಿದ್ದೆ. ಆಗ ಕಂದಾಯ ವಿಭಾಗಕ್ಕೆ ಪತ್ರ ಬರೆದು ವಾಣಿಜ್ಯ ಉದ್ದೇಶದ ತೆರಿಗೆ ವಿಧಿಸುವಂತೆ ಕೋರಿದ್ದೆ. 2011ರಲ್ಲಿ ವಾಪಸ್ ಬಂದು ಮನೆಯನ್ನು ಪುನ: ಸ್ವಂತ ವಾಸಕ್ಕೆ ಬಳಸಿಕೊಂಡೆ. ಆದರೆ ಇಂದಿಗೂ ವಾಣಿಜ್ಯ ಉದ್ದೇಶದ ತೆರಿಗೆ ವಿಧಿಸಲಾಗುತ್ತಿದೆ’ ಎಂದು ಅನಂತ­ಪ್ರಕಾಶ ‘ಪ್ರಜಾವಾಣಿ’ಗೆ ತಿಳಿಸಿದರು. 
 
‘ಮನೆಯನ್ನು ಬಾಡಿಗೆಗೆ ಕೊಡುವ ವಿಷಯವನ್ನು ಗಮನಕ್ಕೆ ತಂದದ್ದೇ ತಡ, 2002ರಿಂದ ಹೆಚ್ಚುವರಿ ತೆರಿಗೆ ಅನ್ವಯವಾಗುತ್ತದೆ ಎಂದು ತಿಳಿಸಿ ಬಾಕಿ ಮೊತ್ತ ತುಂಬುವಂತೆ ಸೂಚಿಸಿದ್ದಾರೆ. 2011ರ ನಂತರ ಪಾಲಿಕೆ ವಿಧಿಸಿದ ಹೆಚ್ಚುವರಿ ಮೊತ್ತವೂ ಸೇರಿ ಈಗ ಬಾಕಿ ಉಳಿದ ಮೊತ್ತ ₹ 17,000 ಆಗಿದೆ’ ಎಂದು ಅವರು ಹೇಳಿದರು.
 
ಚಲನ್‌ಗೂ ವ್ಯೂ ರಿಪೋರ್ಟ್‌ಗೂ ತಾಳೆ ಇಲ್ಲ: ತೆರಿಗೆ ವಿಭಾಗದ ಚಲನ್‌ಗೂ ವ್ಯೂ ರಿಪೋರ್ಟ್‌ಗೂ ತಾಳೆ ಇಲ್ಲ ಎಂಬ ಆರೋಪಗಳೂ ಕೇಳಿ ಬಂದಿವೆ. ನಗರದ ನವೀನ ಪಾರ್ಕ್‌ನಲ್ಲಿ ಬಾಡಿಗೆಗೆ ಮನೆ ಕೊಟ್ಟಿರುವ ಬೆಂಗಳೂರು ನಿವಾಸಿ ರಿಚರ್ಡ್ ಮಿರಾಂಡ ಕಳೆದ ವರ್ಷ ₹ 28,000 ಆಸ್ತಿ ತೆರಿಗೆ ಪಾವತಿಸಿದ್ದಾರೆ. ಬಾಕಿ ಮೊತ್ತ ₹ 194 ಎಂದು ವ್ಯೂ ರಿಪೋರ್ಟ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರೆ ಚಲನ್‌ನಲ್ಲಿ ಈ ಮೊತ್ತ ₹ 9882 ಆಗಿದೆ ಎಂದು ದೂರಿದ್ದಾರೆ. 
 
ತೆರಿಗೆ ವಿಭಾಗದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೂ ಗೊಂದಲಕಾರಿ ಹೇಳಿಕೆ ನೀಡುತ್ತಿದ್ದಾರೆ. ತೆರಿಗೆ ಅಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ ‘ಸಮಸ್ಯೆಗಳೇನೂ ಇಲ್ಲ’ ಎಂದು ಹೇಳಿದರೆ ಪಾಲಿಕೆ ವಿಶೇಷ ಅಧಿಕಾರಿ ಎಚ್‌.ಎಸ್.ನರೇಗಲ್‌ ‘ತೆರಿಗೆ ಹೆಚ್ಚು ಮಾಡುವ ವಿಷಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಕಡಿಮೆ ಮಾಡುವುದಕ್ಕೆ ಮಾತ್ರ ಹಿರಿಯ ಅಧಿಕಾರಿಗಳ ಅನುಮತಿ ಬೇಕಾಗುತ್ತದೆ’ ಎನ್ನುತ್ತಾರೆ. 
 
**
ಪ್ರಾಮಾಣಿಕತೆ ಇರಬಾರದೇ?
ತೆರಿಗೆ ಹೆಚ್ಚಿಸಿ ಎಂದು ಪ್ರಾಮಾಣಿಕವಾಗಿ ಕೋರಿಕೊಂಡಾಗಿನಿಂದ ನಾನು ತೊಂದರೆ ಅನುಭವಿಸುತ್ತಿದ್ದೇನೆ. ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇನೆ. ಇಲ್ಲಿಯ ವರೆಗೆ ಯಾವ ಅಧಿಕಾರಿಯೂ ಸಮಸ್ಯೆಗೆ ಸ್ಪಂದಿಸಿಲ್ಲ. ನನ್ನ ಎಲ್ಲ ಮನವಿ ಪತ್ರಗಳನ್ನು ಬದಿಗಿರಿಸಿ ಅನ್ಯಾಯವಾಗಿ ಹೆಚ್ಚುವರಿ ತೆರಿಗೆ ಪಾವತಿ ಮಾಡುವಂತೆ ಸೂಚಿಸುತ್ತಿದ್ದಾರೆ. ಪ್ರಾಮಾಣಿಕವಾಗಿ ತೆರಿಗೆ ಸಂದಾಯ ಮಾಡಲು ಮುಂದಾದದ್ದಕ್ಕೆ ಈ ರೀತಿಯ ಶಿಕ್ಷೆ ನೀಡುವುದೇ?
ಎನ್.ಎಸ್.ಅನಂತಪ್ರಕಾಶ, ಮಧುರಾ ಕಾಲೊನಿ ನಿವಾಸಿ.
 
**
ತೆರಿಗೆದಾರರು ನ್ಯಾಯಕ್ಕಾಗಿ ಅಲೆದಾಡುತ್ತಿರುವ ಪ್ರಸಂಗ ಗಮನಕ್ಕೆ ಬಂದಿಲ್ಲ. ರಶೀದಿ ಮತ್ತು ಸಂಬಂ­ಧ­ಪಟ್ಟ ದಾಖಲೆಗಳನ್ನು ತಂದು­ಕೊಟ್ಟರೆ ಸಮಸ್ಯೆ ಸರಿಪಡಿಸುತ್ತೇವೆ
-ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ
ಪಾಲಿಕೆ ಕಂದಾಯ ಅಧಿಕಾರಿ
 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.