ADVERTISEMENT

ಈಗಲೂ ಸಾಲ ತೀರಿಸುತ್ತಿದ್ದೇವೆ...

ಬಜೆಟ್‌ ಸಂವಾದದಲ್ಲಿ ಸಂಸದ ಪ್ರಹ್ಲಾದ ಜೋಶಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 6:23 IST
Last Updated 6 ಫೆಬ್ರುವರಿ 2017, 6:23 IST

ಹುಬ್ಬಳ್ಳಿ: ಹಿಂದಿನ ಯುಪಿಎ ಸರ್ಕಾರ ಮಾಡಿಟ್ಟ ಭಾನಗಡಿಗಳನ್ನು ಸರಿ ಮಾಡಲು ನರೇಂದ್ರ ಮೋದಿ ಅವರು ಕೆಲ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದಾಗ್ಯೂ, ಸಾಮಾಜಿಕ ಭದ್ರತಾ ಯೋಜನೆ ಹಾಗೂ ಜನಕಲ್ಯಾಣ ಯೋಜನೆಗಳಿಗೆ ನೀಡಬೇಕಿದ್ದ ಅನುದಾನಕ್ಕೆ ತಡೆ ಹಿಡಿದಿಲ್ಲ ಎಂದು ಸಂಸದ ಪ್ರಹ್ಲಾದ ಜೋಶಿ ತಿಳಿಸಿದರು.

ನಗರದ ಬಿವಿಬಿ ಕಾಲೇಜಿನ ಎಂಬಿಎ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶೈಕ್ಷಿಕ ಸಂಘವು ಏರ್ಪಡಿಸಿದ್ದ ಕೇಂದ್ರ ಬಜೆಟ್‌ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ‘ಅಂದು ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಅವರು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ಬಜೆಟ್‌ನಲ್ಲಿ ₹ 38 ಸಾವಿರ ಕೋಟಿ ಪ್ರಕಟಿಸಿದರೆ, ಗುಟ್ಟಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸಂದೇಶ ಕಳಿಸಿ ಕೇವಲ ₹ 28 ಸಾವಿರ ಕೋಟಿ ಖರ್ಚು ಮಾಡುವಂತೆ ನಿರ್ದೇಶನ ನೀಡುತ್ತಿದ್ದರು.

ಆದರೆ, ನರೇಂದ್ರ ಮೋದಿ ಸರ್ಕಾರ ಬಜೆಟ್‌ನಲ್ಲಿ ಏನು ಘೋಷಣೆ ಮಾಡುತ್ತದೆಯೋ ಅಷ್ಟನ್ನೂ ಕೊಟ್ಟಿದೆ. ಅದರಲ್ಲಿಯೂ, ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದೆ’ ಎಂದರು.

‘ಕಾಂಗ್ರೆಸ್‌ನವರು ಪ್ರತಿ ದಿನ 70 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸುತ್ತಿದ್ದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಪ್ರಮಾಣವನ್ನು 130 ಕಿ.ಮೀ.ಗೆ ಹೆಚ್ಚಿಸಲಾಗಿದೆ’ ಎಂದು ಹೇಳಿದರು.

‘ಬಜೆಟ್‌ ಮಂಡನೆಯ ದಿನಾಂಕವನ್ನು ನಿಗದಿಗೊಳಿಸಿದ್ದರ ಬಗ್ಗೆಯೂ ಹಲವು ಅಪಸ್ವರಗಳು ಕೇಳಿ ಬಂದಿವೆ. ಆದರೆ, ಮೋದಿ ಅವರು ಲೇಖಾನುದಾನ ಪಡೆಯುವ ಗೊಡವೆಯೇ ಬೇಡವೆಂದು ಮುಂಚೆಯೇ ಬಜೆಟ್‌ ಮಂಡಿಸಿದ್ದಾರೆ’ ಎಂದರು.

ಧಾರವಾಡದ ಕರ್ನಾಟಕ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಎನ್‌.ಜಿ. ಚಚಡಿ ಮಾತನಾಡಿ, ‘ಕೃಷಿ ಹಾಗೂ ಗ್ರಾಮೀಣ ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ಹೆಚ್ಚು ಆದ್ಯತೆ ನೀಡಿರುವುದು ಸರಿಯಾಗಿದೆ. ಆದರೆ, ಜಿಡಿಪಿ ಹೆಚ್ಚಳಕ್ಕೆ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.