ADVERTISEMENT

ಎಟಿಎಂಗಳಿಗೂ ತಟ್ಟಿದ ಚುನಾವಣಾ ಬಿಸಿ

ಸಾರ್ವಜನಿಕರಿಗೆ ಲಭಿಸದ ಹಣ, ಚೆಕ್‌ ಪೋಸ್ಟ್‌ಗಳಲ್ಲಿ ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ, ಲೀಡ್‌ ಬ್ಯಾಂಕ್‌ಗೆ ನಿತ್ಯ ದೂರು

ಪ್ರಮೋದ ಜಿ.ಕೆ
Published 20 ಏಪ್ರಿಲ್ 2018, 6:55 IST
Last Updated 20 ಏಪ್ರಿಲ್ 2018, 6:55 IST

ಹುಬ್ಬಳ್ಳಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಚೆಕ್‌ ಪೋಸ್ಟ್‌ಗಳನ್ನು ಹಾಕಿರುವ ಕಾರಣ ಎಟಿಎಂಗಳಿಗೆ ಹಣ ಸಾಗಿಸಲು ಭದ್ರತಾ ಸಿಬ್ಬಂದಿ ಮತ್ತು ಬ್ಯಾಂಕ್‌ ಅಧಿಕಾರಿಗಳು ನಿತ್ಯ ಪರದಾಡುತ್ತಿದ್ದಾರೆ. ಇದರ ಪರಿಣಾಮ ಜನರ ಮೇಲಾಗಿದ್ದು, ಜಿಲ್ಲೆಯ ಸಾಕಷ್ಟು ಎಟಿಎಂಗಳಲ್ಲಿ ಹಣ ಸಿಗುತ್ತಿಲ್ಲ.

ಸರ್ಕಾರಿ ವಾಹನ, ಆಟೊಗಳ ಮೂಲಕ ಎಟಿಎಂಗಳಿಗೆ ಮೊದಲು ಹಣ ತೆಗೆದುಕೊಂಡು ಹೋಗಬಹುದಾಗಿತ್ತು. ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಎಲ್ಲ ಕಡೆ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಆದ್ದರಿಂದ, ಪ್ರತ್ಯೇಕ ವಾಹನದಲ್ಲಿ ಭದ್ರತಾ ಅಧಿಕಾರಿಗಳ ನೆರವಿನೊಂದಿಗೆ ಹಣ ತೆಗೆದುಕೊಂಡು ಹೋಗಲಾಗುತ್ತಿದೆ.

ಚೆಕ್‌ ಪೋಸ್ಟ್‌ಗಳಲ್ಲಿ ಕಡ್ಡಾಯವಾಗಿ ದಾಖಲೆಗಳನ್ನು ತೋರಿಸಬೇಕು. ದಾಖಲೆ ತೋರಿಸಿದರೂ ವಾಹನದಲ್ಲಿ ಇರುವ ಹಣ ಎಣಿಸುವ ವೇಳೆಗೆ ಆರೇಳು ಗಂಟೆ ಕಳೆದು ಹೋಗುತ್ತಿದೆ. ಕೆಲವು ಸಲ ಐದಾರು ದಿನಗಳು ಕೂಡ ಆಗಿದೆ. ಆದ್ದರಿಂದ, ಮೊದಲಿನ ಹಾಗೆ ನಿಗದಿತ ಅವಧಿಯಲ್ಲಿ ಎಟಿಎಂಗಳಿಗೆ ಹಣ ಮುಟ್ಟಿಸಲು ಭದ್ರತಾ ಸಿಬ್ಬಂದಿಗೆ ಸಾಧ್ಯವಾಗುತ್ತಿಲ್ಲ.

ADVERTISEMENT

‘ಚುನಾವಣೆ ಇರುವುದರಿಂದ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆಗೆ ಒಳಗಾಗಲೇಬೇಕು. ದಾಖಲೆಯಲ್ಲಿ ಇರುವಷ್ಟೇ ಹಣ ವಾಹನದಲ್ಲಿದ್ದರೂ, ತಪಾಸಣಾ ಅಧಿಕಾರಿಗಳು ಬೇಗನೆ ಬಿಡುವುದಿಲ್ಲ. ಹಣ ಎಣಿಕೆ ಮಾಡಲು ಅನೇಕ ಬಾರಿ ಜಿಲ್ಲಾಧಿಕಾರಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಹೀಗಾಗಿ, ಕನಿಷ್ಠ ಐದಾರು ಗಂಟೆ ಬೇಕಾಗುತ್ತಿದೆ. ಅಲ್ಲಲ್ಲಿ ಚೆಕ್‌ಪೋಸ್ಟ್‌ಗಳು ಇರುವುದರಿಂದ ಸಮಸ್ಯೆಯಾಗುತ್ತಿದೆ. ಜನ ಸಾಮಾನ್ಯರಿಗೂ ತೊಂದರೆಯಾಗುತ್ತಿದೆ’ ಎಂದು ಜಿಲ್ಲಾ ಲೀಡ್‌ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಕೆ. ಈಶ್ವರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇತ್ತೀಚೆಗೆ ಕೆನರಾ ಬ್ಯಾಂಕ್‌ ಎಟಿಎಂಗಳಿಗೆ ಹಣ ತೆಗೆದುಕೊಂಡು ಹೋಗುತ್ತಿದ್ದಾಗ ತಪಾಸಣಾ ಅಧಿಕಾರಿಗಳು ಚೆಕ್‌ಪೋಸ್ಟ್‌ನಲ್ಲಿ ತಡೆದರು. ಹಣ ವಾಪಸ್‌ ನೀಡಲು ಐದು ದಿನ ತೆಗೆದುಕೊಂಡರು. ಇದರಿಂದ ಬ್ಯಾಂಕಿನ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಅಷ್ಟೂ ದಿನ ಪೊಲೀಸ್‌ ಠಾಣೆಗೆ ಅಲೆಯಬೇಕಾಯಿತು’ ಎಂದರು.

ಬಹುತೇಕ ಎಟಿಎಂಗಳು ಖಾಲಿ:

ದೇಶಪಾಂಡೆ ನಗರ, ಗೋಕುಲ ರಸ್ತೆ, ಕೇಶ್ವಾಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿನ ಎಟಿಎಂಗಳ ಮುಂದೆ ‘ನೋ ಕ್ಯಾಶ್‌’ ಬೋರ್ಡ್‌ ಹಾಕಲಾಗಿತ್ತು. ‘ನಾಲ್ಕೈದು ದಿನಗಳ ಹಿಂದೆ ಎಟಿಎಂಗಳಲ್ಲಿ ಹಣ ದೊರೆಯುತ್ತಿರಲಿಲ್ಲ. ಈಗ ಪರಿಹಾರವಾಗಿದೆ. ಪ್ರತಿ ತಿಂಗಳ ಮೊದಲ 15 ದಿನ ಎಷ್ಟೇ ಹಣ ಹಾಕಿದರೂ ಬೇಗನೆ ಖಾಲಿಯಾಗುತ್ತದೆ. ನಂತರದ 15 ದಿನ ನಿಧಾನವಾಗಿ ಖಾಲಿಯಾಗುತ್ತದೆ. ಬ್ಯಾಂಕ್‌ಗಳಿಗೆ ಸತತ ರಜೆ ಇದ್ದಾಗಲೂ ಕೆಲವೊಮ್ಮೆ ಸಮಸ್ಯೆಯಾಗುತ್ತಿದೆ. ಈಗ ನಮ್ಮ ಶಾಖೆಯ ಎಟಿಎಂ ಯಂತ್ರಗಳು ಭರ್ತಿಯಾಗಿವೆ’ ಎಂದು ಶಿರೂರು ಪಾರ್ಕ್‌ನಲ್ಲಿರುವ ಎಸ್‌ಬಿಐ ಬ್ಯಾಂಕ್‌ ಶಾಖೆ ವ್ಯವಸ್ಥಾಪಕ ಅಭಿಷೇಕ್‌ ಶಹಾ ತಿಳಿಸಿದರು.

ದೇಶಪಾಂಡೆ ನಗರದ ಕರ್ಣಾಟಕ ಬ್ಯಾಂಕ್‌ ಎಟಿಎಂನ ಸಿಬ್ಬಂದಿಯೊಬ್ಬರು ‘ಬ್ಯಾಂಕ್‌ ಪಕ್ಕದಲ್ಲಿರುವ ಎಟಿಎಂಗಳಲ್ಲಿ ಹಣದ ಸಮಸ್ಯೆಯಾಗುತ್ತಿಲ್ಲ. ದೂರ ಇರುವ ಯಂತ್ರಗಳಲ್ಲಿ ಹಣ ತುಂಬುವುದು ತಡವಾಗುತ್ತಿದೆ. ಮೊದಲಿನ ಹಾಗೆ ಈಗ ಸಾಕಷ್ಟು ಹಣವನ್ನು ಜಮೆ ಮಾಡುತ್ತಿಲ್ಲ’ ಎಂದರು.

‘ಠೇವಣೆ ಮಾಡುವವರ ಸಂಖ್ಯೆಯೂ ಕಡಿಮೆ’

‘ಮೊದಲಾದರೆ ಎಟಿಎಂಗಳಲ್ಲಿ ಹಾಕಿದ ಹಣ ಮರುದಿನ ಬ್ಯಾಂಕ್‌ಗೆ ಜಮೆಯಾಗುತ್ತಿತ್ತು. ಈಗ ದಿನವೂ ಪ್ರತಿ ಎಟಿಎಂಗೆ ₹ 20ರಿಂದ ₹ 30 ಲಕ್ಷ ಹಣ ಜಮೆ ಮಾಡಿದರೂ ಅರ್ಧ ದಿನದಲ್ಲಿ ಖಾಲಿಯಾಗುತ್ತಿದೆ. ಮರಳಿ ಬ್ಯಾಂಕ್‌ಗೆ ಹಣ ಬರುತ್ತಿಲ್ಲ’ ಎಂದು ಈಶ್ವರ್ ತಿಳಿಸಿದರು. ‘ಬ್ಯಾಂಕ್‌ಗೆ ಹಣ ಬಂದರೆ ಅದನ್ನೇ ಮರಳಿ ಎಟಿಎಂಗೆ ಹಾಕಲು ಸಾಧ್ಯವಾಗುತ್ತಿತ್ತು. ಈಗ ಎಲ್ಲಿಯೂ ಹಣವೇ ಇಲ್ಲದಂತಾಗಿದೆ. ಹಣ ಏನಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ’ ಎಂದರು.

**

ಅಗತ್ಯ ದಾಖಲೆಗಳನ್ನು ತೋರಿಸಿದರೂ ಚೆಕ್‌ ಪೋಸ್ಟ್‌ನಲ್ಲಿರುವ ಅಧಿಕಾರಿಗಳು ಬಿಡುತ್ತಿಲ್ಲ ಎಂದು ಬ್ಯಾಂಕ್‌ನ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ನಿತ್ಯ ದೂರುತ್ತಿದ್ದಾರೆ – ಕೆ.ಈಶ್ವರ್‌, ಮುಖ್ಯ ವ್ಯವಸ್ಥಾಪಕ, ಜಿಲ್ಲಾ ಲೀಡ್‌ ಬ್ಯಾಂಕ್‌.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.