ADVERTISEMENT

ಎರಡು ಕ್ಷೇತ್ರಗಳಲ್ಲಿ ನಾಲ್ಕು ನಾಮಪತ್ರಗಳು ತಿರಸ್ಕೃತ

ಟೆಂಗಿನಕಾಯಿ, ಹುಣಸಿಮರದ ನಾಮಪತ್ರ ಅಸಿಂಧು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 10:24 IST
Last Updated 26 ಏಪ್ರಿಲ್ 2018, 10:24 IST

ಧಾರವಾಡ: ಹುಬ್ಬಳ್ಳಿ– ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಒಂದು ಹಾಗೂ ಕಲಘಟಗಿ ಕ್ಷೇತ್ರದಲ್ಲಿ ಮೂವರು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿವೆ.

ಏಳು ವಿಧಾನಸಭಾ ಕ್ಷೇತ್ರಗಳಲ್ಲಿ 123 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರಕ್ಕೆ ಜೆಡಿಎಸ್‌ ಅಭ್ಯರ್ಥಿಯಾಗಿ ಗುರುರಾಜ ಹುಣಸಿಮರದ ಅವರ ನಾಮಪತ್ರ ತಿರಸ್ಕೃತಗೊಂಡಿದೆ. 10 ಜನ ಸೂಚಕರಿಲ್ಲದ ಕಾರಣ ನಾಮಪತ್ರ ತಿರಸ್ಕರಿಸಲಾಗಿದೆ. ಜೆಡಿಎಸ್‌ ಇನ್ನೊಬ್ಬ ಅಭ್ಯರ್ಥಿ ಅಲ್ತಾಫ್‌ ಕಿತ್ತೂರ ಕಣದಲ್ಲಿ ಉಳಿದಿದ್ದಾರೆ.

‘ಕಲಘಟಗಿ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದ 19 ಅಭ್ಯರ್ಥಿಗಳ ಪೈಕಿ ಮೂವರು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿವೆ. 10 ಜನ ಸೂಚಕರಿಲ್ಲದ ಕಾರಣ ಪಕ್ಷೇತರ ಅಭ್ಯರ್ಥಿಗಳಾದ ವೀರಭದ್ರಯ್ಯ ಹೊಸಹಳ್ಳಿಮಠ ಹಾಗೂ ಮೋಹನದಾಸ ಲಕ್ಷ್ಮಣರಾವ್ ಬಾಂಬುಲೆ ಅವರ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ.

ADVERTISEMENT

ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ಮಹೇಶ ಟೆಂಗಿನಕಾಯಿ ಅವರ ಬಿ–ಫಾರಂ ಅನ್ನು ಪಕ್ಷ ರದ್ದುಪಡಿಸಿದ್ದರಿಂದ ಅವರು ಉಮೇದುವಾರಿಕೆ ತಿರಸ್ಕೃತಗೊಂಡಿದೆ’ ಎಂದು ಚುನಾವಣಾಧಿಕಾರಿ ಡಾ. ಔದ್ರಾಮ ತಿಳಿಸಿದ್ದಾರೆ.

‘ನವಲಗುಂದ ವಿಧಾನಸಭಾ ಕ್ಷೇತ್ರದ ಎಲ್ಲಾ 18 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಕುಂದಗೋಳ ಕ್ಷೇತ್ರದ ಎಲ್ಲಾ 15 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದು, ಎಂಇಪಿಯಿಂದ ಇಬ್ಬರು ಅಭ್ಯರ್ಥಿಗಳು ಬಿ ಫಾರಂ ಸಲ್ಲಿಸಿದ್ದರು. ಮೊದಲು ಬಿ–ಫಾರಂ ಸಲ್ಲಿಸಿದ್ದ ಶೈಲಾ ಸುರೇಶ ಗೋಣಿ ಅವರನ್ನು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಪರಿಗಣಿಸಲಾಗಿದೆ. ನಂತರ ಸಲ್ಲಿಸಿದ ಲತಾ ಬುರುಚಿಯಾ ಪಟೇಲ್ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಪರಿಗಣಿಸಲಾಗಿದೆ’ ಎಂದು ಚುನಾವಣಾಧಿಕಾರಿ ಎಸ್‌.ಜಿ.ಕೊರವರ ತಿಳಿಸಿದ್ದಾರೆ.

ಧಾರವಾಡ ಕ್ಷೇತ್ರದ 10 ಅಭ್ಯರ್ಥಿಗಳ, ಹುಬ್ಬಳ್ಳಿ– ಧಾರವಾಡ ಪೂರ್ವ ಕ್ಷೇತ್ರದ 12, ಹುಬ್ಬಳ್ಳಿ– ಧಾರವಾಡ ಕೇಂದ್ರ ಕ್ಷೇತ್ರದ 30 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಶ್ರೀಕಾಂತ ಮಗಜಿಕೊಂಡಿ ಅವರು ಕೆಜೆಪಿ ಹಾಗೂ ಸಾಮಾನ್ಯ ಜನತಾ ಪಾರ್ಟಿಯಿಂದ ಎರಡು ಪ್ರತ್ಯೇಕ ನಾಮಪತ್ರಗಳನ್ನು ಸಲ್ಲಿಸಿದ್ದರು. ಮೊದಲು ಕೆಜೆಪಿಯಿಂದ ನಾಮಪತ್ರ ಸಲ್ಲಿಸಿದ್ದರಿಂದ ಕೆಜೆಪಿ ಅಭ್ಯರ್ಥಿ ಎಂದೇ ಪರಿಗಣಿಸಲಾಗಿದೆ’ ಎಂದು ಚುನಾವಣಾಧಿಕಾರಿ ಇಬ್ರಾಹಿಂ ಮೈಗೂರ ತಿಳಿಸಿದ್ದಾರೆ. ನಾಮಪತ್ರ ಹಿಂಪಡೆಯಲು ಏ. 27 ಕೊನೆಯ ದಿನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.