ADVERTISEMENT

ಒಡಲೆರಡು, ಜೀವವೊಂದೇ: ಕಣವಿ; ಶ್ರೇಷ್ಠ ಸಂಘಟಕ: ಕಲಬುರ್ಗಿ

60 ವರ್ಷದ ಒಡನಾಡಿ ಜಿಎಸ್‌ಎಸ್‌ ನಿಧನಕ್ಕೆ ಕಂಬನಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 7:16 IST
Last Updated 24 ಡಿಸೆಂಬರ್ 2013, 7:16 IST

ಧಾರವಾಡ: ‘ನನ್ನ ಮತ್ತು ಜಿ.ಎಸ್‌.ಶಿವರುದ್ರಪ್ಪ ಅವರ ಒಡನಾಟ 60 ವರ್ಷಗಳಷ್ಟು ಹಿಂದಿನದು. ಧಾರ­ವಾಡಕ್ಕೆ ಬಂದರೆಂದರೆ ನಮ್ಮ ಮನೆ­ಯಲ್ಲೇ ವಾಸ್ತವ್ಯ ಮಾಡುತ್ತಿದ್ದರು. ನನ್ನ ಅವರ ಒಡಲು ಎರಡಾಗಿದ್ದರೂ ಜೀವ ಒಂದೇಯಾಗಿತ್ತು’.

ಸೋಮವಾರ ನಿಧನ ಹೊಂದಿದ ಹಿರಿಯ ಕವಿ ಡಾ.ಜಿ.ಎಸ್‌.ಶಿವರುದ್ರಪ್ಪ ಅವರನ್ನು ನೆನೆದು ಕಣ್ಣೀರು ಹಾಕಿದ ಅವರ ಸ್ನೇಹಿತ ಡಾ.ಚನ್ನವೀರ ಕಣವಿ ಅವರು ಹಂಚಿಕೊಂಡ ಮಾತುಗಳು ಇಲ್ಲಿವೆ.

ಗುಗ್ಗರಿ ಶಿವರುದ್ರಪ್ಪ ಅವರ ಕವಿತೆ­ಗಳು ಪ್ರಕಟವಾಗುತ್ತಿದ್ದ ‘ಜೀವನ’, ‘ಜಯಂತಿ’, ‘ಪ್ರಬುದ್ಧ ಕರ್ನಾಟಕ’ ಪತ್ರಿಕೆಗಳಲ್ಲಿಯೇ ನನ್ನ ಕವಿತೆಗಳೂ ಪ್ರಕಟ­ವಾಗುತ್ತಿದ್ದವು. ಜಿಎಸ್‌ಎಸ್‌ ಎಂದಿಗೂ ಒಂದು ಪಂಥಕ್ಕೆ ಕಟ್ಟು­ಬೀಳ­ಲಿಲ್ಲ. ನವೋದಯ, ದಲಿತ, ಬಂಡಾಯ, ನವ್ಯ ಕಾವ್ಯ ಪಂಥದ ಉತ್ತಮ ಅಂಶಗಳನ್ನು ತಮ್ಮ ಬರಹ­ಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದರೇ ಹೊರತು ಒಂದು ನಿರ್ದಿಷ್ಟ ಪಂಥಕ್ಕೆ ಸೇರಿ­ಕೊಳ್ಳಲಿಲ್ಲ. ನನ್ನದೂ ಹಾಗೆಯೇ. ಆದ್ದರಿಂದಲೇ ಜನರು ನಮ್ಮಿಬ್ಬರನ್ನು ‘ಸಮನ್ವಯ ಕವಿ’ಗಳು ಎಂದೇ ಗುರುತಿ­ಸುತ್ತಿದ್ದರು.

ಬೆಂಗಳೂರು ವಿ.ವಿ.ಯಲ್ಲಿ ಕನ್ನಡ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿ ಅವರು ಕೈಗೊಂಡ ಸಾಹಿತ್ಯಕ ಕೈಂಕರ್ಯಗಳು ಅಷ್ಟಿಷ್ಟಲ್ಲ. ಹಾಗೆಯೇ ಸಾಹಿತ್ಯ ಅಕಾ­ಡೆಮಿ ಅಧ್ಯಕ್ಷರಾದಾಗಲೂ ಶಾಶ್ವತ ಯೋಜನೆಗಳನ್ನು ರೂಪಿಸಿದರು. ಅಪಾರ ಶಿಷ್ಯಬಳಗವನ್ನು ಹೊಂದಿದ್ದ ಜಿಎಸ್‌ಎಸ್‌ ಕುವೆಂಪು ಅವರ ನೆಚ್ಚಿನ ಶಿಷ್ಯ. ಅವರ ಉತ್ತರಾಧಿಕಾರಿ­ಯಂ­-ತೆಯೇ ಬೆಳೆದರು. ಕುವೆಂಪು ಮಾರ್ಗದರ್ಶನದಲ್ಲಿ ತಯಾರಿಸಿದ ‘ಸೌಂದರ್ಯ ಸಮೀಕ್ಷೆ’ ಪಿಎಚ್‌.ಡಿ. ಪ್ರಬಂಧ 7–8 ಮುದ್ರಣಗಳನ್ನು ಕಂಡಿದೆ. ಪಿಎಚ್‌.ಡಿ. ಪ್ರಬಂಧವೊಂದು ಮರುಮುದ್ರಣ ಕಾಣುವುದು ಎಂದರೆ ಆಶ್ಚರ್ಯವೇ.

ಶಿವರುದ್ರಪ್ಪ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸಂದರ್ಭದಲ್ಲಿ ಹೊರತಂದ ‘ಸಮಗ್ರ ಸಾಹಿತ್ಯ ಚರಿತ್ರೆ’ಯ ಸಂಪುಟಗಳು ಕನ್ನಡ ಸಾಹಿ­ತ್ಯಕ್ಕೆ ಒಂದು ಅನನ್ಯ ಕೊಡುಗೆ. ಅಲ್ಲದೇ, ಜನಸಾಮಾನ್ಯರಿಗೆ ಅರ್ಥ­ವಾಗ­ಲೆಂದೇ ‘ಜನ­ಸಾಮಾನ್ಯರಿಗಾಗಿ ಸಾಹಿತ್ಯ ಚರಿತ್ರೆ’ ಎಂಬ ಸಂಪುಟವನ್ನು ಪ್ರಕಟಿಸಿದರು.

ಎಲ್ಲರ ಗೌರವಕ್ಕೂ ಪಾತ್ರರಾದ ಜಿಎಸ್‌ಎಸ್‌ ಧಾರವಾಡಕ್ಕೆ ಬಂದಾಗ ರೊಟ್ಟಿ ಊಟವನ್ನು ಪ್ರೀತಿಯಿಂದ ಸೇವಿಸುತ್ತಿದ್ದರು. ಹಿರಿಯ ಸಾಹಿತಿ­ಯಾಗಿದ್ದ ಅವರದು ದೊಡ್ಡ ಬದುಕು.

‘ಘನವೆತ್ತ ಪ್ರಾಧ್ಯಾಪಕ’
‘ಜಿ.ಎಸ್‌.ಶಿವರುದ್ರಪ್ಪ ಹಾಗೂ ನನಗೆ ಒಂದು ತಲೆಮಾರಿನಷ್ಟು ಅಂತರ. ಡಾ.ಚನ್ನವೀರ ಕಣವಿ ಅವರ ಮನೆಗೆ ಬಂದಾಗ ಅವರನ್ನು ಭೇಟಿಯಾಗಿದ್ದೇನೆ. ಅವರದೇ ತಲೆಮಾರಿನವರಾದ ಕಣವಿ­ಯವರಷ್ಟು ಸಲುಗೆ ಇರಲಿಲ್ಲ. ಆದರೆ, ಹತ್ತಿರದಿಂದ ನಾನು ಗಮನಿಸಿದಂತೆ ಅವರೊಬ್ಬ ಘನವೆತ್ತ ಪ್ರಾಧ್ಯಾಪಕ, ಸರ್ವಶ್ರೇಷ್ಠ ಸಂಘಟಕ, ಉತ್ತಮ ಕವಿಯಾಗಿಯೂ ಉತ್ತಮ ವಿಮರ್ಶೆ, ಗಟ್ಟಿತನದ ಗದ್ಯಗಳನ್ನು ಬರೆಯಬಲ್ಲ ಸಮರ್ಥ’ ಎಂದು ಹಿರಿಯ ವಿಮರ್ಶಕ ಡಾ.ಎಂ.ಎಂ.ಕಲಬುರ್ಗಿ ಹೇಳಿದರು.

‘ಸಾಮಾನ್ಯವಾಗಿ ಉತ್ತಮ ಕವಿತೆ ಬರೆಯುವವರು ಒಳ್ಳೆಯ ಗದ್ಯ ಬರೆಯ­ಲಾರರು. ಆದರೆ, ಜಿ.ಎಸ್‌.ಎಸ್‌ ಅವರಿಗೆ ಈ ಕಲೆ ಸಿದ್ಧಿಸಿತ್ತು. ಬಹುತೇಕ ಸಾಹಿತಿಗಳಿಗೆ ಉತ್ತಮ ಆಡಳಿತ ಮಾಡು­ವುದು ಗೊತ್ತಿರುವುದಿಲ್ಲ. ಜಿಎಸ್‌ಎಸ್‌ ಈ ಮಾತಿಗೂ ಅಪವಾದ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ, ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿ ಉತ್ತಮ ಆಡ­ಳಿತ ಮಾಡಿದರು. ಇಂತಹ ಮಹೋ­ನ್ನತ ಸಾಹಿತಿಗೆ ಜ್ಞಾನಪೀಠ ದೊರೆಯ­ಬೇಕಿತ್ತು’ ಎಂದು ಅವರು ಹೇಳಿದರು.

ಶ್ರದ್ಧಾಂಜಲಿ
ಧಾರವಾಡ: 
ಡಾ.ಜಿ.ಎಸ್.ಶಿವರುದ್ರಪ್ಪ ಅವರಿಗೆ ‘ಧಾರವಾಡ ಸಾಹಿತ್ಯ ಸಂಭ್ರಮ’ ಶ್ರದ್ಧಾಂಜಲಿ ಸಲ್ಲಿಸಿತು.

ಸಂಭ್ರಮದ ಅಧ್ಯಕ್ಷ ಗಿರಡ್ಡಿ ಗೋವಿಂದ­ರಾಜ, ಡಾ.ಚನ್ನವೀರ ಕಣವಿ, ಡಾ.ಎಂ.ಎಂ.ಕಲಬುರ್ಗಿ, ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ.ಶ್ಯಾಮಸುಂದರ ಬಿದರ­­ಕುಂದಿ, ಡಾ.ಬಾಳಣ್ಣ ಶೀಗಿಹಳ್ಳಿ, ಮಲ್ಲಿಕಾರ್ಜುನ ಹಿರೇಮಠ, ಸುಕನ್ಯಾ, ಡಾ.ಹ.ವೆಂ.ಕಾಖಂಡಿಕಿ, ಎ.ಎಂ.ಖಾನ್, ಡಾ.ಶಶಿಧರ ತೋಡಕರ, ವೆಂಕಟೇಶ ಮಾಚಕನೂರ, ವೆಂಕಟೇಶ ದೇಸಾಯಿ, ಆರ್.ಕೆ.ಅಂಬೇಕರ, ಆರ್ಯ ಆಚಾರ್ಯ, ರಮಾಕಾಂತ ಜೋಶಿ, ಸಮೀರ ಜೋಶಿ, ಸಮುದ್ರ ಪಟ್ಟಣಶೆಟ್ಟಿ, ಅಶೋಕ ನಿಂಗೋಲಿ, ಹನುಮಂತ ಮೇಲಿನಮನಿ ಶ್ರದ್ಧಾಂಜಲಿ ಸಲ್ಲಿಸಿದರು.

ಕವಿವಿ ಸಂತಾಪ: ಶಿವರುದ್ರಪ್ಪ ಅವರ ನಿಧನಕ್ಕೆ ಕರ್ನಾಟಕ ವಿವಿ ಶೋಕ ವ್ಯಕ್ತಪಡಿಸಿತು. ಸೆನೆಟ್ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಕನ್ನಡ ಪ್ರಾಧ್ಯಾಪಕ ಡಾ.ಜೆ.ಎಂ.ನಾಗಯ್ಯ ಮಾತನಾಡಿ, ‘ಕನ್ನಡ ಸಾಹಿತ್ಯ ಲೋಕಕ್ಕೆ ಜಿಎಸ್ಎಸ್ ಅವರ ಕೊಡುಗೆ ಅಪಾರವಾದದ್ದು. ಕವನ, ವಿಮರ್ಶೆ ಹಾಗೂ ಗದ್ಯ ಸಾಹಿತ್ಯ ಪ್ರಕಾರಗಳಲ್ಲಿ ಅವರ ಅಮೂಲ್ಯ ರಚನೆಗಳು ಸಾಹಿತ್ಯಾಸಕ್ತರಿಗೆ ಹಾಗೂ ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಿಗೆ ಉಪ­ಯುಕ್ತ ಕೊಡುಗೆಗಳು. ಅವರ ಪ್ರತಿಭೆ ಹಾಗೂ ಲೋಕಾನುಭವಗಳು ಸಾವಿ­ರಾರು ಸಾಹಿತ್ಯ ವಿದ್ಯಾರ್ಥಿಗಳಿಗೆ ಮಾದರಿ­ಯಾಗಿವೆ’ ಎಂದರು.

ಸಂತಾಪ ಸೂಚಕ ಗೊತ್ತುವಳಿಯನ್ನು ಕುಲಸಚಿವೆ ಡಾ.ಚಂದ್ರಮಾ ಕಣಗಲಿ ಓದಿದರು. ಹಣಕಾಸು ಅಧಿಕಾರಿ ರಾಜಶ್ರೀ ವೇದಿಕೆಯಲ್ಲಿದ್ದರು.

ಜಿಎಸ್ಎಸ್‌ ಅವರ ನಿಧನಕ್ಕೆ ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಕಸಾಪ ಜಿಲ್ಲಾ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಮಾಜಿ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.