ADVERTISEMENT

ಕಾಲುವೆಗೆ ನೀರು ಹರಿಸಲು ಒಮ್ಮತದ ನಿರ್ಣಯ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 7:06 IST
Last Updated 10 ನವೆಂಬರ್ 2017, 7:06 IST

ನವಲಗುಂದ: ಪ್ರಸ್ತುತ ಶೇ 90ರಷ್ಟು ಬಿತ್ತನೆ ಕಾರ್ಯ ಮುಗಿದಿದ್ದು ಬೆಳೆಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಮುಂಬರುವ ದಿನಗಳಲ್ಲಿ ಬೆಳೆಗಳಿಗೆ ತೇವಾಂಶದ ಕೊರತೆಯಾಗದಿರಲು ಮಲಪ್ರಭಾ ಕಾಲುವೆಗೆ ನೀರು ಹರಿಸಲು ಗುರುವಾರ ನಡೆದ ತಾಲ್ಲೂಕು ಪಂಚಾಯ್ತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.

‘ಈ ವರ್ಷವಾದರೂ ಹಿಂಗಾರಿನಲ್ಲಿ ರೈತರಿಗೆ ಯಾವುದೇ ಹಾನಿ ಸಂಭವಿಸದಂತೆ ಎಲ್ಲ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕಾಗಿದೆ. ಅದರಲ್ಲಿಯೂ ನೀರಾವರಿ ಇಲಾಖೆಯ ಅಧಿಕಾರಿಗಳು ಕಾಲುವೆಗೆ ನೀರು ಹರಿಸುವುದಕ್ಕಿಂತಲೂ ಪೂರ್ವದಲ್ಲಿಯೇ ಮುನ್ನೆಚ್ಚರಿಕೆ ವಹಿಸಿ ಕಾಲುವೆಗಳನ್ನು ದುರಸ್ತಿ ಮಾಡಿ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಶಾಸಕ ಎನ್.ಎಚ್.ಕೋನರಡ್ಡಿ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

‘ಬಹುತೇಕ ರೈತರು ಸಕಾಲದಲ್ಲಿ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸುತ್ತಿದ್ದಾರೆ. ಈ ಕುರಿತು ಮಲಪ್ರಭಾ ನೀರು ಬಳಕೆದಾರರ ಮಹಾಮಂಡಳಕ್ಕೆ ಈಗಾಗಲೇ ವಿಷಯವನ್ನು ತಿಳಿಸಲಾಗಿದ್ದು, ನ.10ರಂದು ಸಭೆ ಕರೆಯಲಾಗಿದೆ. ಸಭೆಯಲ್ಲಿ ಕಾಲುವೆಗೆ ನೀರು ಹರಿಸುವ ಕುರಿತು ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ನ. 20ರ ಒಳಗಾಗಿ ನೀರು ಹರಿಸುವಂತೆ ಒತ್ತಡ ಹೇರಲಾಗಿದ್ದು ಸಭೆಯ ತಿರ್ಮಾನವನ್ನು ತಿಳಿದುಕೊಂಡು ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಗುವುದು’ ತಿಳಿಸಿದರು.

ADVERTISEMENT

ಸಹಾಯಕ ಕೃಷಿ ನಿರ್ದೇಶಕ ವಸಂತ ಅರಭಾವಿ ‘ತಾಲ್ಲೂಕಿನಲ್ಲಿ ಹಿಂಗಾರು ಮಳೆ ಉತ್ತಮವಾಗಿದ್ದರಿಂದ 37 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ, 15 ಸಾವಿರ ಹೆಕ್ಟೇರ್‌ನಲ್ಲಿ ಗೋದಿ, 25 ಸಾವಿರ ಹೆಕ್ಟೇರ್ನಲ್ಲಿ ಜೋಳ, 2,500 ಹೆಕ್ಟೇರ್‌ನಲ್ಲಿ ಕುಸುಬೆ ಹಾಗೂ 450 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಲಾಗಿದೆ. ಇನ್ನು ಶೇ10 ರಷ್ಟು ಬಿತ್ತನೆ ಕಾರ್ಯ ಬಾಕಿ ಉಳಿದಿದೆ’ ಎಂದು ಮಾಹಿತಿ ನೀಡಿದರು.

‘ಆಶ್ರಯ ಮನೆ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಪುರಸಭೆಯವರು ರಾಜಕೀಯ ಮಾಡುತ್ತಿರುವುದರಿಂದ ಆಯ್ಕೆ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸದೇ ಇರುವುದರಿಂದ ನಿವೇಶನ ಹಂಚಿಕೆ ವಿಳಂಬವಾಗಿದೆ. ಅಂತಿಮಗೊಂಡ ಫಲಾನುಭವಿಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸದಿದ್ದರೆ ಅಮಾನತುಗೊಳಿಸುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಉಮಾ ಪಾಳೆಗಾರ ಅವರಿಗೆ ಎಚ್ಚರಿಕೆ ನೀಡಿದರು.

ಶ್ರೀಕಂಠಶಾಸ್ತ್ರೀ ಕಲಾಭವನ ನಿರ್ಮಾಣಕ್ಕೆ ಟೆಂಡರ್ ಕರೆಯುವುದು, ಜೋಶಿ ಪ್ಲಾಟ್‌ನಲ್ಲಿ ಮೂಲ ಸೌಕರ್ಯಗಳ ಕೊರತೆ ಉಂಟಾಗಿರುವ ಬಗ್ಗೆ, ಭೂಸೇನಾ ನಿಗಮದವರು ಮಾಡುತ್ತಿರುವ ಕಾಮಗಾರಿಗಳು ಕುಂಟಿತಗೊಂಡಿರವ ಬಗ್ಗೆ, ಅಂಗನವಾಡಿ ಕಟ್ಟಡಗಳ ಬಗ್ಗೆ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕುಂಠಿತಗೊಂಡಿರುವ ಬಗ್ಗೆ, ಇಂದಿರಾ ಕ್ಯಾಂಟಿನ್ ಆರಂಭಿಸಲು ನಿವೇಶನ ಆಯ್ಕೆ ಮಾಡುವ ಕುರಿತು ಚರ್ಚಿಸಲಾಯಿತು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ವೆಂಕಮ್ಮ ಚಾಕಲಬ್ಬಿ, ಉಪಾಧ್ಯಕ್ಷ ಯೋಗಪ್ಪ ಗೋಲನಾಯ್ಕರ್, ತಹಶೀಲ್ದಾರ್ ನವೀನ ಹುಲ್ಲೂರ, ತಾಲ್ಲೂಕಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಡಿ.ಜೋಶಿ, ಸ್ಥಾಯಿ ಸಮಿತಿ ಅಧ್ಯಕ್ಷ ವೀರಪ್ಪ ನಾಯ್ಕರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.