ADVERTISEMENT

ಕಿಮ್ಸ್‌ ಆವರಣದಲ್ಲಿ ಮತ್ತೆ ಸಂಚಲನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2017, 6:39 IST
Last Updated 18 ಮಾರ್ಚ್ 2017, 6:39 IST

ಹುಬ್ಬಳ್ಳಿ: ನಗರದ ಕರ್ನಾಟಕ ವೈದ್ಯ­ಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಆವರ­ಣದಲ್ಲಿ ಮತ್ತೆ ಸಂಚಲನ ಉಂಟಾಗಿದೆ. ನಿರ್ದೇಶಕ ಡಾ.ಡಿ.ಡಿ.ಬಂಟ್ ಅವರ ನೇಮಕಾತಿಯನ್ನು ಹೈಕೋರ್ಟ್‌ ವಜಾ ಮಾಡಿರುವುದರಿಂದ ಎರಡು ವರ್ಷ ಎರಡು ತಿಂಗಳ ನಂತರ ಮತ್ತೆ ಹೊಸ ನಿರ್ದೇಶಕರ ಸ್ವಾಗತಕ್ಕೆ ಸಂಸ್ಥೆ ಸಜ್ಜಾಗಬೇಕಾಗಿದೆ. ಸೇವಾ ಹಿರಿತನ ಮತ್ತು ಅನುಭವ ಲೆಕ್ಕಿಸದೆ ನೇಮಕಾತಿ ನಡೆದಿದೆ ಎಂದು ಕಿಮ್ಸ್ ಆವರಣದಲ್ಲಿ ಕೇಳಿ ಬರುತ್ತಿದ್ದ ಗುಸುಗುಸು ಮಾತಿಗೂ ವಿರಾಮ ಸಿಗಲಿದೆ.

ಸಹೋದ್ಯೋಗಿಗಳು ಮತ್ತು ಆಡಳಿತ ಯಂತ್ರದ ಕೆಂಗಣ್ಣಿಗೆ ಗುರಿಯಾಗಿದ್ದರೂ ಅಧಿಕಾರದ ಅವಧಿ ಪೂರ್ಣಗೊಳಿಸಿ ನಿವೃತ್ತರಾದ ಡಾ.ವಸಂತಾ ಕಾಮತ್ ಅವರ ನಂತರ 2015ರ ಜನವರಿ 23ರಂದು ಡಿ.ಡಿ.ಬಂಟ್ ಅವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡ­ಲಾಗಿತ್ತು. ಇದರೊಂದಿಗೆ ಅಪಸ್ವರಗಳೂ ಕೇಳಿ ಬಂದಿದ್ದವು. ನಿರ್ದೇಶಕ ಸ್ಥಾನದ ಆಕಾಂಕ್ಷಿಯಾಗಿದ್ದ ಪೆಥಾಲಜಿ ವಿಭಾಗದ ಮುಖ್ಯಸ್ಥೆ ಡಾ.ಸುಜಾತಾ ಗಿರಿಯನ್ ನ್ಯಾಯಾಯಲದ ಕದವನ್ನೂ ತಟ್ಟಿದ್ದರು. ಬಂಟ್‌ ಅವರ ನೇಮಕಾತಿ ವಿಧಾನಮಂಡಲ ಅಧಿವೇಶನದಲ್ಲೂ ಪ್ರತಿಧ್ವನಿಸಿತ್ತು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಈ ನೇಮಕಾತಿಯನ್ನು ಪ್ರಶ್ನಿಸಿದ್ದರು.

ಇದೇ ವೇಳೆ ನೇಮಕಾತಿ ವಿವಾದದ ಬಗ್ಗೆ ಪರಿಶೀಲನೆ ನಡೆಸಲು ಡಾ.ಸಚ್ಚಿದಾನಂದ (ಈಗಿನ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ) ಡಾ.ದೇವದಾಸ್ ಮತ್ತು ಡಾ. ಆಶಾ ಅವರನ್ನು ಒಳಗೊಂಡ ಸಮಿತಿಯನ್ನು ಸರ್ಕಾರ ನೇಮಕ ಮಾಡಿತ್ತು. ನೇಮಕಾತಿ ಕುರಿತು ಸಮಿತಿ ನಕಾರಾತ್ಮಕ ವರದಿಯನ್ನು ನೀಡಿತ್ತು. ಆದರೂ ಬಂಟ್ ಅವರನ್ನು ತೆಗೆದು ಹಾಕಲು ಸರ್ಕಾರ ಮುಂದಾಗಲಿಲ್ಲ ಎಂದು ಸುಜಾತಾ ಗಿರಿಯನ್ ಆರೋಪಿಸಿದ್ದರು.

ADVERTISEMENT

ಲಾಬಿ ಆರಂಭ ಸಾಧ್ಯತೆ
ಸಂಸ್ಥೆಗೆ ಮುಖ್ಯಸ್ಥರೇ ಇಲ್ಲದಾದ ಕಾರಣ ಶುಕ್ರವಾರ ಬೆಳಿಗ್ಗೆಯೇ ಪ್ರಭಾರ ನಿರ್ದೇಶಕರಾಗಿ ಸಂಸ್ಥೆಯ ಹಿರಿಯ­ರೊಬ್ಬರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸುವ ಸಾಧ್ಯತೆ ಇದೆ. ಫಿಜಿಯಾಲಜಿ ವಿಭಾಗದ ಪ್ರಾಧ್ಯಾಪಕ ಮತ್ತು ಕಿಮ್ಸ್ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಎಫ್‌.ಕಮ್ಮಾರ, ಜೈವಿಕ ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಎಂ.ಸಿ.ಚಂದ್ರು ಅಥವಾ ಸುಜಾತಾ ಗಿರಿಯನ್ ಅವರಿಗೆ ಈ ಜವಾಬ್ದಾರಿ ಹೊರಿಸುವ ಸಾಧ್ಯತೆ ಇದೆ. ನಂತರ ಪೂರ್ಣ­ಕಾಲಿಕ ನಿರ್ದೇಶಕರ ನೇಮ­ಕಾತಿಗೆ ಸರ್ಕಾರ ಮುಂದಾಗಲಿದೆ. ಹೀಗಾಗಿ ಶುಕ್ರವಾರದಿಂದಲೇ ಲಾಬಿ ಆರಂಭವಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕಿಮ್ಸ್ ಆವರಣದಲ್ಲಿ ಗುರುವಾರ ಸಂಜೆ ಕೇಳಿಬರುತ್ತಿತ್ತು.

ಸಂಸ್ಥೆ ಸ್ವಾಯತ್ತ ಸ್ಥಾನ ಪಡೆಯುವುದಕ್ಕೆ ಮುನ್ನ ಇದ್ದ ಕೆಎಂಸಿಯ (ಕರ್ನಾಟಕ ಮೆಡಿಕಲ್ ಕಾಲೇಜ್) ಸುಜಾತಾ ಗಿರಿಯನ್‌ ಮತ್ತು ಈಗಿನ ‘ಕಿಮ್ಸ್‌’ನ ಡಾ.ಎಂ.ಸಿ.ಚಂದ್ರು ಮತ್ತು ಡಾ.ಕೆ.ಎಫ್‌.ಕಮ್ಮಾರ ಅವರ ಪೈಕಿ ಯಾರಿಗೆ ನಿರ್ದೇಶಕ ಸ್ಥಾನ ಒಲಿಯಲಿದೆ ಎಂಬ ಕುತೂಹಲದ ಪ್ರಶ್ನೆಗಳೂ ಕಿಮ್ಸ್‌ನಲ್ಲಿ ಮೂಡತೊಡಗಿವೆ. ಕಳೆದ ಬಾರಿ ಸಂದರ್ಶನದಲ್ಲಿ ಎರಡನೇ ಸ್ಥಾನ ಗಳಿಸಿದ್ದ ಕಮ್ಮಾರ್‌ ಹೆಚ್ಚು ಭರವಸೆ­ಯಲ್ಲಿದ್ದಾರೆ. ಸರ್ಕಾರ ಕಳೆದ ಬಾರಿಯ ಪಟ್ಟಿಯನ್ನೇ ಮುಂದುವರಿಸುತ್ತದೆಯೋ ಅಥವಾ ಹೊಸತಾಗಿ ನೇಮಕಾತಿ ಆದೇಶ ಹೊರಡಿಸುತ್ತದೆಯೋ ಎಂಬ ಪ್ರಶ್ನೆಗೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

**

ಎರಡು ವರ್ಷಗಳಿಂದ ನಡೆಸಿದ ಹೋರಾಟದಲ್ಲಿ ನಾನು ಪ್ರತಿಪಾದಿಸಿದ ವಿಷಯ ಇಂದು ಸಾಬೀತಾಗಿದೆ. ಮುಂದೆ ಏನಾಗುತ್ತದೆಯೋ ಕಾದು ನೋಡಬೇಕಿದೆಯಷ್ಟೆ
–ಡಾ. ಸುಜಾತಾ ಗಿರಿಯನ್‌,
ಪೆಥಾಲಜಿ ವಿಭಾಗದ ಮುಖ್ಯಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.