ADVERTISEMENT

ಕೇಂದ್ರ ಸರ್ಕಾರ ವೈಫಲ್ಯಗಳ ಗೂಡು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 5:41 IST
Last Updated 9 ಸೆಪ್ಟೆಂಬರ್ 2017, 5:41 IST
ಕೇಂದ್ರ ಸರ್ಕಾರ ವೈಫಲ್ಯಗಳ ಗೂಡು
ಕೇಂದ್ರ ಸರ್ಕಾರ ವೈಫಲ್ಯಗಳ ಗೂಡು   

ಹುಬ್ಬಳ್ಳಿ: ‘ಪ್ರಧಾನಿ ನರೇಂದ್ರಮೋದಿ ಕೈಗೊಂಡ ನೋಟು ರದ್ದತಿಯಿಂದ ದೇಶದ ಆರ್ಥಿಕತೆಗೆ ಪೆಟ್ಟು ಬಿದ್ದಿದೆ. ರಫ್ತು ಪ್ರಮಾಣ ಕುಸಿದಿದೆ. ಕೇಂದ್ರ ಸರ್ಕಾರ ವೈಫಲ್ಯಗಳ ಗೂಡಿನಂತಾಗಿದೆ’ ಎಂದು ಸಂಸದ ಹಾಗೂ ಕೇಂದ್ರ ಸಂಸದೀಯ ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ. ವೀರಪ್ಪ ಮೋಯಿಲಿ ಟೀಕಿಸಿದರು.

‘ನೋಟು ರದ್ದುಗೊಂಡ ನಂತರ, ದೇಶದ ಆರ್ಥಿಕ ಬೆಳವಣಿಗೆ ದರ(ಜಿಡಿಪಿ) ಶೇ 1ರಿಂದ 2ರಷ್ಟು ಕುಸಿದಿದೆ. ಶೇ 1ರಷ್ಟು ಜಿಡಿಪಿ ಕುಸಿದರೆ, ದೇಶಕ್ಕೆ ₹1.58 ಲಕ್ಷ ಕೋಟಿ ನಷ್ಟವಾಗುತ್ತದೆ. ಮೋದಿಯವರ ಅವೈಜ್ಞಾನಿಕ ಕ್ರಮದಿಂದ ದೇಶಕ್ಕೆ ಅಂದಾಜು ₹3ಲಕ್ಷ ಕೋಟಿ ಆದಾಯ ನಷ್ಟವಾದಂತಾಗಿದೆ’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಕಪ್ಪುಹಣ, ನಕಲಿ ನೋಟುಗಳು, ಭ್ರಷ್ಟಾಚಾರ ಹಾಗೂ ಭಯೋತ್ಪಾದನೆಯನ್ನು ನೋಟು ರದ್ದತಿಯಿಂದ ತಡೆಗಟ್ಟಬಹುದು ಎಂದು ಮೋದಿ ಹೇಳಿದ್ದರು. ಆದರೆ, ಈಗ ಯಾವುದನ್ನೂ ನಿಯಂತ್ರಿಸಲು ಸಾಧ್ಯವಾಗಿಲ್ಲ. ಆದರೂ, ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.

ADVERTISEMENT

ಸಮತೋಲನವಿಲ್ಲದ ಸಂಪುಟ: ‘ಮೂರು ವರ್ಷಗಳಿಂದ ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿದ್ದವರನ್ನು ಸಂಪುಟದಿಂದ ಬಿಡಲಾಗಿದ್ದು, ಬೇರೆಯವರನ್ನು ಆ ಜಾಗಕ್ಕೆ ತರಲಾಗಿದೆ. ನಿರೀಕ್ಷಿತ ಉದ್ಯೋಗಾವಕಾಶ ಸೃಷ್ಟಿಯಾಗದ ಕಾರಣ ಮೋದಿ ಈ ನಿರ್ಧಾರ ತೆಗೆದು ಕೊಂಡಿದ್ದಾರೆ. ಅದೇ ರೀತಿ, ರಫ್ತು ಪ್ರಮಾಣ ಕುಸಿತವಾಗಿದ್ದರೂ, ವಾಣಿಜ್ಯ ಸಚಿವ ನಿರ್ಮಲಾ ಸೀತಾರಾಮನ್‌ ಅವರಿಗೆ ರಕ್ಷಣಾ ಸಚಿವರನ್ನಾಗಿಸುವ ಮೂಲಕ ಬಡ್ತಿ ನೀಡಿದ್ದಾರೆ’ ಎಂದು ಮೊಯಿಲಿ ವ್ಯಂಗ್ಯವಾಡಿದರು.

ಮಿಷನ್‌ 150ಯಿಂದ 30ಕ್ಕೆ: ‘ಬಿಜೆಪಿಯವರ ಮಿಷನ್‌ 150 ಈಗ ಮಿಷನ್‌ 30ಕ್ಕೆ ಬಂದು ನಿಂತಿದೆ. ಅಮಿತ್‌ಷಾ ಬಂದು ಹೋದರೂ ಏನು ಪ್ರಯೋಜನವಾಗುವುದಿಲ್ಲ. ಕಾಂಗ್ರೆಸ್‌ನಲ್ಲಿ ಅಂತಹ ನೂರು ಅಮಿತ್‌ಷಾಗಳಿದ್ದಾರೆ’ ಎಂದು ಮೊಯಿಲಿ ಹೇಳಿದರು. ‘ಪ್ರಧಾನಿ ಮೋದಿ ಅವರ ಅವನತಿ ಕರ್ನಾಟಕ ಚುನಾವಣೆಯಿಂದಲೇ ಪ್ರಾರಂಭವಾಗುತ್ತದೆ’ ಎಂದರು.

ಬಾಹುಬಲಿ ಕುರಿತು ಕೃತಿ ರಚನೆ: ‘ಜೈನರ ಬಾಹುಬಲಿಗೆ ಈವರೆಗೂ ಯಾರೂ ಕಾವ್ಯನ್ಯಾಯ ಒದಗಿಸಿಲ್ಲ. ನೀವು ಈ ಕುರಿತು ಕೃತಿ ರಚಿಸಿ ಎಂದು ಜೈನಮುನಿಗಳು ಸಲಹೆ ನೀಡಿದ್ದರು. ಅದರಂತೆ ‘ಬಾಹುಬಲಿ ಅಹಿಂಸಾ ದಿಗ್ವಿಜಯ’ ಕೃತಿ ರಚಿಸಿದ್ದು, ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು’ ಎಂದರು.

ಗಲಭೆ ತಪ್ಪಿಸಿದ್ದೇವೆ: ‘ಹರ್ಯಾಣದಲ್ಲಿ ರಾಮ್‌ರಹೀಂ ಸಿಂಗ್‌ನಂತಹ ಅತ್ಯಾಚಾರಿಗೆ ಅಲ್ಲಿನ ಬಿಜೆಪಿ ಸರ್ಕಾರವೇ ಬೆಂಬಲ ಕೊಟ್ಟಿದೆ. ಅಂದು ಅಲ್ಲಿ ಗಲಭೆಯಾದಂತೆ, ಮಂಗಳೂರಿನಲ್ಲಿಯೂ ಗಲಭೆ ಮಾಡಿಸಲು ಬಿಜೆಪಿ ಯೋಚಿಸಿತ್ತು. ಅಲ್ಲಿ ಹೆಣಗಳು ಉರುಳಿ ದಂತೆ ಇಲ್ಲಿಯೂ ಹೆಣಗಳು ಉರುಳ ಬೇಕು ಎಂದು ಅದು ಬಯಸಿತ್ತು. ಹಾಗಾಗಿ, ಮಂಗಳೂರು ಚಲೋಗೆ ಬೈಕ್‌ ರ್‍್ಯಾಲಿ ನಡೆಸಲು ಅವಕಾಶ ನೀಡಲಿಲ್ಲ’ ಎಂದು ಮೊಯಿಲಿ ಹೇಳಿದರು.

‘ಪರಿಸ್ಥಿತಿಯನ್ನು ಗೃಹ ಸಚಿವ ರಾಮಲಿಂಗಾರೆಡ್ಡಿ ಅತ್ಯುತ್ತಮವಾಗಿ ನಿಭಾಯಿಸಿದರು. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ’ ಎಂದರು. ಶಾಸಕ ಪ್ರಸಾದ ಅಬ್ಬಯ್ಯ, ಕಾಂಗ್ರೆಸ್‌ ಮುಖಂಡ ಎಚ್.ವಿ. ಮಾಡಳ್ಳಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಹಾಜರಿದ್ದರು.

‘ದುಷ್ಕರ್ಮಿಗಳು ಶೀಘ್ರ ಪತ್ತೆ’
‘ವಿಚಾರವಾದಿ ಡಾ. ಎಂ.ಎಂ. ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ನಡುವೆ ಸಾಮ್ಯತೆ ಇದೆ. ದುಷ್ಕರ್ಮಿಗಳು ಅಡಗಿಕೊಂಡಿರುವ ಮಾಹಿತಿ ಇದ್ದು, ಎರಡೂ ಪ್ರಕರಣಗಳನ್ನು ಶೀಘ್ರದಲ್ಲಿಯೇ ಭೇದಿಸಲಾಗು ವುದು’ ಎಂದು ಅವರು ವೀರಪ್ಪ ಮೊಯಿಲಿ ತಿಳಿಸಿದರು.

‘ಆರ್‌ಎಸ್‌ಎಸ್‌ ವಿರುದ್ಧ ಬರೆಯದೇ ಇದ್ದಿದ್ದರೆ ಗೌರಿ ಲಂಕೇಶ್‌ ಬದುಕಿರುತ್ತಿದ್ದರು ಎಂಬ ಬಿಜೆಪಿ ಶಾಸಕ ಡಿ.ಎನ್. ಜೀವರಾಜ್‌ ಅವರ ಹೇಳಿಕೆ ಆ ಪಕ್ಷದ ಮನಸ್ಥಿತಿ ಹೇಗಿದೆ ಎಂಬುದನ್ನು ತೋರಿಸುತ್ತದೆ’ ಎಂದು ಅವರು ಟೀಕಿಸಿದರು.

ಸಿ.ಎಂ– ಪರಮೇಶ್ವರ್ ನಡುವೆ ಭಿನ್ನಾಭಿಪ್ರಾಯ ಇದ್ದದ್ದು ನಿಜ
ಹುಬ್ಬಳ್ಳಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ನಡುವೆ ಭಿನ್ನಾಭಿಪ್ರಾಯ ಇದ್ದದ್ದು ನಿಜ. ಈ ಕಾರಣದಿಂದಲೇ, ಸಚಿವರ ಪ್ರಮಾಣ ವಚನ ಕಾರ್ಯಕ್ರಮದಿಂದ ಪರಮೇಶ್ವರ ದೂರ ಉಳಿದಿದ್ದರು’ ಎಂದು ಸಂಸದ ಎಂ.ವೀರಪ್ಪ ಮೊಯಿಲಿ ಹೇಳಿದರು.

‘ನಾಯಕರ ನಡುವಿನ ಭಿನ್ನಾಭಿಪ್ರಾಯವನ್ನು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಶಮನಗೊಳಿಸಿದ್ದಾರೆ. ಬೇರೆ ಯಾವುದೇ ಪಕ್ಷದಲ್ಲಿ ಇರದಷ್ಟು ಒಗ್ಗಟ್ಟು ಈಗ ಕಾಂಗ್ರೆಸ್‌ನಲ್ಲಿದೆ’ ಎಂದು ಹೇಳಿದರು.

* * 

ರಾಜ್ಯ ಬಿಜೆಪಿಯಲ್ಲಿ ಒಳಜಗಳವಿದೆ. ಅವರಲ್ಲಿ ಒಗ್ಗಟ್ಟಿದ್ದಿದ್ದರೆ, ಅನಂತ ಕುಮಾರ ಹೆಗಡೆ ಬದಲು, ಪ್ರಹ್ಲಾದ ಜೋಶಿ ಅಥವಾ ಸುರೇಶ ಅಂಗಡಿ ಕೇಂದ್ರದಲ್ಲಿ ಸಚಿವರಾಗಿರುತ್ತಿದ್ದರು
ವೀರಪ್ಪ ಮೊಯಿಲಿ
ಸಂಸದ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.