ADVERTISEMENT

ಕೈಗಾರಿಕೆ ಅಭಿವೃದ್ಧಿಗೆ ಸರ್ಕಾರ ಬದ್ಧ: ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 7:06 IST
Last Updated 18 ನವೆಂಬರ್ 2017, 7:06 IST

ಧಾರವಾಡ: ‘ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರಗಳಿಂದ ಹೆಚ್ಚು ಉದ್ಯೋಗ ಸೃಷ್ಟಿಸಲು ಸಾಧ್ಯವಿದ್ದು, ಇಂಥ ಕೈಗಾರಿಕೆಗಳನ್ನು ಉತ್ತೇಜಿಸಲು ಸರ್ಕಾರ ಹಲವು ಯೋಜನೆ ರೂಪಿಸಿ ಅನುಷ್ಠಾನಗೊಳಿಸುತ್ತಿದೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಇಲ್ಲಿಗೆ ಸಮೀಪದ ಬೇಲೂರು ಕೈಗಾರಿಕಾ ಪ್ರದೇಶದ ಸಿಡಾಕ್‌ ಸಭಾಭವನದಲ್ಲಿ ಶುಕ್ರವಾರ ಕ್ರಿಟಿಕಲ್ ಇನ್‌ಫ್ರಾಸ್ಟಕ್ಚರ್ ಯೋಜನೆ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

‘ಯಾವುದೇ ಒಂದು ರಾಜ್ಯ, ದೇಶದಲ್ಲಿ ಕೈಗಾರಿಕೆಗಳು ಅಭಿವೃದ್ಧಿಯಾದರೆ ಆ ದೇಶ ಸಮೃದ್ಧವಾಗಿರುತ್ತದೆ. ದುಡಿಯುವ ಕೈಗಳಿಗೆ ಕೆಲಸ ದೊರೆಯುತ್ತದೆ. ಸರ್ಕಾರಕ್ಕೆ ಆದಾಯ ದೊರೆಯುತ್ತದೆ. ಆ ಆದಾಯದ ಮೂಲಕ ಜನ ಕಲ್ಯಾಣ ಕೆಲಸಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಹಿಂದೆ ಕೇಂದ್ರದಲ್ಲಿ ಹಣಕಾಸು ಸಚಿವರಾಗಿದ್ದ ಮನಮೋಹನ ಸಿಂಗ್, ಪ್ರಧಾನಿ ನರಸಿಂಹರಾವ್‌ ಅವರು ಉದಾರೀಕರಣ ನೀತಿಯನ್ನು ಒಪ್ಪಿಕೊಂಡರು. ಆಗ ಅದನ್ನು ಟೀಕಿಸಲಾಗುತ್ತಿತ್ತು. ಆದರೆ, ಇಂದು ಅಧಿಕಾರಕ್ಕೆ ಬರುತ್ತಿರುವ ಪ್ರತಿ ಸರ್ಕಾರಗಳೂ ಹೊಸ ನೀತಿಗಳನ್ನು ಜಾರಿಗೊಳಿಸುತ್ತಿವೆ. ಬದಲಾವಣೆ ತರುತ್ತಿವೆ. ಅದು ಅಗತ್ಯವೂ ಹೌದು, ಅನಿವಾರ್ಯವೂ ಹೌದು’ ಎಂದರು.

‘ಹಿಂದೆ ಉತ್ಪಾದಕರ ಏಕಸ್ವಾಮ್ಯತೆ ಇದ್ದುದರಿಂದ ಗ್ರಾಹಕರಿಗೆ ಆಯ್ಕೆಯ ಅವಕಾಶಗಳು ಇರಲಿಲ್ಲ. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೆಗಳು ಬರುತ್ತಿರುವುದರಿಂದ ಸ್ಪರ್ಧೆ ಏರ್ಪಟ್ಟಿದ್ದು, ಗ್ರಾಹಕರೇ ರಾಜರಾಗಿದ್ದಾರೆ. ಇಡೀ ವಿಶ್ವವೇ ಒಂದು ಗ್ರಾಮದ ಮಾದರಿಯಲ್ಲಿ ರೂಪುಗೊಂಡಿದ್ದು, ಗುಣಮಟ್ಟಕ್ಕೆ ಆದ್ಯತೆ ದಕ್ಕಿದೆ’ ಎಂದು ಹೇಳಿದರು.

’ಪ್ರತಿ ಕೈಗಾರಿಕೆಗಳೂ ಸ್ಪರ್ಧೆ, ಗುಣಮಟ್ಟ ಮತ್ತು ಗ್ರಾಹಕರ ವಿಶ್ವಾಸ ಉಳಿಸಿಕೊಂಡು ಬೆಳೆಯಬೇಕು. ಕೈಗಾರಿಕೆಗಳು ಬೆಳೆಯಬೇಕಾದರೆ ಅದಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕು. ನೀರು, ರಸ್ತೆ, ವಿದ್ಯುತ್‌ ನಂಥ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ರಾಜ್ಯ ಕಾಂಗ್ರೆಸ್‌ ಸರ್ಕಾರ ಕೈಗಾರಿಕಾ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣ ಮಾಡಲು ಬದ್ಧವಾಗಿದೆ’ ಎಂದರು.

‘ಪ್ರಸ್ತುತ ವೈಮಾನಿಕ, ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಯ ಅವಕಾಶವಿದೆ. ಈ ನಿಟ್ಟಿನಲ್ಲಿ ಯುವ ಉದ್ದಿಮೆದಾರರು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು, ರಾಜ್ಯ, ದೇಶದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು’ ಎಂದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕುವರೆ ವರ್ಷಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ ಕೈಗಾರಿಕೆ ಮೂಲ ಸೌಕರ್ಯ ಒದಗಿಸಲು ₹ 182 ಕೋಟಿ ಅನುದಾನ ಒದಗಿಸಲಾಗಿದೆ’ ಎಂದು ಸಚಿವ ದೇಶಪಾಂಡೆ ಹೇಳಿದರು. ಕಾರ್ಯಕ್ರಮದಲ್ಲಿ ಶಾಸಕ ಅರವಿಂದ ಬೆಲ್ಲದ, ಇಲಾಖೆ ಕಾರ್ಯದರ್ಶಿ ಡಿ.ವಿ.ಪ್ರಸಾದ, ದೀಪಕ ಚಿಂಚೋರೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಪ್ರಸ್ತುತ ವೈಮಾನಿಕ, ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಯ ಅವಕಾಶವಿದೆ. ಈ ನಿಟ್ಟಿನಲ್ಲಿ ಯುವ ಉದ್ದಿಮೆದಾರರು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು, ರಾಜ್ಯ, ದೇಶದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು ಎಂದರು.

ಹಿಂದೆ ಉತ್ಪಾದಕರ ಏಕಸ್ವಾಮ್ಯತೆ ಇದ್ದುದರಿಂದ ಗ್ರಾಹಕರಿಗೆ ಆಯ್ಕೆಯ ಅವಕಾಶಗಳು ಇರಲಿಲ್ಲ. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೆಗಳು ಬರುತ್ತಿರುವುದರಿಂದ ಸ್ಪರ್ಧೆ ಏರ್ಪಟ್ಟಿದ್ದು, ಗ್ರಾಹಕರೇ ರಾಜರಾಗಿದ್ದಾರೆ. ಇಡೀ ವಿಶ್ವವೇ ಒಂದು ಗ್ರಾಮದ ಮಾದರಿಯಲ್ಲಿ ರೂಪುಗೊಂಡಿದ್ದು, ಗುಣಮಟ್ಟಕ್ಕೆ ಆದ್ಯತೆ ದಕ್ಕಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕುವರೆ ವರ್ಷಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ ಕೈಗಾರಿಕೆ ಮೂಲ ಸೌಕರ್ಯ ಒದಗಿಸಲು ₹ 182 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.