ADVERTISEMENT

ಗುತ್ತಿಗೆ ಕಾರ್ಮಿಕ ಪದ್ಧತಿ ನಿಷೇಧಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಮೇ 2017, 6:45 IST
Last Updated 18 ಮೇ 2017, 6:45 IST

ಧಾರವಾಡ: ಮಹಾನಗರ ನೀರು ಸರಬರಾಜು ವಿಭಾಗದಲ್ಲಿನ ಗುತ್ತಿಗೆ ಕಾರ್ಮಿಕ ಪದ್ಧತಿ ನಿಷೇಧಿಸುವಂತೆ ಒತ್ತಾಯಿಸಿ ದಿನಗೂಲಿ ನೌಕರರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.

ದಿನಗೂಲಿ, ಗುತ್ತಿಗೆ ಹಾಗೂ ಹಂಗಾಮಿ ನೌಕರರ ಸಂಘದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರ 2006ರ ರಾಜ್ಯ ಪತ್ರದಲ್ಲಿ ಗುತ್ತಿಗೆ ಕಾರ್ಮಿಕ ಪದ್ಧತಿ ನಿಷೇಧಿಸುವಂತೆ ಜಲ ಮಂಡಳಿಗೆ ತಿಳಿಸಿದೆ. ಆದರೆ ಜಲ ಮಂಡಳಿ ಮಾತ್ರ ಗುತ್ತಿಗೆ ಕಾರ್ಮಿಕ ಪದ್ಧತಿಯನ್ನೇ ಮುಂದುವರಿಸಿದೆ. ಮೂರು ವರ್ಷಗಳ ಹಿಂದೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವು ಹೊರಡಿಸಿದೆ. ಆದರೂ ಜಲ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘24X7 ನೀರು ಸರಬರಾಜು ಯೋಜನೆಯನ್ನು ಜಲ ಮಂಡಳಿಗೆ ನೀಡಲಾಗಿದೆ. ಹೀಗಾಗಿ ಪ್ರಸ್ತುತ ಇರುವ 483 ನೌಕರರನ್ನು ಮಂಡಳಿಯಿಂದ ನೇರವಾಗಿ ಪಾಲಿಕೆಗೆ ಹಸ್ತಾಂತರಿಸಬೇಕು. ನೌಕರರ ಪಿಎಫ್ ಹಣವನ್ನು ಪಿಎಫ್ ಕಚೇರಿಗೆ ಭರಿಸದಿರುವ ಹಿಂದಿನ ಗುತ್ತಿಗೆದಾರರ ವಿರುದ್ಧ ಕೂಡಲೇ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಪಾಲಿಕೆ ಆಯುಕ್ತರು ಕಚೇರಿಯಿಂದ ನೇರವಾಗಿ ನೌಕರರ ವೇತನ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಸರ್ಕಾರ ಮತ್ತು ಜಿಲ್ಲಾಡಳಿತ ಬೇಡಿಕೆಗಳು ಈಡೇರಿಸುವವರೆಗೂ ಜಿಲ್ಲಾಧಿಕಾರಿ ಕಚೇರಿ ಮುಂದೆ ನಿರಂತರವಾಗಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಸಂಘದ ಅಶೋಕ ಬಡಶೆಟ್ಟಿ, ರುದ್ರಯ್ಯ ಹಿರೇಮಠ, ಎಂ.ಆರ್. ಪಾಟೀಲ, ಮಿಥುನ ದೇಶಪಾಂಡೆ,  ಶಿವಯೋಗಿ ಹಿರೇಮಠ, ಪ್ರವೀಣ ಖೈರೆ, ಮಹಾಂತೇಶ ಗೌಡರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.