ADVERTISEMENT

ಗ್ರಂಥಾಲಯಗಳಿಗೆ ಹೊಸರೂಪ: ತನ್ವೀರ್‌ ಸೇಠ್‌

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 8:33 IST
Last Updated 15 ನವೆಂಬರ್ 2017, 8:33 IST

ಧಾರವಾಡ:‘ಗ್ರಂಥಾಲಯಗಳನ್ನು ಮಾರ್ಗದರ್ಶನ ಕೇಂದ್ರಗಳಾಗಿ ಪರಿವರ್ತಿಸಿ ಹೊಸ ರೂಪ ನೀಡುವ ಕೆಲಸ ಆರಂಭವಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್‌ ಹೇಳಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು.

‘ರಾಜ್ಯದಲ್ಲಿ ಖಾಲಿ ಇರುವ 600 ಗ್ರಂಥಪಾಲಕರ ಹುದ್ದೆಗಳಲ್ಲಿ 39 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದ್ದು, ಮುಂದಿನ ವರ್ಷ ಇನ್ನೂ 300 ಹುದ್ದೆಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ವಿವಿಧ ಗ್ರಂಥಾಲಯಗಳಲ್ಲಿ ಗ್ರಂಥ ನಿರ್ವಹಣೆಗೂ ವಿಶೇಷ ಹುದ್ದೆಗಳನ್ನು ತುಂಬಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

ADVERTISEMENT

‘ರಾಜ್ಯದಲ್ಲಿ ಒಟ್ಟು 1203 ಪದವಿಪೂರ್ವ ಕಾಲೇಜುಗಳು ಇವೆ. ಇದರಲ್ಲಿ ಈಗಾಗಲೇ 236 ಕಾಲೇಜುಗಳಲ್ಲಿ ಗ್ರಂಥಾಲಯಗಳನ್ನು ಆರಂಭಿಸಲಾಗಿದೆ. ಈ ವರ್ಷ ಮತ್ತೆ 150 ಕಾಲೇಜುಗಳಲ್ಲಿ ಗ್ರಂಥಾಲಯ ಸ್ಥಾಪಿಸಲು ತೀರ್ಮಾನಿಸಲಾಗಿದೆ. ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರ ಶಾಲೆಗಳಿಗೆ ಗ್ರಂಥಾಲಯಗಳನ್ನು ನೀಡಲಾಗುತ್ತಿದೆ’ ಎಂದು ಅವರು ಹೇಳಿದರು.

‘ರಾಷ್ಟ್ರೀಯ ಗ್ರಂಥಾಲಯ ಪ್ರಾಧಿಕಾರ ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕದ ಗ್ರಂಥಾಲಯಗಳಿಗೆ ಪ್ರಥಮ ಸ್ಥಾನ ಲಭಿಸಿದೆ. 2016–17ನೇ ಸಾಲಿನಲ್ಲಿ 150ಕ್ಕೂ ಹೆಚ್ಚು ಗ್ರಂಥಾಲಯ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇಲಾಖೆಯ ಕಟ್ಟಡಗಳ ನಿರ್ವಹಣೆ, ಪುಸ್ತಕ ಖರೀದಿ, ಪುಸ್ತಕಗಳ ಡಿಜಟಲಿಕರಣಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ’ ಎಂದರು.

‘ಎಂಜಿನಿಯರಿಂಗ್‌, ವೈದ್ಯಕೀಯದಂಥ ವೃತ್ತಿಪರ ಕೋರ್ಸ್‌ಗಳ ಪುಸ್ತಕಗಳನ್ನು ಇಲಾಖೆ ಖರೀದಿ ಮಾಡಲಿದೆ. ಈ ವರ್ಷ ₹15 ಕೋಟಿ ವೆಚ್ಚದಲ್ಲಿ ಪುಸ್ತಕಗಳನ್ನು ಖರೀದಿಸಿ ಗ್ರಂಥಾಲಯಗಳಿಗೆ ನೀಡಲಾಗುತ್ತಿದೆ’ ಎಂದು ಹೇಳಿದರು.

‘ರಾಜ್ಯದ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಂಥಾಲಯಗಳ ಮೇಲ್ವಿಚಾರಕರು ಕೆಲ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸುತ್ತಿದ್ದಾರೆ. ಈ ವೇಳೆ ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ. ಈ ಕುರಿತು ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ’ ಎಂದು ತನ್ವೀರ್‌ ಸೇಠ್ ಹೇಳಿದರು.

ಖರೀದಿಗೆ ಸೂಚನೆ: ‘ದೃಷ್ಟಿ ಹೀನರಿಗೆ ಅನುಕೂಲಕ್ಕಾಗಿ ಬ್ರೈಲ್‌ ಲಿಪಿಯಲ್ಲಿ ಬಸವಣ್ಣನವರ ವಚನಗಳ ಗ್ರಂಥ ಸಿದ್ಧಗೊಂಡಿದ್ದು, ಅದನ್ನು ರಾಜ್ಯದ ಎಲ್ಲಾ ಗ್ರಂಥಾಲಯಗಳಿಗೂ ಖರೀದಿ ಮಾಡುವಂತೆ ಆದೇಶಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.