ADVERTISEMENT

ಗ್ರಾಮಸ್ಥರ ಬದುಕು ಕಿತ್ತುಕೊಂಡ ಹಿಂಗಾರು!

ವರುಣನ ಆರ್ಭಟ – ತುಂಬಿ ಹರಿದ ಹಳ್ಳಗಳ ರಭಸಕ್ಕೆ ಕುಂದಗೋಳ ಹೋಬಳಿ ತತ್ತರ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2015, 6:04 IST
Last Updated 7 ಅಕ್ಟೋಬರ್ 2015, 6:04 IST

ಹುಬ್ಬಳ್ಳಿ: ಭಾರಿ ಮಳೆಯಿಂದಾಗಿ ಹಳ್ಳ­ಗಳು ತುಂಬಿ ಹರಿದ ಪರಿಣಾಮ ಕುಂದ­ಗೋಳ ತಾಲ್ಲೂಕಿನ 10ಕ್ಕೂ ಹೆಚ್ಚು ಹಳ್ಳಿಗಳಲ್ಲಿ ವ್ಯಾಪಕ ಹಾನಿಯಾಗಿದೆ. 35ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ನೆಲಸಮವಾಗಿದ್ದು, ಪ್ರಾಥಮಿಕ ಅಂದಾಜಿನಂತೆ 170 ಹೆಕ್ಟೇರ್‌ನಷ್ಟು ಬೆಳೆ ಕೊಚ್ಚಿ ಹೋಗಿದೆ.

ನಾಲ್ಕು ಹಳ್ಳಗಳ ಆರ್ಭಟಕ್ಕೆ ಕುಂದಗೋಳ ಹೋಬಳಿ ಅಕ್ಷರಶಃ ನಲುಗಿದ್ದು, ಇಂಗಳಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯರೇಬೂದಿಹಾಳ ದ್ವೀಪವಾಗಿ ಪರಿಣಮಿಸಿದೆ. ಭಾನುವಾರ­ದಿಂದಲೇ  ಗ್ರಾಮಕ್ಕೆ ಬಸ್ ಸಂಪರ್ಕ ಸ್ಥಗಿತಗೊಂಡಿದೆ.  ಸತತ ಎರಡು ದಿನ ಸುರಿದ ಮಳೆಯಿಂದಾಗಿ ಬೆಣ್ಣಿಹಳ್ಳ, ಚಂದ್ರಕಟ್ಟಿಹಳ್ಳ (ಗುಳ್ಳವ್ವನಹಳ್ಳ), ಯರಿ­ಹಳ್ಳ ಹಾಗೂ ಗುರುವಿನ ಹಳ್ಳಗಳಲ್ಲಿ ನೆರೆ ಬಂದಿದೆ. ಹುಚ್ಚೆದ್ದ ಹಳ್ಳಗಳ ಪುಂಡಾಟಕ್ಕೆ ಇಂಗಳಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 24 ಮನೆಗಳು ಕುಸಿದಿವೆ. ಮತ್ತಿಗಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 15ಕ್ಕೂ ಹೆಚ್ಚು ಮನೆಗಳು ನೆಲಕಚ್ಚಿವೆ.

ಇಂಗಳಗಿ, ಮತ್ತಿಗಟ್ಟಿ, ಯರೇ­ಬೂದಿಹಾಳ, ಹುಲಗೂರ, ಗುರು­ವಿನಹಳ್ಳಿ, ಹಂಚಿನಾಳ, ಕುಬಿಹಾಳ, ತೀರ್ಥ, ಹನುಮನಹಳ್ಳಿ, ದೇವನೂರು, ರಾಮಾಪುರ, ಮಳಲಿ ಗ್ರಾಮಗಳಲ್ಲಿ ಹಾನಿ ಸಂಭವಿಸಿದೆ.

ಗ್ರಾಮಗಳಲ್ಲಿ ಎದೆ ಮಟ್ಟಕ್ಕೆ ನೀರು ಹರಿದಿದೆ. ಮನೆಗಳ ಒಳಗೆ ನುಗ್ಗಿದ ನೀರು ಅಲ್ಲಿ ಸಂಗ್ರಹಿಸಿ ಇಡಲಾಗಿದ್ದ ದವಸ–ಧಾನ್ಯ, ಕೃಷಿ ಸಾಮಗ್ರಿಗಳನ್ನು ಕೊಚ್ಚಿಕೊಂಡು ಹೋಗಿದೆ. ಮನೆಯ ಮುಂದೆ ನಿಲ್ಲಿಸಿದ್ದ ಚಕ್ಕಡಿ, ಟ್ರ್ಯಾಕ್ಟರ್‌ ಟ್ರೇಲರ್‌ಗಳು ಹಾಗೂ ದ್ವಿಚಕ್ರ ವಾಹನ­ಗಳನ್ನು ನೀರಿನ ರಭಸಕ್ಕೆ ಸಿಲುಕಿ ದೂರಕ್ಕೆ ಕೊಚ್ಚಿಹೋಗಿವೆ.

ವಿದ್ಯುತ್ ಕಂಬಗಳು ನೆಲಕಚ್ಚಿದ್ದು, ದೂರವಾಣಿ ಕೇಬಲ್‌ಗಳು ಕಿತ್ತುಹೋಗಿವೆ. ಇದರಿಂದ ಕುಂದ­ಗೋಳ ಹೋಬಳಿ ಕಳೆದ 48 ಗಂಟೆ­ಗಳಿಂದ ಕತ್ತಲೆಯಲ್ಲಿ ಮುಳುಗಿದೆ. ಹೊಲಗಳಲ್ಲಿ ಬೆಳೆದು ನಿಂತಿದ್ದ ಶೇಂಗಾ, ಮೆಣಸಿನಗಿಡ, ಜೋಳ, ಸೋಯಾ­ಬೀನ್, ಬಿ.ಟಿ. ಹತ್ತಿ ನಾಶವಾಗಿದೆ. ಹೊಲಗಳ ಬದುಗಳು, ಕಣದಲ್ಲಿನ ಬಣವೆಗಳು ಕೊಚ್ಚಿ ಹೋಗಿದ್ದು, ಒಡ್ಡುಗಳು ಒಡೆದು ಹೋಗಿವೆ. ಸೇತುವೆ, ರಸ್ತೆಗಳು ಹಾನಿಗೀಡಾಗಿವೆ. ಹಳ್ಳಗಳ ಆಸುಪಾಸಿನ ಜಮೀನುಗಳಲ್ಲಿ 3ರಿಂದ 4 ಅಡಿ ಮಣ್ಣು ಶೇಖರಣೆಗೊಂಡು ಸದ್ಯಕ್ಕೆ ಉಳುಮೆ ಸಾಧ್ಯವಾಗದ ಸ್ಥಿತಿ ತಲೆದೋರಿದೆ.

170 ಹೆಕ್ಟೆರ್ ಬೆಳೆ ಹಾನಿ:  ‘ಸದ್ಯಕ್ಕೆ 170 ಹೆಕ್ಟೇರ್ ಬೆಳೆ ಹಾನಿಯಾಗಿರುವುದನ್ನು ಅಂದಾಜಿಸಲಾಗಿದ್ದು, ನಷ್ಟದ ಪ್ರಮಾ­ಣದ ಪೂರ್ಣ ಚಿತ್ರಣ ಬುಧವಾರ ದೊರೆಯಲಿದೆ’ ಎಂದು ತಹಶೀಲ್ದಾರ್ ಮಹಾದೇವ ಬನಸಿ ‘ಪ್ರಜಾವಾಣಿ’ಗೆ ತಿಳಿಸಿದರು.

ಹಂಚಿನಹಾಳ ಬಳಿ ಸಣ್ಣ ನೀರಾವರಿ ಇಲಾಖೆ ನಿರ್ಮಿಸಿರುವ ಚೆಕ್‌ಡ್ಯಾಂನಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹ­ಗೊಂಡ ಪರಿಣಾಮ ಅದರ ಹಿನ್ನೀರಿಗೆ ಸಿಲುಕಿ ಹೆಚ್ಚಿನ ಪ್ರಮಾಣದ ಬೆಳೆ ಹಾನಿಯಾಗಿದೆ.

ಮನೆ ಕುಸಿದು ನಿರಾಶ್ರಿತರಾದವರಿಗೆ ಬೇರೆಯವರ ಮನೆಗಳಲ್ಲಿ ಆಶ್ರಯ ನೀಡಲಾಗಿದೆ. ದವಸ–ಧಾನ್ಯ ಕೊಚ್ಚಿ ಹೋದವರಿಗೆ ಪಂಚಾಯ್ತಿಯಿಂದಲೇ ನೆರವು ನೀಡಲಾಗುತ್ತಿದೆ ಎಂದು ಇಂಗ­ಳಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪ್ರಭುಗೌಡ ಸಂಕನಗೌಡಶಾನಿ ತಿಳಿಸಿ­ದರು.

ಮತ್ತಿಗಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬೆಣ್ಣಿಹಳ್ಳ ಹೆಚ್ಚಿನ ಉಪಟಳ ಮಾಡಿದೆ. ‘ಬರಗಾಲದ ಕಾರಣ ಹಳ್ಳದ ನೀರು ಬಳಸಿ ಒಂದಷ್ಟು ಪೀಕು ಬೆಳೆದಿದ್ದೆವು. ಈಗ ಅದೂ ಕೈಗೆ ಸಿಕ್ಕದಂತಾಯಿತು. ಸತತ 6 ತಾಸು ಮಳೆ ಸುರಿದಿದೆ. ನಂತರ ಕೆಲ ಸಮಯ ಬಿಡುವು ಕೊಟ್ಟು ಮಳೆ ಸುರಿದಿದೆ. ಮಳೆ ಇಲ್ಲಾ ಎಂದು ಆಕಾಶ ನೋಡುತ್ತಾ ಕುಳಿತಿದ್ದೆವು. ಈಗ ಮಾಯದಂತಾ ಮಳೆ ಬಂದು ಎಲ್ಲಾ ಕೊಚ್ಚಿ ಹೋಯಿತು’ ಎಂದು ಮತ್ತಿಗಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಾಂತವ್ವ ರೊಡಗೌಡರ ಅವರ ಪುತ್ರ ಶಂಕರಗೌಡ ಅಳಲು ತೋಡಿ­ಕೊಂಡರು.

ಶಾಸಕ ಸಿ.ಎಸ್.ಶಿವಳ್ಳಿ ಹಾಗೂ ತಹಶೀಲ್ದಾರ್ ಮಹದೇವ ಬಣಸಿ ಹಾನಿಗೀಡಾದ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.