ADVERTISEMENT

ಚಪ್ಪರಬಂದ ಕಾಲೊನಿ; ಮುಗಿಯದ ಕೆಲಸ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 8:56 IST
Last Updated 26 ಡಿಸೆಂಬರ್ 2017, 8:56 IST

ಧಾರವಾಡ: ನಗರದ ಚಪ್ಪರಬಂದ ಕಾಲೊನಿಯ ಮುಖ್ಯರಸ್ತೆಯಲ್ಲಿ ಕಳೆದ 20 ದಿನಗಳಿಂದ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಎದುರಾಗಿದೆ ಎಂದು ಅ‌ಲ್ಲಿನ ನಿವಾಸಿಗಳು ಆರೋಪ ಮಾಡಿದ್ದಾರೆ.

‘ವಾರ್ಡ್‌ ಸಂಖ್ಯೆ 15 ಈ ರಸ್ತೆಯಲ್ಲಿ ಅರಬ್ಬಿ ಮದರಸಾ ಮತ್ತು ಅಂಗನವಾಡಿ ಹಾಗೂ ಉರ್ದು, ಕನ್ನಡ ಪ್ರಾಥಮಿಕ ಶಾಲೆ ಇದ್ದು, ಮಕ್ಕಳಿಗೆ ತೀವ್ರ ತೊಂದರೆಯಾಗಿದೆ. ಈ ರಸ್ತೆಯಲ್ಲಿ ಮಕ್ಕಳನ್ನು ಕಳುಹಿಸಲು ಪೋಷಕರು ಭಯಬೀಳುತ್ತಿದ್ದಾರೆ. ಅಲ್ಲದೇ, ಮಸೀದಿಗೆ ಪ್ರಾರ್ಥನೆಗೆ ತೆರಳಲು ಕಷ್ಟವಾಗುತ್ತಿದೆ’ ಎಂದು ಅಲ್ಲಿನ ನಿವಾಸಿಗಳು ಆರೋಪ ಮಾಡಿದ್ದಾರೆ.

ಬಡಾವಣೆ ನಿವಾಸಿ ಶರೀಫ ಬಳಬಟ್ಟಿ ಮಾತನಾಡಿ, ‘ಚಪ್ಪರಬಂದ ಕಾಲೊನಿ ಒಂದು ಮಧ್ಯಮ ವರ್ಗ ಹಾಗೂ ಬಡ ಜನರು ವಾಸಿಸುವ ಕಾಲೊನಿಯಾಗಿದ್ದು, ಬೆಳಗಿನ ಜಾವವೇ ಎದ್ದು ಕೆಲಸಕ್ಕೆ ತೆರಳುವವರು ಹಾಗೂ ಕತ್ತಲಾದ ಮೇಲೆ ಮನೆಗೆ ಮರಳುವ ಜನರಿದ್ದಾರೆ, ಇವರಿಗೆ ಇಲ್ಲಿ ಓಡಾಡುವುದೇ ಬಹಳ ತೊಂದರೆಯಾಗಿದೆ. ಅಲ್ಲದೇ,
ವಯೋವೃದ್ಧರು, ಹೆಣ್ಣುಮಕ್ಕಳು ಓಡಾಡಲು ತುಂಬಾ ತೊಂದರೆ ಪಡುತ್ತಿದ್ದಾರೆ’ ಎಂದರು.

ADVERTISEMENT

’ಇಲ್ಲಿ ವಿದ್ಯುತ್ ಸಂಪರ್ಕ, ನೀರಿನ ಪೂರೈಕೆ ಎಲ್ಲವನ್ನೂ ಕಡಿತಗೊಳಿಸಿದ್ದಾರೆ. ಪಾಲಿಕೆ ಪೂರೈಸುವ ನೀರಿನ ಕೊಳವೆಗೆ ಒಳಚರಂಡಿ ನೀರು ಸೇರುತ್ತಿರುವುದರಿಂದ ನೀರು ಕಲುಷಿತಗೊಂಡಿದೆ.

ಇದರಿಂದ ಮಕ್ಕಳು, ವೃದ್ಧರು ಕಾಯಿಲೆ ಬೀಳುವ ಸಂಭವ ಹೆಚ್ಚು. ಮಹಾನಗರ ಪಾಲಿಕೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿಲ್ಲ. ಇಲ್ಲಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರೂ ನಮ್ಮ ಗೋಳು ಕೇಳುತ್ತಿಲ್ಲ. ಗುತ್ತಿಗೆದಾರರ ವಿರುದ್ಧ ಪಾಲಿಕೆಯವರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪ ಮಾಡಿದ್ದಾರೆ.

ಈ ಕುರಿತಂತೆ ಚಪ್ಪರಬಂದ್ ಕಾಲೊನಿಯ ಹಮೀದ ಕೋಡಿಯಾಳ, ಖಲೀಲ ಬಿಜಾಪುರ, ಬಷೀರ ಹಂಡರಗಲ್, ಉಸ್ಮಾನ ಇಸ್ಲಾಂಪುರ ಪಾಲಿಕೆಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.