ADVERTISEMENT

ಜನಔಷಧಿ ಕಂಪೆನಿಗಳ ಲೂಟಿಗೆ ತಡೆ: ಜೋಶಿ

‌ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಆರಂಭ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 10:43 IST
Last Updated 10 ಜುಲೈ 2017, 10:43 IST

ಹುಬ್ಬಳ್ಳಿ: ಖಾಸಗಿ ಔಷಧಿ ಕಂಪೆನಿಗಳು ‘ಬ್ರಾಂಡೆಡ್‌’ ಹೆಸರಿಲ್ಲಿ ಬಡ ರೋಗಿಗಳನ್ನು ಲೂಟಿ ಮಾಡುತ್ತಿರುವುದನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ದೇಶದಾದ್ಯಂತ ಆರಂಭಿಸಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

ನವನಗರದ ಪೊಲೀಸ್‌ ಠಾಣೆ ಎದುರು ನೂತನವಾಗಿ ಆರಂಭವಾದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ವಾರ್ಷಿಕ ಲಕ್ಷಾಂತರ ಕೋಟಿ ವಹಿವಾಟು ನಡೆಸುವ ಔಷಧಿ ಕಂಪೆನಿಗಳು ಜನೌಷಧಿ ಕೇಂದ್ರಗಳನ್ನು ತೆರೆಯದಂತೆ ದೊಡ್ಡ ಮಟ್ಟದ ಲಾಭಿ ನಡೆಸಿದ್ದವು. ಈ ಲಾಬಿಗೆ ಮಣಿದು ಈ ಹಿಂದಿನ ಸರ್ಕಾರಗಳು ಜನೌಷಧಿ ಕೇಂದ್ರ ಆರಂಭಿಸಲು ಮುಂದಾಗಿರಲಿಲ್ಲ. ಆದರೆ, ಮೋದಿ ನೇತೃತ್ವದ ಈಗನ ಸರ್ಕಾರವು ಯಾವುದೇ ಲಾಬಿಗೆ ಮಣಿಯದೇ ಜನೌಷಧಿ ಕೇಂದ್ರಗಳನ್ನು ಆರಂಭಿಸಿದೆ ಎಂದು ಹೇಳಿದರು.

ADVERTISEMENT

ಕಡಿಮೆ ದರದಲ್ಲಿ ರೋಗಿಗಳಿಗೆ 650 ಔಷಧಿಗಳು ಹಾಗೂ 154 ಸರ್ಜಿಕಲ್‌ ಉತ್ಪನ್ನಗಳು ಜನೌಷಧಿ ಕೇಂದ್ರದಲ್ಲಿ ಲಭ್ಯವಿದೆ. ರೋಗಿಗಳು ಜನೌಷಧಿಯನ್ನೇ ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ನೀಡಬೇಕು ಎಂದರು. ಅಗತ್ಯವಿರುವಾಗ ರೋಗಿಗಳು ಗುಣಮಟ್ಟದ ಹಾಗೂ ಕಡಿಮೆ ದರದ ಜನೌಷಧಿಯನ್ನು ಖರೀದಿಸುವ ಮೂಲಕ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸರ್ಕಾರಿ ಆಸ್ಪತ್ರೆಗಳ ಜೊತೆಗೆ ಖಾಸಗಿ ವಲಯದಲ್ಲೂ ಜನೌಷಧಿ ಮಳಿಗೆ ತೆರೆಯಲು ಅವಕಾಶವಿದ್ದು, ಯುವಜನರು ಮುಂದೆ ಬಂದು ಜನೌಷಧಿ ಮಳಿಗೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಲು ಮುಂದಾಗಬೇಕು ಎಂದು ಅವರು ಹೇಳಿದರು.

ಹೃದ್ರೋಗಿಗಳಿಗೆ ಬಳಸುವ ಸ್ಟಂಟ್‌ ಬೆಲೆಯನ್ನು ಸಹ ಕೇಂದ್ರ ಸರ್ಕಾರವು ಕಡಿಮೆ ದರದಲ್ಲಿ ಪೂರೈಕೆ ಮಾಡುತ್ತಿದೆ. ₹ 1.50 ಲಕ್ಷ ಮೊತ್ತದ ಸ್ಟಂಟ್‌ಗಳು ಈಗ ₹ 35 ಸಾವಿರಕ್ಕೆ ಲಭಿಸುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರವು ಮಹತ್ವಪೂರ್ಣ ಸುಧಾರಣಾ ಕ್ರಮಕೈಗೊಂಡಿದೆ ಎಂದರು.

ಮಹಾನಗರ ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ ಹೊರಕೇರಿ, ಕರಿಯಪ್ಪ ಬೀಸಗಲ್‌, ‘ದಕ್ಷ ಡ್ರಗ್‌ ಹೌಸ್‌’ ಮಾಲೀಕ ಡಾ.ಮುರುಗೇಶ ಸುಂಕದ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.