ADVERTISEMENT

ಟಿಪ್ಪು ಜಯಂತಿ ವಿರೋಧಿಸುವವರು ಈ ದೇಶದವರಲ್ಲ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 6:24 IST
Last Updated 11 ನವೆಂಬರ್ 2017, 6:24 IST
ಧಾರವಾಡದ ಡಾ. ಮಲ್ಲಿಕಾರ್ಜುನ ಮನಸೂರ ಕಲಾಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ವಿನಯ ಕುಲಕರ್ಣಿ ಅವರು ಟಿಪ್ಪು ಸುಲ್ತಾನ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಡಾ. ಎಸ್.ಬಿ.ಬೊಮ್ಮನಹಳ್ಳಿ, ದೀಪಕ ಚಿಂಚೋರೆ, ಇಸ್ಮಾಯಿಲ್ ತಮಟಗಾರ, ಸದಾನಂದ ಡಂಗನವರ, ಯಾಸೀನ ಹಾವೇರಿಪೇಟೆ ಇದ್ದಾರೆ
ಧಾರವಾಡದ ಡಾ. ಮಲ್ಲಿಕಾರ್ಜುನ ಮನಸೂರ ಕಲಾಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ವಿನಯ ಕುಲಕರ್ಣಿ ಅವರು ಟಿಪ್ಪು ಸುಲ್ತಾನ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಡಾ. ಎಸ್.ಬಿ.ಬೊಮ್ಮನಹಳ್ಳಿ, ದೀಪಕ ಚಿಂಚೋರೆ, ಇಸ್ಮಾಯಿಲ್ ತಮಟಗಾರ, ಸದಾನಂದ ಡಂಗನವರ, ಯಾಸೀನ ಹಾವೇರಿಪೇಟೆ ಇದ್ದಾರೆ   

ಧಾರವಾಡ: ‘ರಾಜಕೀಯ ಸ್ವಾರ್ಥಕ್ಕಾಗಿ ಆದರ್ಶ ವ್ಯಕ್ತಿಗಳ ಜಯಂತಿಯನ್ನು ವಿರೋಧಿಸುವ ಮಂದಿ ಜಾತ್ಯತೀತ ಗುಣ ಹೊಂದಿರುವ ಭಾರತದಲ್ಲಿ ಹುಟ್ಟಿದವರೇ ಎಂಬ ಸಂಶಯ ಮೂಡುತ್ತದೆ’ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ ಹೇಳಿದರು. ಜಿಲ್ಲಾಡಳಿತ ಶುಕ್ರವಾರ ಆಯೋಜಿಸಿದ್ದ ಟಿಪ್ಪು ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಇತಿಹಾಸ ಓದದವರು ಮಹಾತ್ಮರ ಜಯಂತಿ ವಿರೋಧಿಸುತ್ತಿರುವುದು ವಿಪರ್ಯಾಸ. ಜಗತ್ತಿನ ಎಲ್ಲಾ ದೇಶಗಳಿಗೆ ಹೋಲಿಸಿದಲ್ಲಿ ಭಾರತ ಭಿನ್ನ. ಇಲ್ಲಿ ಹಲವು ಧರ್ಮ, ನೂರಾರು ಜಾತಿ ಜನರಿದ್ದಾರೆ. ನೂರಾರು ವರ್ಷಗಳಿಂದ ಪ್ರೀತಿ ಹಾಗೂ ಸಹಬಾಳ್ವೆಯಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ, ಅದಕ್ಕೆ ಭಂಗ ತರುವ ಕೆಲಸವನ್ನು ಯಾರೂ ಮಾಡಬಾರದು’ ಎಂದು ಹೇಳಿದರು.

‘ಯಾವುದೇ ಧರ್ಮದಲ್ಲಿ ಹುಟ್ಟಿದರೂ ಈ ದೇಶದಲ್ಲಿರುವ ನಾವೆಲ್ಲರೂ ಅಣ್ಣ ತಮ್ಮಂದಿರು ಎಂಬ ಭಾವನೆ ಎಲ್ಲರಲ್ಲೂ ಇರಬೇಕು. ಟಿಪ್ಪು ಸುಲ್ತಾನ್‌ ಕೊಡುಗೆ ಏನೆಂದು ಚರಿತ್ರೆ ಓದಿದವರಿಗೆ ತಿಳಿದೇ ಇರುತ್ತದೆ. ಕನ್ನಂಬಾಡಿ ಆಣೆಕಟ್ಟಿನ ನೀಲನಕ್ಷೆ ಸಿದ್ಧಪಡಿಸಿದ್ದು, ಮೈಸೂರು ಸಿಲ್ಕ್‌ನ ಜನಪ್ರಿಯತೆಗೆ ಮೂಲ ಪ್ರೇರಣೆಯೇ ಟಿಪ್ಪು ಸುಲ್ತಾನ್‌.

ADVERTISEMENT

17ನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಹಿಂದೂಸ್ತಾನಕ್ಕೆ ಅವರು ನೀಡಿದ ಕೊಡುಗೆ ಈ ನಾಡಿನ ಯಾರೊಬ್ಬರೂ ಮರೆಯುವಂತಿಲ್ಲ. ಎಲ್ಲಾ ಧರ್ಮಗಳಿಗೂ ಅವರ ಕೊಡುಗೆ ಅಪಾರ. 17ನೇ ಶತಮಾನದಲ್ಲಿ ಸಾರಾಯಿ ನಿಷೇಧ ಮಾಡುವ ಮೂಲಕ ತಮ್ಮ ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸಿದ್ದಾರೆ’ ಎಂದರು.

‘ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕಾರಣದ ಉದ್ದೇಶದಿಂದ ಬಿಜೆಪಿಯವರು ಟಿಪ್ಪು ಜಯಂತಿ ವಿರೋಧಿಸುತ್ತಿದ್ದಾರೆ. ದಿನಾಚರಣೆ ವಿರೋಧಿಸುವ ಭರದಲ್ಲಿ ಸಮುದಾಯಗಳ ನಡುವಿನ ಸಾಮರಸ್ಯ ಕದಡುವ ಕೆಲಸವನ್ನು ಮಾಡಲಾಗುತ್ತಿದೆ. ಇದು ಎಳ್ಳಷ್ಟೂ ಸರಿಯಲ್ಲ’ ಎಂದು ವಿನಯ ಕುಲಕರ್ಣಿ ಹೇಳಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ‘ಹುಟ್ಟು ಹೋರಾಟಗಾರರಾಗಿದ್ದ ಟಿಪ್ಪು ಸುಲ್ತಾನ್‌ ಶತ್ರುಗಳ ವಿರುದ್ಧ ಖಡ್ಗ ಹಿಡಿದು ಯುದ್ಧ ಮಾಡಿದ್ದಾರೆಯೇ ಹೊರತು ಹಿಂದಿನಿಂದ ಬೆಂಕಿ ಹಚ್ಚುವ ಕೆಲಸ ಮಾಡಿಲ್ಲ. ಹಿಂದಿನಿಂದಲೂ ಟಿಪ್ಪು ಜಯಂತಿ ಆಚರಿಸುತ್ತಾ ಬಂದಿದ್ದು, ಇಂದೂ ಮತ್ತು ಮುಂದೂ ಟಿಪ್ಪು ಜಯಂತಿ ಆಚರಿಸುತ್ತಲೇ ಇರುತ್ತೇವೆ. ಅದಕ್ಕೆ ಯಾರೂ ತಡೆಯೊಡ್ಡಲು ಸಾಧ್ಯವಿಲ್ಲ’ ಎಂದರು.

ಶಾಸಕ ಅರವಿಂದ ಬೆಲ್ಲದ ಅವರ ಗೈರು ಆಗಿದ್ದರಿಂದ ಡಾ. ಎಸ್‌.ಬಿ.ಬೊಮ್ಮನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಉಳಿದಂತೆ ಆಹ್ವಾನ ಪತ್ರಿಕೆಯಲ್ಲಿ ಜಗದೀಶ ಶೆಟ್ಟರ್‌ ಅವರ ಹೆಸರು ಇತ್ತು. ಅವರೂ ಬಂದಿರಲಿಲ್ಲ. ಇಡೀ ಕಲಾಭವನ ಟಿಪ್ಪು ಅಭಿಮಾನಿಗಳಿಂದ ತುಂಬಿತ್ತು. ಆವರಣದ ಹೊರಗೆ ಚಹಾ ಹಾಗೂ ಹಣ್ಣುಗಳನ್ನು ವಿತರಿಸಲಾಯಿತು.

ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಹು-ಧಾ ಪೊಲೀಸ್ ಆಯುಕ್ತ ಎಂ. ಎನ್. ನಾಗರಾಜ, ಪಾಲಿಕೆ ಸದಸ್ಯ ಸದಸ್ಯರಾದ ದೀಪಕ್ ಚಿಂಚೋರೆ, ಯಾಸಿನ್ ಹಾವೇರಪೇಟೆ, ಸುಭಾಷ್ ಶಿಂಧೆ, ಪ್ರೊ. ಐ.ಜಿ. ಸನದಿ,  ಹುಬ್ಬಳ್ಳಿ ಧಾರವಾಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಮಹ್ಮದಶಫಿ ಕಳ್ಳಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.