ADVERTISEMENT

ತೋಟದಲ್ಲಿ ಸುತ್ತಾಡಿ ಮಾವು ಸವಿದ ಪ್ರವಾಸಿಗರು

ಧಾರವಾಡ ತಾಲ್ಲೂಕಿನ ಕಲಕೇರಿಯ ಮಾವು ಬೆಳೆಗಾರ ದೇವೇಂದ್ರ ಜೈನ್‌ ಅವರ ತೋಟಕ್ಕೆ ಭೇಟಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 6:37 IST
Last Updated 22 ಏಪ್ರಿಲ್ 2017, 6:37 IST
ಧಾರವಾಡ: ಮಾವು ಬೆಳೆಯುವ ರೈತರನ್ನು ಉತ್ತೇಜಿಸುವುದು ಹಾಗೂ ಗ್ರಾಹಕರಿಗೆ ಗುಣಮಟ್ಟದ ಮಾವಿನ ಕುರಿತು ಮಾಹಿತಿ ನೀಡುವ ಸಲುವಾಗಿ ಶುಕ್ರವಾರ ಆಯೋಜಿಸಿದ್ದ ಮಾವು ಪ್ರವಾಸದಲ್ಲಿ ಮೂವತ್ತಕ್ಕೂ ಹೆಚ್ಚು ನಗರವಾಸಿಗಳು ಪಾಲ್ಗೊಂಡಿದ್ದರು.
 
ತೋಟಗಾರಿಕಾ ಇಲಾಖೆ ಹಾಗೂ ಮಾವು ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಾವು ಪ್ರವಾಸದಲ್ಲಿ ತಾಲ್ಲೂಕಿನ ಕಲಕೇರಿಯ ಮಾವು ಬೆಳೆಗಾರ ದೇವೇಂದ್ರ ಜೈನ್‌ ಅವರ ತೋಟಕ್ಕೆ ಪ್ರವಾಸಿಗರು ಭೇಟಿ ನೀಡಿದರು. ಅಲ್ಲಿ ಒಂಬತ್ತು ಎಕರೆಯಲ್ಲಿ ಬೆಳೆದ ಆಲ್ಫಾನ್ಸೊ ಮಾವಿನ ತಿಳಿ ಕುರಿತು ಮಾಹಿತಿ ಪಡೆದರು.
 
ತೋಟವನ್ನು ಸುತ್ತಾಡಿದ ಪ್ರವಾಸಿಗರಿಗೆ ಮಾವಿನ ವಿವಿಧ ತಳಿಗಳು, ಹಣ್ಣು ಮಾಡುವ ರೀತಿ, ಅವುಗಳ ಗಾತ್ರ, ಬಣ್ಣ, ರುಚಿ, ಕತ್ತರಿಸುವ ವಿಧಾನ ಇತ್ಯಾದಿ ಕುರಿತು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಶ್ರೀಶೈಲ ದಿಡ್ಡಿಮನಿ ಮಾಹಿತಿ ನೀಡಿದರು.
 
‘ಮಾರುಕಟ್ಟೆಯಲ್ಲಿ ರಾಸಾಯನಿಕ ಮಿಶ್ರಿತ ಮಾವು ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಾಗುತ್ತಿರುವ ಕಾರಣ ನೈಸರ್ಗಿಕ ರೀತಿಯಲ್ಲಿ ಮಾವು ಹಣ್ಣು ಮಾಡುತ್ತಿರುವ ರೈತರನ್ನು ಪರಿಚಯಿಸುವುದು ಈ ಪ್ರವಾಸದ ಉದ್ದೇಶವಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಮಾವಿನ ಹಣ್ಣು ನೋಡಲು ಬಣ್ಣದಿಂದ ಕೂಡಿರುತ್ತದೆ.
 
ಕ್ಯಾಲ್ಶಿಯಂ ಕಾರ್ಬೈಡ್‌ ಸೇರಿದಂತೆ ಇತ್ಯಾದಿ ಹಾನಿಕಾರಕ ರಸಾಯನಿಕಗಳನ್ನು ಬಳಸಿ ಹಣ್ಣನ್ನು ಮಾಗಿಸುತ್ತಾರೆ. ಇವುಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ’ ಎಂದು ಅವರು ತಿಳಿಸಿದರು.
 
‘ಪ್ರತಿ ವರ್ಷ ಒಂದು ಗಿಡದಲ್ಲಿ 400ರಿಂದ 500 ಕಾಯಿ ಬಿಡುತ್ತವೆ. ಮಾವಿನ ಹಣ್ಣಿನಲ್ಲಿ ಎ, ಬಿ ಮತ್ತು ಸಿ ಎಂಬ ಮೂರು ವಿಧಗಳನ್ನಾಗಿ ವಿಂಗಡಿಸಲಾಗಿದೆ. ಸುಮಾರು 250 ಗ್ರಾಂ ತೂಗುವ ಹಣ್ಣು ರಫ್ತು ಮಾಡಲು ಯೋಗ್ಯ. 120 ಗ್ರಾಂ ತೂಗುವ ಹಣ್ಣು ಸ್ಥಳೀಯ ಮಾರುಕಟ್ಟೆಗೆ, ಉಳಿದ ಗಾತ್ರದ ಹಣ್ಣುಗಳನ್ನು ಬೀಜೋತ್ಪಾದನೆಗೆ ಬಳಸಲಾಗುತ್ತದೆ’ ಎಂದು ವಿವರಿಸಿದರು.
 
ಮಾವು ಕುರಿತು ಮಾಹಿತಿ ಪಡೆದ ಪ್ರವಾಸಿಗರು ಗಿಡದಲ್ಲಿದ್ದ ಮಾವಿನ ಕಾಯಿಯೊಂದಿಗೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು. ಜತೆಗೆ ಪ್ರತಿ ಕೆ.ಜಿ.ಗೆ ₹80ರಂತೆ ತಲಾ 6 ಕೆ.ಜಿ. ಮಾವಿನ ಹಣ್ಣನ್ನು ಖರೀದಿಸಿದರು. ಪ್ರವಾಸಿಗರು ಸಂಜೆಯವರೆಗೂ ತೋಟದಲ್ಲಿದ್ದು ಹಳ್ಳಿಯ ಸೊಗಡನ್ನು ಸವಿದರು.
 
600 ಕೆ.ಜಿ. ಮಾವು ಮಾರಾಟ
ಮಾವು ಪ್ರವಾಸೋದ್ಯಮದ ಮೊದಲ ದಿನವೇ 600 ಕೆ.ಜಿ. ಮಾವಿನ ಹಣ್ಣು ಮಾರಾಟವಾಗಿದೆ.  ದೇವೇಂದ್ರ ಜೈನ್‌ ಅವರ ತೋಟದಲ್ಲಿ ಬೆಳೆದ ಹಣ್ಣುಗಳನ್ನು ಬಾಕ್ಸ್‌ಗಳಲ್ಲಿ ಇಡಲಾಗಿತ್ತು. ಪ್ರವಾಸದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದ ಗ್ರಾಹಕರು ಆಸಕ್ತಿಯಿಂದ ಮಾವಿನ ಹಣ್ಣನ್ನು ಖರೀದಿಸಿದರು.

ಕೆಲವರು ಇಲಾಖೆಯ ನಿರ್ದೇಶನದಂತೆ 6 ಕೆ.ಜಿ. ಖರೀದಿಸಿದರೆ, ಇನ್ನೂ ಕೆಲವರು ನಿಗದಿಪಡಿಸಿದ್ದಕ್ಕಿಂತ ಅಧಿಕ ಪ್ರಮಾಣದ ಹಣ್ಣುಗಳನ್ನು ಖರೀದಿಸಿದರು.
****
ಮುಂದಿನ ಮಾವು ಪ್ರವಾಸ
ತೋಟಗಾರಿಕಾ ಇಲಾಖೆಯು ಇದೇ 25ರಂದು ಧಾರವಾಡ ತಾಲ್ಲೂಕಿನ ಹಳ್ಳಿಗೇರಿ ಹಾಗೂ 24 ಮತ್ತು 28ರಂದು ಹುಬ್ಬಳ್ಳಿ ತಾಲ್ಲೂಕಿನ ಪಾಳೆ ಗ್ರಾಮದ ಮಾವಿನ ತೋಟಗಳಿಗೆ ಪ್ರವಾಸ ಆಯೋಜಿಸಿದೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.