ADVERTISEMENT

ದೂಳಿನ ಮಜ್ಜನಕ್ಕೆ ನಿತ್ಯವೂ ಜನ ಸುಸ್ತು

ಬಿಆರ್‌ಟಿಎಸ್‌ ರಸ್ತೆ ಕಾಮಗಾರಿಗಾಗಿ ಉಣಕಲ್‌ ಉದ್ಯಾನದ ಬಳಿ ರಸ್ತೆ ಅಗೆತ; ಬಿಳಿ ಬಟ್ಟೆ ತೊಟ್ಟವರಿಗೆ ಕಾದಿದೆ ಕೊಳೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 10:58 IST
Last Updated 11 ಮಾರ್ಚ್ 2017, 10:58 IST
ದೂಳಿನ ಮಜ್ಜನಕ್ಕೆ ನಿತ್ಯವೂ ಜನ ಸುಸ್ತು
ದೂಳಿನ ಮಜ್ಜನಕ್ಕೆ ನಿತ್ಯವೂ ಜನ ಸುಸ್ತು   
l ಮನೋಜ ಕುಮಾರ್‌  ಗುದ್ದಿ
ಹುಬ್ಬಳ್ಳಿ: ಅವಳಿ ನಗರವನ್ನು ಸಂಪರ್ಕಿ­ಸುವ ಮುಖ್ಯ ರಸ್ತೆಯಲ್ಲಿ ಕ್ಷಿಪ್ರ ಸಾರಿಗೆ ವ್ಯವಸ್ಥೆಗಾಗಿ ನಡೆಯುತ್ತಿರುವ ರಸ್ತೆ ಕಾಮ­ಗಾರಿಯು ದಿನದಿನಕ್ಕೆ ಪ್ರಯಾಣಿ­ಕರ ಜೀವನವನ್ನು ಹೈರಾಣುಗೊ­ಳಿಸುತ್ತಿದೆ.
 
ಬುಧವಾರ ಇಲ್ಲಿನ ಶ್ರೀನಗರ ಕ್ರಾಸ್‌ನ ಉಣಕಲ್‌ ಉದ್ಯಾನದ ಬಳಿ ಜಲಮಂಡಳಿಯು ಕುಡಿಯುವ ನೀರಿನ ಯೋಜನೆಗಾಗಿ ಮುಖ್ಯ ರಸ್ತೆಯನ್ನು ಅಗೆದಿದ್ದರಿಂದ ಎರಡೂ ದಿನ ಕೆಂಪು ದೂಳು ಆ ರಸ್ತೆಯಲ್ಲಿ ಸಾಗುತ್ತಿದ್ದ ಪ್ರಯಾಣಿಕರ ಬಟ್ಟೆಗಳನ್ನು ಕೆಂಪು ಬಣ್ಣಕ್ಕೆ ತಿರುಗಿಸಿದೆ.
 
ನಿತ್ಯ ಸಾವಿರಾರು ಸಂಖ್ಯೆಯ ಭಾರಿ ಸರಕು ಹೊತ್ತ ಲಾರಿಗಳು, ಟಿಪ್ಪರ್‌ಗಳು, ಪ್ರಯಾಣಿಕ ವಾಹನಗಳು ಚಲಿಸುತ್ತಿರುವುದರಿಂದ ದೂಳು ಇನ್ನಷ್ಟು ಏಳುತ್ತಿದ್ದು, ಇದನ್ನು ನಿಯಂತ್ರಿಸಲು ಗುತ್ತಿಗೆದಾರರು ಅಗೆದ ಭಾಗದಲ್ಲಿ ನೀರು ಹನಿಸುತ್ತಿದ್ದಾರಾದರೂ ಈ ಪ್ರಯತ್ನ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.
 
ಬಿಆರ್‌ಟಿಎಸ್‌ ಕಾಮಗಾರಿ ಆರಂಭ­ವಾಗಿ ನಾಲ್ಕು ವರ್ಷಗಳಾದರೂ ಪ್ರಯಾಣಿಕರು ಹಾಗೂ ಸಾರ್ವಜನಿಕರು ದಿನೇ ದಿನೇ ಸಹನೆ ಕಳೆದುಕೊಳ್ಳುತ್ತಿದ್ದು, ಶೀಘ್ರವೇ ಯೋಜನೆ ಮುಗಿಸುವಂತೆ ಒತ್ತಾಯಿಸಿದ್ದಾರೆ. ಶ್ರೀನಗರ ಕ್ರಾಸ್‌ ಬಳಿ ಶುಕ್ರವಾರ ಕೆಂದೂಳಿನ ಹಾವಳಿ ಇನ್ನಷ್ಟು ಹೆಚ್ಚಾಯಿತು. ಹೀಗಾಗಿ, ಇದನ್ನು ದಾಟಿಕೊಂಡು ಹೇಗಪ್ಪಾ ಹೋಗುವುದು ಎಂಬ ಆತಂಕದಲ್ಲೇ ಬೈಕ್‌ ಸವಾರರು ದಾರಿ ಸಾಗಬೇಕಾಯಿತು.
 
ಬಿಳಿ ಅಂಗಿ ಹಾಕಿಕೊಂಡು ಸಂಚರಿ­ಸಿ­ದವರ ಬಟ್ಟೆಗಳು ಈ ದೂಳನ್ನು ದಾಟು­ವಷ್ಟರಲ್ಲೇ ಕೊಳೆಯಾದವು. ದೂಳನ್ನು ತಡೆಯಲು ಗುತ್ತಿಗೆದಾರರು ಸಂಜೆ ವೇಳೆಗೆ ನೀರು ಚಿಮುಕಿಸಿದರು. ಒಂದಷ್ಟು ಹೊತ್ತು ನಿಯಂತ್ರಣಕ್ಕೆ ಬಂದ ದೂಳು ನೀರಿನ ಅಂಶ ಆರುತ್ತಿದ್ದಂತೆಯೇ ಮತ್ತೆ ಹಾರಾಟ ಶುರು ಮಾಡಿತು.
‘ಕೆಲ ತಿಂಗಳ ಹಿಂದೆ ಹೋಂಡಾ ಶೋರೂಂ ಎದುರು ನಿರ್ಮಿಸಲಾ­ಗುತ್ತಿರುವ ಬಸ್‌ ನಿಲ್ದಾಣದ ಪಕ್ಕದ ರಸ್ತೆಯನ್ನು ಡಾಂಬರೀಕರಣ ಮಾಡಿರ­ಲಿಲ್ಲ.
 
ಆ ದೂಳಿನಲ್ಲೇ ವಾಹನ ಸವಾರರು ಸಂಚರಿಸುತ್ತಿದ್ದರು. ಇದನ್ನು ಗಮನಿಸಿದ ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌ ಹಾಗೂ ಸಂಸದ ಪ್ರಹ್ಲಾದ ಜೋಶಿ ಅವರು ಕೂಡಲೇ ರಸ್ತೆ ಡಾಂಬರೀಕರಣ ಮಾಡುವಂತೆ ಬಿಆರ್‌ಟಿಎಸ್‌ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ತಾಕೀತು ಮಾಡಿದ್ದರು. ಹಾಗೆ ಎಚ್ಚರಿಕೆ ನೀಡಿದ ಎರಡು ದಿನಗಳಲ್ಲೇ ರಸ್ತೆಗೆ ಡಾಂಬರ್‌ ಬಿದ್ದಿತ್ತು’ ಎಂದು ಸ್ಮರಿಸುತ್ತಾರೆ ವಾಹನ ಸವಾರ, ನವನಗರದ ನಿವಾಸಿ ಮಂಜುನಾಥ ಹೊಸಮನಿ.
 
ಕಳೆದ ವರ್ಷ ನವನಗರದ ಸೇತುವೆ ನಿರ್ಮಾಣ ಸಂದರ್ಭದಲ್ಲಿಯೂ ಇಡೀ ಮುಖ್ಯ ರಸ್ತೆ ದೂಳಿನಿಂದ ಆವೃತ­ವಾಗಿತ್ತು. ಆ ಸಂದರ್ಭದಲ್ಲಿ ‘ಪ್ರಜಾವಾಣಿ’ ದೂಳಿನಿಂದ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಸಚಿತ್ರ ಲೇಖನ ಪ್ರಕಟಿಸಿತ್ತು. ಆಗಲೂ ಒತ್ತಡ ಹೆಚ್ಚಿದಾಗಲಷ್ಟೇ ಬಿಆರ್‌ಟಿಎಸ್‌ ಡಾಂಬರೀಕರಣ ಕಾರ್ಯಕ್ಕೆ ಕೈ ಹಾಕಿತ್ತು.
 
ನಿತ್ಯ ಒಂದು ಏಜೆನ್ಸಿಯಿಂದ ಕಾಮಗಾರಿ!
ರಸ್ತೆಯುದ್ದಕ್ಕೂ ಜಲಮಂಡಳಿ, ಕರ್ನಾಟಕ ನಗರ ಭೂಸಾರಿಗೆ ಅಭಿವೃದ್ಧಿ ನಿಗಮ ಹಾಗೂ ಸರ್ಕಾರಿ ಹಾಗೂ ಖಾಸಗಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆಗಳು ತಮ್ಮ ಕೇಬಲ್‌ಗಳನ್ನು ರಸ್ತೆ ಪಕ್ಕದಲ್ಲಿ ಅಳವಡಿಸಿವೆ. ಇದೀಗ ನೂತನ ರಸ್ತೆ ಆಗುತ್ತಿರುವುದರಿಂದ ಅವುಗಳನ್ನು ಸ್ಥಳಾಂತರಿಸುವುದು ಅನಿವಾರ್ಯ.

ಹೀಗಾಗಿ, ನಿತ್ಯ ಒಂದೊಂದು ಸಂಸ್ಥೆಗಳು ತಮ್ಮ ಪೈಪ್‌ಲೈನ್‌ಗಳನ್ನು ಬೇರೆಡೆ ಸಾಗಿಸುತ್ತಿದ್ದು, ಇವುಗಳನ್ನು ಸಾಗಿಸಲು ರಸ್ತೆ ಅಗೆತ ಅನಿವಾರ್ಯ. ಆದಾಗ್ಯೂ, ಅವುಗಳನ್ನು ಕಾಲಮಿತಿಯಲ್ಲಿ ತೆಗೆದು ಮರು ಡಾಂಬರೀಕರಣ ಮಾಡುವಂತೆ ಇಲ್ಲವೇ ಪಕ್ಕಾ ರಸ್ತೆ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
 
ಕೆಲವು ಏಜೆನ್ಸಿಗಳು ರಸ್ತೆ ಅಗೆದರೂ ಬಿಆರ್‌ಟಿಎಸ್‌ ತನ್ನ ಖರ್ಚಿನಲ್ಲೇ ರಸ್ತೆ ದುರಸ್ತಿ ಮಾಡಿದೆ ಎಂದು ಬಿಆರ್‌­ಟಿಎಸ್‌ ಕಂಪೆನಿಯ ಮೂಲಸೌಕರ್ಯ ವಿಭಾಗದ ವ್ಯವಸ್ಥಾಪಕ ಬಸವರಾಜ ಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

ರೀಚ್‌ 1ರಲ್ಲಿ ಬರುವ ಕಾಡಸಿದ್ಧೇಶ್ವರ ಕಾಲೇಜಿನಿಂದ ಉಣಕಲ್‌ ಕ್ರಾಸ್‌ವರೆಗಿನ ರಸ್ತೆ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಅಲ್ಲಿಂದ ಶ್ರೀನಗರದವರೆಗೆ ಶೀಘ್ರವೇ ಪಕ್ಕಾ ರಸ್ತೆ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.