ADVERTISEMENT

ದೇಹದಾರ್ಢ್ಯಪಟು ಆತ್ಮಹತ್ಯೆ: ಕಮರಿದ ಕನಸು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 5:33 IST
Last Updated 25 ಏಪ್ರಿಲ್ 2017, 5:33 IST

ಹುಬ್ಬಳ್ಳಿ: ನಗರದ ಪಿ.ಸಿ.ಜಾಬಿನ್ ಕಾಲೇಜು ವಿದ್ಯಾರ್ಥಿ ಅಕ್ಷಯ ಖನೋಜ್‌ ಭಾನುವಾರ ರಾತ್ರಿ ನಿಗೂಢ ರೀತಿಯಲ್ಲಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ನಗರದ ಪ್ರತಿಭಾನ್ವಿತ ದೇಹದಾರ್ಢ್ಯಪಟು ಹಾಗೂ ವೇಟ್ ಲಿಫ್ಟರ್‌ ಮೇಲಿನ ಭರವಸೆ ಕಮರಿದೆ.

ವಿಕಾಸ ನಗರದ ಫಕೀರಪ್ಪ ಖನೋಜ್ ಮತ್ತು ಸುಧಾ ದಂಪತಿಯ ಪುತ್ರ, 19 ವರ್ಷ ವಯಸ್ಸಿನ ಅಕ್ಷಯ ಅವರು ಬಿ.ಸಿ.ಎ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದರು. ಮೂರು ವರ್ಷಗಳಿಂದ ದೇಹದಾರ್ಢ್ಯ ಮತ್ತು ಭಾರ ಎತ್ತುವ ಸ್ಪರ್ಧೆಗೆ ಸಜ್ಜಾಗುತ್ತಿದ್ದ ಅವರು ಈ ಬಾರಿ ಕರ್ನಾಟಕ ವಿವಿ ಅಂತರ ಕಾಲೇಜು ಏಕವಲಯ ಭಾರ ಎತ್ತುವ ಸ್ಪರ್ಧೆಯ 59 ಕೆ.ಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದರು. ಗಿರಣಿ ಚಾಳದ ಮೆಟ್ರೊ ಫ್ಲೆಕ್ಸ್ ಜಿಮ್‌ನಲ್ಲಿ ಅಭ್ಯಾಸ ಮಾಡುತ್ತಿದ್ದರು. ‘ಅಕ್ಷಯ ಒಳ್ಳೆಯ ಹುಡುಗ. ತುಂಬ ಧೈರ್ಯಶಾಲಿ. ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ಇತ್ತು. ನನಗೆ ಆತನ ಮೇಲೆ ಉತ್ತಮ ಭರವಸೆಯೂ ಇತ್ತು. ಆದರೆ ವಿಧಿಯಾಟ ಬೇರೆಯೇ ಆಯಿತು’ ಎಂದು ಜಿಮ್ ಮಾಲೀಕ ಹಾಗೂ ತರಬೇತುದಾರ ಸಂದೀಪ ಪೂಜಾರಿ ತಿಳಿಸಿದರು.

ಮನೆಯಲ್ಲೇ ಆತ್ಮಹತ್ಯೆ: ಅಕ್ಷಯ ಅವರ ತಂದೆ ಮತ್ತು ತಾಯಿ ಶಿವಮೊಗ್ಗದ ಸಂಬಂಧಿಕರ ಮದುವೆಗೆ ಹೋಗಿದ್ದರು. ಸಹೋದರಿ ಬೆಂಗಳೂರಿನಲ್ಲಿದ್ದಾರೆ. ಸೋಮವಾರ ಮುಂಜಾನೆ ಹುಬ್ಬಳ್ಳಿ ತಲುಪಿದ ತಂದೆ–ತಾಯಿ ಮನೆಯ ಬಾಗಿಲು ಬಡಿದಾಗ ತುಂಬ ಹೊತ್ತಿನ ವರೆಗೆ ಪ್ರತಿಕ್ರಿಯೆ ಇರಲಿಲ್ಲ. ದಿಗಿಲುಗೊಂಡು ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಆಗ ಮಗ ಸೀರೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಂಡು ಬೆಚ್ಚಿದ್ದಾರೆ. ‘ಆತ ಮದುವೆಗೆ ನಮ್ಮೊಂದಿಗೆ ಬಂದಿದ್ದರೆ ಈ ದುರಂತ ತಪ್ಪುತ್ತಿತ್ತೇನೋ...’ ಎಂದು ಹೇಳಿ ತಂದೆ ಫಕೀರಪ್ಪ ಗದ್ಗದಿತರಾದರು.  ‘ಏನೇ ಆದರೂ ಧೈರ್ಯ ಕಳೆದುಕೊಳ್ಳುತ್ತಿರಲಿಲ್ಲ.  ನಮಗೇ ಭರವಸೆ ತುಂಬುವ ಮಾತು ಆಡುತ್ತಿದ್ದ. ಆದರೆ ತಾನೇ ಯಾಕೆ ಹೀಗೆ ಮಾಡಿಕೊಂಡನೋ ಗೊತ್ತಾಗುತ್ತಿಲ್ಲ’ ಎಂದು  ಸಂಕಟ ತೋಡಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.