ADVERTISEMENT

ನೀರು ಪೂರೈಕೆ ಸಮಸ್ಯೆ: ಸದಸ್ಯರ ಅತೃಪ್ತಿ

ಪಾಲಿಕೆ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮೇಯರ್‌ ಠರಾವು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 11:24 IST
Last Updated 16 ಫೆಬ್ರುವರಿ 2017, 11:24 IST
ಧಾರವಾಡ: ‘ಅವಳಿ ನಗರದಲ್ಲಿ ಕುಡಿಯುವ ನೀರಿನ ಪೂರೈಕೆ ಅಸಮರ್ಪಕವಾಗಿದ್ದು, ಈ ಕುರಿತು ಕೂಲಂಕಷವಾಗಿ ಚರ್ಚೆ ನಡೆಸುವ ದೃಷ್ಟಿಯಿಂದ ಮುಂದಿನ ವಾರದಲ್ಲಿ ಜಲ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರನ್ನು ಕರೆಯಿಸಿ ವಿಶೇಷ ಸಾಮಾನ್ಯ ಸಭೆ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್‌ ಮಂಜುಳಾ ಅಕ್ಕೂರ ನಿರ್ಣಯ ಕೈಗೊಂಡರು.
 
ಇಲ್ಲಿನ ಪಾಲಿಕೆ ಕಚೇರಿಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಅವಳಿ ನಗರದಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ಸಾಕಷ್ಟು ಸಮಸ್ಯೆ ಉಂಟಾಗಿದೆ. ಹೀಗಾಗಿ ಮೂಲ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಭೆ ನಡೆಸಬೇಕು ಎಂದು ಸದಸ್ಯರ ಒತ್ತಾಯದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದರು.
 
ಕುಡಿಯುವ ನೀರಿನ ಸಮಸ್ಯೆ ಕುರಿತು ಗಮನ ಸೆಳೆಯುವ ಸೂಚನೆ ಮಂಡಿಸಿದ ಪಾಲಿಕೆ ವಿರೋಧ ಪಕ್ಷದ ನಾಯಕ ಯಾಸೀನ್‌ ಹಾವೇರಿಪೇಟ, ‘ಅವಳಿ ನಗರದ ಜನರು ನೀರಿನ ಕರ ತುಂಬಿದರೂ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ರೇಣುಕಾಸಾಗರದಲ್ಲಿ ನೀರಿನ ಸಂಗ್ರಹ ಸಾಕಷ್ಟಿದೆ. ಹೀಗಿದ್ದರೂ ಜನರಿಗೆ ನೀರಿನ ವ್ಯತ್ಯಯ ಉಂಟಾಗಿದೆ ಎಂದರೆ ಇದು ಅಧಿಕಾರಿಗಳ ಹಾಗೂ ಪಾಲಿಕೆ ವೈಫಲ್ಯವಲ್ಲದೆ ಬೇರೇನೂ ಅಲ್ಲ’ ಎಂದರು. ಇದನ್ನು ಬಿಜೆಪಿಯ ಶಿವು ಹಿರೇಮಠ ಅನುಮೋದಿಸಿದರು.
 
ಪ್ರಕಾಶ ಕ್ಯಾರಕಟ್ಟಿ ಮಾತನಾಡಿ, ‘67 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಇದೆ. ವಾಲ್‌ಮನ್‌ಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಪ್ರತಿ ವಾಲ್‌ಮನ್‌ಗೆ 10ರಿಂದ 15 ವಾಲ್‌ಗಳ ನಿರ್ವಹಣೆ ಇರುವುದರಿಂದ ಅವರು ಅದನ್ನು ನಿರ್ವಹಿಸುತ್ತಿಲ್ಲ’ ಎಂದರು.
 
ಬಿಜೆಪಿಯ ಡಾ. ಪಾಂಡುರಂಗ ಪಾಟೀಲ ಮಾತನಾಡಿ, ‘ಈವರೆಗೂ ಕುಡಿಯುವ ನೀರಿನ ಯೋಜನೆಗೆ 800 ಕೋಟಿಗೂ ಹೆಚ್ಚು ಹಣ ನೀಡಲಾಗಿದೆ. ಇವೆಲ್ಲವೂ ಅಧಿಕಾರಿಗಳ ಸಲಹೆ ಮೇರೆಗೆ ಕಾಲಕಾಲಕ್ಕೆ ಆಯಾ ಸರ್ಕಾರಗಳು ನೀಡಿಕೊಂಡು ಬಂದಿವೆ. ಹೀಗಿದ್ದರೂ ನಾವು ಹದಿನೈದು ವರ್ಷಗಳ ಹಿಂದಿನ ಪರಿಸ್ಥಿತಿ ಎದುರಿಸುತ್ತಿದ್ದೇವೆ ಎಂದರೆ ಅಧಿಕಾರಿಗಳು ಪಾಲಿಕೆಯ ಹಾದಿ ತಪ್ಪಿಸುತ್ತಿದ್ದಾರೆ ಎಂಬುದು ಸ್ಪಷ್ಟ. ಕೇಳಿದ್ದೆಲ್ಲವನ್ನೂ ನೀಡಿಯೂ ಈ ಪರಿಸ್ಥಿತಿ ಎಂದಾದರೆ, ಅಧಿಕಾರಿಗಳು, ಸಿಬ್ಬಂದಿ ಹಾಗೂ ಹಣದ ಅಗತ್ಯವಾದರೂ ಏನು?’ ಎಂಬ ಪ್ರಶ್ನೆಯನ್ನು ಮುಂದಿಡುವ ಮೂಲಕ ಸಭೆಯ ಗಮನ ಸೆಳೆದರು.
 
ಇದಕ್ಕೆ ದನಿಗೂಡಿಸಿದ ಜೆಡಿಎಸ್‌ನ ರಾಜಣ್ಣ ಕೊರವಿ, ಪ್ರತಿ ವಾರ್ಡ್‌ ವ್ಯಾಪ್ತಿಯಲ್ಲಿ ಕನಿಷ್ಠ 2ರಿಂದ 3 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು’ ಎಂದರು. ಸುಧೀರ್ ಶರಾಫ್‌ ಮಾತನಾಡಿ, ಜನರಿಗೆ ಪ್ರತಿ ದಿನ ನೀರು ಕೊಡಬಹುದಾಗಿದ್ದರೂ ಹತ್ತು ದಿನಗಳಿಗೊಮ್ಮೆ ನೀರು ನೀಡುತ್ತಿರುವುದೇಕೆ?’ ಎಂದು ಪ್ರಶ್ನಿಸಿದರು.
 
ಇದಕ್ಕೆ ಉತ್ತರಿಸಿದ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ‘ನೀರಿನ ಕರ ತುಂಬುವವರ ಸಂಖ್ಯೆ ಶೇ 40 ಮಾತ್ರ. ಈವರೆಗೆ ₹ 50ಕೋಟಿ ಹಣ ಪಾಲಿಕೆಗೆ ನೀರಿನ ತೆರಿಗೆ ರೂಪದಲ್ಲಿ ಬರಬೇಕಿದೆ. ಬಡ್ಡಿ ಸೇರಿಸಿ ಅದು ₹70ಕೋಟಿ ಮೀರಿದೆ. ಅವಳಿ ನಗರದಲ್ಲಿ 30ಸಾವಿರ ಕುಟುಂಬಗಳು ಸರಾಸರಿ ₹ 15ರಿಂದ 20ಸಾವಿರ ಬಾಕಿ ಉಳಿಸಿಕೊಂಡಿವೆ’ ಎಂದು ಸಭೆಗೆ ಮಾಹಿತಿ ನೀಡಿದರು.
 
‘ನಿರಂತರ ನೀರು ಪೂರೈಕೆಯು ಈಗಾಗಲೇ 12 ವಾರ್ಡ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಏಪ್ರಿಲ್ ಕೊನೆಯ ವಾರದೊಳಿಗೆ ಇನ್ನುಳಿದ ವಾರ್ಡ್‌ಗಳಲ್ಲೂ ಇರುವ 1.47ಲಕ್ಷ ಸಂಪರ್ಕಗಳಿಗೆ ವಿಸ್ತರಿಸಲಾಗುವುದು. ಇದರಿಂದ ಪ್ರತಿ ದಿನ 35ಎಂಎಲ್‌ಡಿ ನೀರು ಉಳಿತಾಯವಾಗಲಿದೆ’ ಎಂದರು.
 
ಈ ವಿಷಯಕ್ಕೆ ಸಂಬಂಧಿಸಿದಂತೆ ಸುವರ್ಣಾ ಮನುಕುಂಟ್ಲ, ರಘು ಲಕ್ಕಣ್ಣವರ, ಅಲ್ತಾಫ್ ಕಿತ್ತೂರ ಸೇರಿದಂತೆ ಪಕ್ಷಾತೀತವಾಗಿ ಸದಸ್ಯರು ಚರ್ಚೆ ನಡೆಸಿದರು. 
 
ಪೈಲ್ವಾನ್‌ ಗೆ  ₹  2 ಲಕ್ಷ ಪರಿಹಾರ: ಕಾಂಗ್ರೆಸ್‌ನ ದೀಪಕ ಚಿಂಚೋರೆ ಮಾತನಾಡಿ, ‘ತೀರಾ ಬಡ ಕುಟುಂಬದ ಹಿನ್ನೆಲೆಯುಳ್ಳ ಸಂತೋಷ್‌ ಅವರ ಕುಟುಂಬಕ್ಕೆ  ಸದಸ್ಯರು ಚರ್ಚೆ ಮಾಡದೆ ಅವರ ಕುಟುಂಬಕ್ಕೆ ₹ 2ಲಕ್ಷ ಪರಿಹಾರ ನೀಡಲು ಸಮ್ಮತಿಸಬೇಕು’ ಎಂದರು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.