ADVERTISEMENT

‘ನ್ಯಾಯಾಲಯ ಆದೇಶ ಉಲ್ಲಂಘನೆ’

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 7:00 IST
Last Updated 19 ಜುಲೈ 2017, 7:00 IST

ಹುಬ್ಬಳ್ಳಿ: ‘ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿ­ಯಲ್ಲಿ 30 ದಶಲಕ್ಷ ಮೆಟ್ರಿಕ್‌ ಟನ್‌ಗಿಂತ ಹೆಚ್ಚಿನ ಅದಿರು ತೆಗೆಯಲು ರಾಜ್ಯ ಮತ್ತು  ಕೇಂದ್ರದ ಗಣಿ ಸಚಿವಾಲಯ ಅನುಮತಿ ಕೇಳಿರುವುದು ಸುಪ್ರೀಂಕೋರ್ಟ್‌ನ ಅರಣ್ಯ ಪೀಠದ ಆದೇಶದ ಉಲ್ಲಂಘನೆ ಮಾಡಿದಂತೆ’ ಎಂದು ಸಮಾಜ ಪರಿ­ವ­ರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಅಭಿಪ್ರಾಯಪಟ್ಟರು.

‘ಈ ಮೂರು ಜಿಲ್ಲೆಗಳಲ್ಲಿ ಒಂದು ವರ್ಷಕ್ಕೆ ಗರಿಷ್ಠ 30 ದಶಲಕ್ಷ ಮೆಟ್ರಿಕ್‌ ಟನ್‌ ಅದಿರನ್ನು ಮಾತ್ರ ತೆಗೆಯಲು ಸುಪ್ರೀಂಕೋರ್ಟ್‌ 2013ರ ಏಪ್ರಿಲ್‌ 18ರಂದು ಆದೇಶಿಸಿದೆ. ಆದರೆ, ಸಚಿವಾಲಯವು ಈ ಮಿತಿಯನ್ನು 40 ದಶಲಕ್ಷ ಮೆಟ್ರಿಕ್‌ ಟನ್‌ಗೆ ಶೀಘ್ರವಾಗಿ ಹೆಚ್ಚಿಸ­ಬೇಕು ಹಾಗೂ ನಂತರ­ದಲ್ಲಿ ಇದನ್ನು 50 ದಶಲಕ್ಷ ಮೆಟ್ರಿಕ್‌ ಟನ್‌ಗೆ ಏರಿಸಬೇಕು ಎಂದು ಕೇಳಿದೆ. ನ್ಯಾಯಾಲಯ ಈ ಕೋರಿಕೆಯನ್ನು ಮನ್ನಿಸಬಾರದು’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ವಿನಾಶದ ಹೆಜ್ಜೆ: ‘ಬಳ್ಳಾರಿ ಜಿಲ್ಲೆಯ ಸಂಡೂರು ಅರಣ್ಯ ಪ್ರದೇಶದ ದೇವಧರಿ ರೇಂಜ್‌ನ 470.40 ಹೆಕ್ಟೇರ್‌ ಅರಣ್ಯ ಪ್ರದೇಶದಲ್ಲಿ ಅದಿರು ತೆಗೆಯಲು ಕಳೆದ ಜನವರಿ 23ರಂದು ಸರ್ಕಾರ ಆದೇಶಿಸಿದ್ದು, ಪ್ರಕೃತಿ ಮಾತೆಯ ನಾಶಕ್ಕೆ ಇಟ್ಟ ಹೆಜ್ಜೆಯಾಗಿದೆ. ಈ ಆದೇಶ ನೀಡುವುದಕ್ಕೂ ಮೊದಲು ನ್ಯಾಯಾ­ಲಯದ ಅನುಮತಿ ಪಡೆಯಬೇಕಿತ್ತು. ಸರ್ಕಾರ ಈ ಕಾರ್ಯ ಮಾಡಿಲ್ಲ’ ಎಂದು ಹಿರೇಮಠ ಆರೋಪಿಸಿದರು.

ADVERTISEMENT

‘ತಮ್ಮ ಪ್ರದೇಶದಲ್ಲಿ ಪುನರ್‌ವಸತಿ ಮತ್ತು ಪುನಶ್ಚೇತನ ಕಾರ್ಯವನ್ನು (ಆರ್ ಅಂಡ್‌ ಆರ್) ಕಡ್ಡಾಯಗೊಳಿಸಿದ್ದರೂ ಅದನ್ನು ನಿರ್ಲಕ್ಷಿಸಿರುವ 20 ಗಣಿ ಕಂಪೆನಿಗಳ ಗುತ್ತಿಗೆ ರದ್ದುಪಡಿಸಿ, ಸರ್ಕಾರದ ವಶಕ್ಕೆ ಪಡೆಯುವಂತೆ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಇತ್ತೀಚೆಗೆ ನ್ಯಾಯಾಲಯಕ್ಕೆ ಶಿಫಾರಸು ಮಾಡಿದೆ.

2014ರಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಫೆಮಿ, ಆರ್ ಅಂಡ್‌ ಆರ್ ಅನುಷ್ಠಾನಕ್ಕಾಗಿ ‘ಬಿ’ ಶ್ರೇಣಿಯ ಗಣಿ ಕಂಪೆನಿಗಳು ಠೇವಣಿ ಇರಿಸಿರುವ ಖಾತರಿ ಹಣ ಹಿಂತಿರುಗಿಸುವಂತೆ ಕೋರಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ಸಿ.ಇ.ಸಿಗೆ ಕೋರ್ಟ್‌ ಆದೇಶಿಸಿತ್ತು. ಆ ಆಧಾರದ ಮೇಲೆ ಸಿ.ಇ.ಸಿ, ಜುಲೈ 7ರಂದು ಸಲ್ಲಿಸಿರುವ ವರದಿಯಲ್ಲಿ ಈ ಅಂಶ ಬಹಿರಂಗ­ವಾಗಿದೆ’ ಎಂದು ಅವರು ತಿಳಿಸಿದರು.

‘ಗಣಿ ಕಂಪೆನಿಗಳು ತಮ್ಮ ವೈಯಕ್ತಿಕ ಲಾಭವನ್ನು ಮಾತ್ರ ಉದ್ದೇಶವಾಗಿ­ಟ್ಟು­ಕೊಂಡಿವೆ. ಪರಿಸರದ ಮೇಲೆ ಯಾವುದೇ ಕಾಳಜಿ ಇಲ್ಲದಿರುವುದು ಸಿ.ಇ.ಸಿ ಇತ್ತೀಚೆಗೆ ನೀಡಿದ ಈ ವರದಿ ಆಧಾರದಿಂದ ಮೇಲ್ನೋಟಕ್ಕೆ ಗೊತ್ತಾಗಿದೆ. ‘ಅಸೋಸಿಯೇಟೆಡ್‌ ಮೈನಿಂಗ್‌ ಕಂಪೆನಿ (ಎ.ಎಂ.ಸಿ) ಹಾಗೂ ಡೆಕ್ಕನ್‌ ಮೈನಿಂಗ್‌ ಸಿಂಡಿಕೇಟ್‌ ಕಂಪೆನಿಗಳ ವಿರುದ್ಧ ಸಿ.ಬಿ.ಐ ವಿಶೇಷ ಕೋರ್ಟ್‌ ಸೂಕ್ತ ತನಿಖೆ ಮಾಡಿ ಸುಪ್ರೀಂ­ಕೋರ್ಟ್‌ಗೆ ವರದಿ ಕೊಡಬೇಕಿತ್ತು. ಈ ಕುರಿತು ವರದಿ ಸಲ್ಲಿಸದೆ ಇರುವುದು ನ್ಯಾಯಾಲಯ ಆದೇಶದ ಉಲ್ಲಂಘನೆಯಾದಂತಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.