ADVERTISEMENT

‘ಪರಿಕ್ಕರ್‌ ಒಪ್ಪಿಸುವ ಜವಾಬ್ದಾರಿ ನಮ್ಮದು’

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 5:56 IST
Last Updated 14 ಸೆಪ್ಟೆಂಬರ್ 2017, 5:56 IST

ಹುಬ್ಬಳ್ಳಿ: ‘ಮಹದಾಯಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದಿಷ್ಟ ಕ್ರಮ ತೆಗೆದುಕೊಳ್ಳದೇ ರಾಜಕೀಯ ಮಾಡುತ್ತಿದ್ದಾರೆ. ಗೋವಾ ರಾಜ್ಯದ ಕಾಂಗ್ರೆಸ್‌ ನಾಯಕರನ್ನು ಅವರು ಒಪ್ಪಿಸಲಿ. ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಅವರ ವಿಷಯ ನಮಗೆ ಬಿಡಿ’ ಎಂದು ಬಿಜೆಪಿ ರಾಷ್ಟ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್‌ ಹೇಳಿದರು.

‘ಮಹದಾಯಿ ಕುರಿತು ಸ್ಪಷ್ಟ ನಿರ್ಣಯ ಕೈಗೊಳ್ಳಲು ಕರ್ನಾಟಕದಲ್ಲಿ ನಾವು ಅಧಿಕಾರದಲ್ಲಿಲ್ಲ. ಮಹಾರಾಷ್ಟ್ರದ ಕಾಂಗ್ರೆಸ್‌ ನಾಯಕರನ್ನೂ ಒಪ್ಪಿಸಬೇಕು’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪರಿವರ್ತನಾ ಯಾತ್ರೆಗೆ ಮೋದಿ, ಷಾ: ‘2018ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಂಪೂರ್ಣ ಸಿದ್ಧವಾಗಿದೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪುನರುಚ್ಚರಿಸಿದ ಅವರು, ಎಲ್ಲ ಪಕ್ಷಗಳಿಗಿಂತ ಬಿಜೆಪಿ ಹೆಚ್ಚು ಒಗ್ಗಟ್ಟಾಗಿದೆ’ ಎಂದರು.

ADVERTISEMENT

‘ಕಾಂಗ್ರೆಸ್‌ನ ದುರಾಡಳಿತದಿಂದ ರಾಜ್ಯವನ್ನು ಮುಕ್ತಗೊಳಿಸಲಾಗುವುದು. 150ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಹೊಂದಿದೆ. ನೂತನ, ಭ್ರಷ್ಟಾಚಾರ ಮುಕ್ತ ಮತ್ತು ವಿಕಾಸ ಕರ್ನಾಟಕ’ ಎಂಬ ಘೋಷವಾಕ್ಯದಡಿ ಚುನಾವಣೆ ಎದುರಿಸಲಿದ್ದೇವೆ. ಇದಕ್ಕಾಗಿ ರಾಜ್ಯದಲ್ಲಿ ಪರಿವರ್ತನಾ ಯಾತ್ರಾ ಹಮ್ಮಿಕೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್‌ ಷಾ ಪಾಲ್ಗೊಳ್ಳುವರು’ ಎಂದರು.

ನಮ್ಮಲ್ಲಿ ವಂಶಾಡಳಿತವಿಲ್ಲ: ‘ಕಾಂಗ್ರೆಸ್‌ನಲ್ಲಿರುವ ವಂಶಾಡಳಿತ ನಮ್ಮಲ್ಲಿಲ್ಲ. ಯಾವುದೇ ವ್ಯಕ್ತಿ ಅಥವಾ ಕುಟುಂಬದ ಕೈಯಲ್ಲಿ ನಮ್ಮ ಪಕ್ಷ ಇಲ್ಲ’ ಎಂದರು.
‘ಪಕ್ಷದ ಕೋರ್‌ ಕಮಿಟಿಯಲ್ಲಿ ನಿರ್ಧರಿಸಿದವರಿಗೆ ಮಾತ್ರ ಟಿಕೆಟ್‌ ನೀಡಲಾಗುತ್ತದೆ. ಭ್ರಷ್ಟಾಚಾರವನ್ನು ಸಹಿಸಲಾಗದು. ಶುದ್ಧ ಹಸ್ತ, ಸಮರ್ಥ ಹಾಗೂ ವೃತ್ತಿಪರರಿಗೆ ಪಕ್ಷ ಅವಕಾಶ ನೀಡಲಿದೆ’ ಎಂದರು.

ಬಿ.ಎಸ್. ಯಡಿಯೂರಪ್ಪ ಅವರ ಮೇಲಿರುವ ಭ್ರಷ್ಟಾಚಾರದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಅವರು ಎಲ್ಲ ಆರೋಪದಿಂದ ಮುಕ್ತರಾಗಿದ್ದಾರೆ. ಒಂದು ವೇಳೆ ಅವರು ಭ್ರಷ್ಟಚಾರ ನಡೆಸಿದ್ದರೆ, ರಾಜ್ಯ ಸರ್ಕಾರ ಕ್ರಮಗೊಳ್ಳಬಹುದಲ್ಲವೇ’ ಎಂದು ಪ್ರಶ್ನಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ಸಂಸದ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯ ದರ್ಶಿ ಸಿ.ಟಿ. ರವಿ, ವಿಧಾನಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ನಾಗರಾಜ, ಮೇಯರ್‌ ಡಿ.ಕೆ. ಚವ್ಹಾಣ, ಉಪ ಮೇಯರ್‌ ಲಕ್ಷ್ಮಿಬಾಯಿ ಬಿಜವಾಡ, ಜಿಲ್ಲಾ ಮಹಾನಗರ ಬಿಜೆಪಿ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ,ಶಿವಾನಂದ ಮುತ್ತಣ್ಣವರ, ಉಮೇಶ ಹಾಜರಿದ್ದರು.

‘ಹತ್ಯೆ ಖಂಡನೀಯ’
‘ಕರ್ನಾಟಕದಲ್ಲಿ ನಡೆದ ಹಿಂದೂ ಕಾರ್ಯಕರ್ತರ ಹತ್ಯೆ ಯನ್ನು ಬಿಜೆಪಿ ಖಂಡಿಸುತ್ತದೆ. ಅದೇ ರೀತಿ, ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಕೂಡ ಖಂಡ ನೀಯ’ ಎಂದು ಮುರಳೀಧರ ರಾವ್‌ ಹೇಳಿದರು. ‘ತನಿಖೆ ಪೂರ್ಣಗೊಳ್ಳುವುದಕ್ಕೂ ಮುನ್ನವೇ, ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಈ ಪ್ರಕರಣದಲ್ಲಿ ಆರ್‌ಎಸ್‌ಎಸ್‌ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಪ್ರಸ್ತಾಪಿಸಿದ್ದಾರೆ. ಇದು ಅವರ ಅಪ್ರಬುದ್ಧತೆಗೆ ಸಾಕ್ಷಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

* * 

ಬಿಜೆಪಿಯಲ್ಲಿ ವಂಶಾಡಳಿತವಿದೆ ಎಂಬುದನ್ನು ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಕೂಡ ಒಪ್ಪುವುದಿಲ್ಲ. ಬಿಜೆಪಿ ಯಾವುದೇ ವ್ಯಕ್ತಿ ಅಥವಾ ಕುಟುಂಬದ ಕೈಯಲ್ಲಿ ಇಲ್ಲ
ಮುರಳೀಧರ ರಾವ್‌
ರಾಜ್ಯ ಬಿಜೆಪಿ ಉಸ್ತುವಾರಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.