ADVERTISEMENT

ಪರಿಶಿಷ್ಟರಿಗೆ ಮೀಸಲಿಟ್ಟ ಹಣ ಸದ್ಬಳಕೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಮೇ 2017, 19:30 IST
Last Updated 14 ಮೇ 2017, 19:30 IST

ಹುಬ್ಬಳ್ಳಿ: ‘ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗಾಗಿ ಮೀಸಲಿಟ್ಟ ಹಣ ಬಳಕೆಯಾಗದೆ ಉಳಿಯುತ್ತಿದೆ. ಯೋಜನೆಗಳ ಬಗ್ಗೆ ಸ್ಥಳೀಯ ಅಧಿಕಾರಿಗಳು ಸಮಾಜದವರಲ್ಲಿ ತಿಳಿವಳಿಕೆ ಮೂಡಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.

ನವನಗರದ ಅಖಿಲ ಕರ್ನಾಟಕ ಡೊಂಬರ ಹಿತವರ್ಧಕ ಸಂಘ ಆಯೋಜಿಸಿದ್ದ ‘ಡೊಂಬರ ರಾಜ್ಯ ಮಟ್ಟದ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.

‘ಕೇವಲ ಸಮಾವೇಶಗಳಿಂದ ಸಮಾಜ ಉದ್ಧಾರ ಆಗುವುದಿಲ್ಲ. ಪತ್ರಿಯೊಬ್ಬರೂ ನಿಮ್ಮ ಸಮಾಜದಲ್ಲಿ ಹಿಂದುಳಿದಿರುವವರಿಗೆ ಸರ್ಕಾರದ ಸೌಲಭ್ಯಗಳನ್ನು ದೊರೆಕಿಸಿಕೊಡಲು ಶ್ರಮಿಸಬೇಕು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಶೇ 50ರಷ್ಟು ಎಸ್‌ಸಿ ಮತ್ತು ಎಸ್‌ಟಿ ಜನಾಂಗದ ಪ್ರಾಧ್ಯಾಪಕರಿದ್ದಾರೆ. ಅವರೆಲ್ಲರೂ ಸಮಾಜಕ್ಕೆ ಶ್ರಮಿಸಿದರೆ ಬಹುತೇಕ ಮಂದಿ ವಿದ್ಯಾವಂತರಾಗಿ ಬದುಕು ರೂಪಿಸಿಕೊಳ್ಳುತ್ತಾರೆ’ ಎಂದರು.

ADVERTISEMENT

‘ಸರ್ಕಾರದ ಸೌಲಭ್ಯ ಸದುಪಯೋಗಪಡಿಸಿಕೊಂಡು ಉನ್ನತ ಸ್ಥಾನಕ್ಕೆ ಹೋದವರು ಉಳಿದವರಿಗೂ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕು. ಅಲೆಮಾರಿ ಜನರಾಗಿದ್ದ ಡೊಂಬರು ಉತ್ತಮ ಜೀವನ ಕಂಡುಕೊಳ್ಳಲು ಮೊದಲು ವಿದ್ಯಾವಂತರಾಗಬೇಕು.

ಮಾಜದವರು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸರ್ಕಾರದ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ನವನಗರದಲ್ಲಿ ಡೊಂಬರ ಸಮುದಾಯ ಭವನ ನಿರ್ಮಾಣಕ್ಕೆ  ₹1 ಕೋಟಿ ಬಿಡುಗಡೆ ಮಾಡಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.

‘ಎರಡು ವರ್ಷಗಳ ಹಿಂದೆ ಧಾರವಾಡ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯದಲ್ಲಿ 25ನೇ ಸ್ಥಾನ ಪಡೆದಿತ್ತು. ಈ ಬಾರಿ 18ನೇ ಸ್ಥಾನ ಪಡೆದಿದೆ. ಇದಕ್ಕಾಗಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಶಿಕ್ಷಕರು ಸಾಕಷ್ಟು ಶ್ರಮಿಸಿದ್ದಾರೆ. ಅವರ ಶ್ರಮ ಶ್ಲಾಘನೀಯ’ ಎಂದರು.

ಪಾಲಿಕೆ ವಿರೋಧ ಪಕ್ಷದ ನಾಯಕ ಸುಭಾಸ ಶಿಂಧೆ, ಸದಸ್ಯ ಕರಿಯಪ್ಪ ಬಿಸಗಲ್‌, ತೆಲಂಗಾಣ ರಾಜ್ಯದಿಂದ ಬಂದಿದ್ದ ವೈ. ವೆಂಕಟನಾರಾಯಣ, ಶ್ರೀನಿವಾಸ ತಾಡಪತ್ರಿ, ಎಪಿಎಂಸಿ ಅಧ್ಯಕ್ಷ ಈಶ್ವರ ಕಿತ್ತೂರ, ಅಖಿಲ ಕರ್ನಾಟಕ ಡೊಂಬರ ಹಿತವರ್ಧಕ ಸಂಘದ ರಾಜ್ಯ ಘಟಕ ಅಧ್ಯಕ್ಷ ದಾನಪ್ಪ ಕಬ್ಬೇರ, ಉಪಾಧ್ಯಕ್ಷ ಎನ್‌.ಟಿ. ಚಂದ್ರಕಾಂತ, ಪ್ರಧಾನ ಕಾರ್ಯದರ್ಶಿ ಶಂಕರ ಕಟ್ಟಿಮನಿ, ಪದಾಧಿಕಾರಿ ಸುಮಿತ್ರಾಬಾಯಿ ಗೋಸಲ, ಆರ್‌.ಜಿ. ಮೂಲಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.