ADVERTISEMENT

ಪಾಕ್ ಹುಡುಗಿ ಭಾರತಕ್ಕೆ; ಹುಬ್ಬಳ್ಳಿ ಕುಟುಂಬದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 5:08 IST
Last Updated 24 ಏಪ್ರಿಲ್ 2017, 5:08 IST

ಹುಬ್ಬಳ್ಳಿ: ಪಾಕಿಸ್ತಾನದಲ್ಲಿ ಇದ್ದ ಪತ್ನಿಯನ್ನು ಸ್ವದೇಶಕ್ಕೆ ಕರೆತರಲು ಹುಬ್ಬಳ್ಳಿಯ ಡ್ಯಾನಿಯೆಲ್‌ ನಡೆಸಿದ ಶ್ರಮಕ್ಕೆ ಕೊನೆಗೂ ಫಲ ಸಿಕ್ಕಿದೆ. ಕೇಂದ್ರ ಸರ್ಕಾರದ ನೆರವಿನಿಂದ ಅವರ ಪತ್ನಿ ಸಿಲ್ವಿಯಾ ಭಾರತ ತಲುಪಿದ್ದಾರೆ.ಹಳೆ ಹುಬ್ಬಳ್ಳಿ ಹೆಗ್ಗೇರಿಯ ಗುಡಿ ಪ್ಲಾಟ್‌ ನಿವಾಸಿ ಡ್ಯಾನಿಯಲ್‌ ಹಾಗೂ ಲಾಹೋರ್‌ನ ನಿವಾಸಿ ಸಿಲ್ವಿಯಾ ಬುಧವಾರ (ಏಪ್ರಿಲ್‌ 19) ನವದೆಹಲಿಯಲ್ಲಿ ಒಂದುಗೂಡುವ ಮೂಲಕ ಒಂಬತ್ತು ತಿಂಗಳ  ಅಗಲಿಕೆ ಸುಖಾಂತ್ಯವಾಗಿದೆ.ಲಾಹೋರ್‌ ಸೊಸೆಯನ್ನು ಕರೆತರಲು ಡ್ಯಾನಿಯಲ್‌ ಜೊತೆಗೆ ಅವರ ತಂದೆ, ತಾಯಿಯೂ ದೆಹಲಿಗೆ ತೆರಳಿದ್ದರು. ಇದೇ 27ಕ್ಕೆ ನವ ಜೋಡಿ ರೈಲಿನ ಮೂಲಕ ಹುಬ್ಬಳ್ಳಿಗೆ ಬರಲಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಹುಬ್ಬಳ್ಳಿಯ ಡ್ಯಾನಿಯಲ್‌ ಮತ್ತು ಲಾಹೋರ್‌ನ ಸಿಲ್ವಿಯಾ ದೂರದ ಸಂಬಂಧಿ. ಅಲ್ಲದೇ, ಇವರ ನಡುವೆ ಕೆಲ ವರ್ಷಗಳ ಈಚೆಗೆ ಪ್ರೇಮಾಂಕುರವಾಗಿತ್ತು. 25 ದಿನಗಳ ವೀಸಾ ಪಡೆದು ಪಾಕಿಸ್ತಾನಕ್ಕೆ ತೆರಳಿದ್ದ ಡ್ಯಾನಿಯಲ್‌ 2016 ಜೂನ್‌ 25ರಂದು ಲಾಹೋರ್‌ನ ಚರ್ಚ್‌ವೊಂದರಲ್ಲಿ ಸಿಲ್ವಿಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ವೀಸಾ ಸಿಗದ ಕಾರಣ ಪತ್ನಿಯನ್ನು ತಮ್ಮೊಂದಿಗೆ ಭಾರತಕ್ಕೆ ಕರೆದುಕೊಂಡು ಬರಲು ಸಾಧ್ಯವಾಗದ ಕಾರಣಕ್ಕೆ ಜುಲೈ 11ರಂದು ಡ್ಯಾನಿಯಲ್‌ ಒಬ್ಬರೇ ಹುಬ್ಬಳ್ಳಿಗೆ ವಾಪಸಾಗಿದ್ದರು.

ಪತ್ನಿಯನ್ನು ಭಾರತಕ್ಕೆ ಕರೆತರಲು ಸಾಕಷ್ಟು ಪ್ರಯತ್ನ ನಡೆಸಿದ್ದರೂ ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ತಮ್ಮ ಸಂಕಷ್ಟವನ್ನು ಟ್ವೀಟರ್‌ ಮೂಲಕ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರ ಗಮನಕ್ಕೆ ತಂದಿದ್ದರು. ನೆರವಾಗುವಂತೆ ಸಂಸದ ಪ್ರಹ್ಲಾದ ಜೋಶಿ ಅವರಿಗೂ ಮನವಿ ಮಾಡಿದ್ದರು. ಈ ಕುರಿತು ಗಮನ ಸೆಳೆಯುವ ವರದಿ  ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿತ್ತು.

ADVERTISEMENT

ಡ್ಯಾನಿಯಲ್‌ ಅವರ ಮನವಿಗೆ ಸ್ಪಂದಿಸಿದ ಸಚಿವೆ ಸ್ವರಾಜ್‌, ವಿಷಯವನ್ನು ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಗಮನಕ್ಕೆ  ತಂದು, ಸಿಲ್ವಿಯಾಗೆ ವೀಸಾ ಮತ್ತು ಪಾಸ್‌ಪೋರ್ಟ್‌ ದೊರಕಿಸಿಕೊಡುವಲ್ಲಿ ನೆರವಾದರು. ಬುಧವಾರ ನವದೆಹಲಿಗೆ ಬಂದ ಸಿಲ್ವಿಯಾ ಅವರನ್ನು ಪತಿ ಡ್ಯಾನಿಯಲ್‌ ಮತ್ತು ಕುಟುಂಬದವರು ಸಂಭ್ರಮದಿಂದ ಬರಮಾಡಿಕೊಂಡಿದ್ದರು. ತಾವಿಬ್ಬರು ಒಂದಾಗಲು ಸಹಕರಿಸಿದ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌ ಹಾಗೂ ನೆರವು ನೀಡಿದ ಸಂಸದ ಪ್ರಹ್ಲಾದ ಜೋಶಿ, ಹುಬ್ಬಳ್ಳಿ –ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಘವೇಂದ್ರ ರಾಮದುರ್ಗ ಮತ್ತು ಮಾಧ್ಯಮದವರಿಗೆ ದಂಪತಿ ಧನ್ಯವಾದ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.