ADVERTISEMENT

ಪ್ರಾಮಾಣಿಕ ವ್ಯಾಪಾರಕ್ಕೆ ಇಸ್ಲಾಂ ಒತ್ತು: ಫಜಲುಲ್ಲಾ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 9:47 IST
Last Updated 16 ಜುಲೈ 2017, 9:47 IST

ಹುಬ್ಬಳ್ಳಿ:  ವ್ಯಾಪಾರದಲ್ಲಿ ನೀತಿ ಹಾಗೂ ಕಾನೂನುಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ ಎಂದು ಫಲಾಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಡಾ. ಸಯ್ಯದ್‌ ಫಜಲುಲ್ಲಾ ಚಿಸ್ತಿ ಹೇಳಿದರು. ಇಲ್ಲಿನ ಮೆಟ್ರೊ ಪೊಲೀಸ್‌ ಹೋಟೆಲ್‌ನಲ್ಲಿ ಫಲಾಹ ಶಿಕ್ಷಣ ಸಂಸ್ಥೆ ವತಿಯಿಂದ ‘ಇಸ್ಲಾಂ ಧರ್ಮದಲ್ಲಿ ವ್ಯಾಪಾರ ಮಾಡಲು ಇರುವ ನೀತಿ ಹಾಗೂ ಕಾನೂನುಗಳು’ ಕುರಿತು ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಇಸ್ಲಾಂ ಧರ್ಮದಲ್ಲಿ ಪ್ರಾಮಾಣಿಕ ವ್ಯಾಪಾರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಭಾರತೀಯ ಕಾನೂನು ಹಾಗೂ ಇಸ್ಲಾಂ ಕಾನೂನಿನ ಪ್ರಕಾರ ವ್ಯಾಪಾರ ಮಾಡಬೇಕು’ ಎಂದು ಅವರು ಹೇಳಿದರು. ‘ಇಂದು ಜನರಿಗೆ ವ್ಯಾಪಾರ ಮಾಡಲು ಇರುವ ಕಾನೂನಿನ ತಿಳಿವಳಿಕೆ ಸಮರ್ಪಕವಾಗಿಲ್ಲ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನೀಡಲಾಗುತ್ತಿರುವ ಸಾಲ ಸೌಲಭ್ಯಗಳ ಕುರಿತು ಮಾಹಿತಿ ಇಲ್ಲದಂತಾಗಿದೆ’ ಎಂದರು.

‘ನ್ಯಾಯಯುತ ವ್ಯಾಪಾರವನ್ನು ಮಾಡಬೇಕೇ ಹೊರತು ಮೋಸ, ವಂಚನೆ, ಸುಳ್ಳು ಹೇಳಿ ಲಾಭಗಳಿಸುವುದು ಇಸ್ಲಾಂ ವಿರೋಧವಾಗಿದೆ’ ಎಂದು ಹೇಳಿದರು. ಉತ್ತರಪ್ರದೇಶದ ಜಾಮಿಯಾ ಅಶರಫಿಯಾ ಕಾಲೇಜಿನ ಪ್ರಾಚಾರ್ಯ ಮುಫ್ತಿ ನಿಜಾಮುದ್ದೀನ್‌ ಮಿಸ್ಬಾಹಿ ಸಾಹೇಬ ಮಾತನಾಡಿ, ಭ್ರಷ್ಟಾಚಾರ ಮಾಡಿ ಬೇರೆಯವರಿಂದ ಹಣ ಪಡೆಯುವುದು ಇಸ್ಲಾಂ ವಿರುದ್ಧವಾಗಿರುವ ನೀತಿಯಾಗಿದೆ ಎಂದು ಹೇಳಿದರು.

ADVERTISEMENT

‘ಶ್ರಮ ವಹಿಸಿ ಪ್ರಾಮಾಣಿಕವಾಗಿ ವ್ಯಾಪಾರ ಮಾಡಿದರೆ ಅಲ್ಲಾ ಮತ್ತು ಪ್ರವಾದಿ ಮಹಮ್ಮದ್‌ ಅವರ ಆಶೀರ್ವಾದಕ್ಕೆ ಪಾತ್ರರಾಗಬಹುದು’ ಎಂದು ಅವರು ಹೇಳಿದರು. ಸಯ್ಯದ್‌ ಖಾಸಿಂ ಅಶರಫಿ ಜಿಲಾನಿ ಅಧ್ಯಕ್ಷತೆ ವಹಿಸಿದರು. ಮೈನುದ್ದೀನ್‌ ಶೇಖ್‌, ತನವೀರ್‌ ಖತಿಬ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.