ADVERTISEMENT

ಪ್ರೇಮಿಗಳ ಉತ್ಸಾಹಕ್ಕೆ ಬರಲಿಲ್ಲ ಅಡ್ಡಿ

ಅವಳಿ ನಗರದ ಪ್ರೇಕ್ಷಣೀಯ ಸ್ಥಳ ಬಳಿ ಬಿಗಿ ಬಂದೋಬಸ್ತ್‌

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 12:59 IST
Last Updated 15 ಫೆಬ್ರುವರಿ 2017, 12:59 IST

ಹುಬ್ಬಳ್ಳಿ:  ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಪ್ರೇಮಿಗಳು ಪರಸ್ಪರ ಗುಲಾಬಿ ಹೂ ಸೇರಿದಂತೆ ವಿವಿಧ ಬಗೆಯ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಮಂಗಳವಾರ ಪ್ರೇಮಿಗಳ ದಿನವನ್ನು ಆಚರಿಸಿದರು.

ಈ ದಿನಾಚರಣೆ ಭಾರತೀಯ ಸಂಸ್ಕೃತಿಗೆ ವಿರುದ್ಧವಾದುದು ಎಂದು ವಾದ ಹೂಡಿದ್ದ ಶ್ರೀರಾಮ ಸೇನೆ ಜೋಡಿಗಳು ಕಂಡರೆ ಸ್ಥಳದಲ್ಲೇ ಮದುವೆ ಮಾಡುವುದಾಗಿ ಬೆದರಿಕೆ ಹಾಕಿತ್ತು. ಆದರೆ, ಅಂತಹ ಘಟನೆಗಳು ನಡೆಯಲಿಲ್ಲ.

ಪ್ರೇಮಿಗಳಿಗೆ ಅಡ್ಡಬರದಂತೆ ತಡೆಯಲು ನಗರದ ನೃಪತುಂಗ ಬೆಟ್ಟ, ಇಂದಿರಾ ಗಾಜಿನಮನೆ, ಉಣಕಲ್‌ ಕೆರೆ ಉದ್ಯಾನದ ಬಳಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ಸ್ಥಳಗಳಲ್ಲಿ ಪೊಲೀಸರು ಇರುವುದನ್ನು ಕಂಡು ಬೆದರಿದ ಯುವ ಪ್ರೇಮಿಗಳು ಇತ್ತ ಸುಳಿಯಲಿಲ್ಲ. ಬದಲಾಗಿ, ಬೈಕ್‌ನಲ್ಲಿ ನಗರದ ಹೊರವಲಯಕ್ಕೆ ಹೋಗಿ ಪ್ರೇಮ ನಿವೇದನೆ ಮಾಡಿಕೊಂಡರು.

ADVERTISEMENT

ಹುಬ್ಬಳ್ಳಿಯ ಪ್ರೇಮಿಗಳು ಕುಸುಗಲ್‌, ಗಬ್ಬೂರು ಕ್ರಾಸ್‌ನತ್ತಲೂ, ಧಾರವಾಡದ ಯುವ ಜೋಡಿಗಳು ಅಳ್ನಾವರ ರಸ್ತೆಯತ್ತ ತೆರಳಿ ಸಂಜೆಯವರೆಗೂ ಕಳೆದು ಊರಿಗೆ ಮರಳಿದರು.ಶ್ರೀರಾಮಸೇನೆಯಿಂದ ಸೀತಾ ಪೂಜೆ: ಮೊದಲಿನಿಂದಲೂ ಪ್ರೇಮಿಗಳ ದಿನವನ್ನು ವಿರೋಧಿಸಿಕೊಂಡು ಬಂದಿರುವ ಶ್ರೀರಾಮ ಸೇನಾ ಮಂಗಳವಾರ ರಾಯಾಪುರದಲ್ಲಿರುವ ನಿರಾಶ್ರಿತರ ಪುನರ್ವಸತಿ ಕೇಂದ್ರಕ್ಕೆ ತೆರಳಿ ಅವರ ಪಾದಗಳನ್ನು ತೊಳೆದು ಪೂಜೆ ಮಾಡುವ ಮೂಲಕ ಮಾತಾ ಸೀತಾ ಪೂಜೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಉತ್ತರ ಪ್ರಾಂತ ಅಧ್ಯಕ್ಷ ಬಸವರಾಜ ಬೂದಿಹಾಳ, ‘ಪ್ರೇಮಿಗಳ ದಿನವು ಪಾಶ್ಚಿಮಾತ್ಯ ಸಂಸ್ಕೃತಿಯಾಗಿದ್ದು, ಸೇನೆ ಇದನ್ನು ಖಂಡಿಸುತ್ತದೆ. ಕೆಲ ವರ್ಷಗಳಿಂದ ನಾವು ಶೇ 70ರಷ್ಟು ಆಚರಣೆಯನ್ನು ನಿಲ್ಲಿಸಿದ್ದೇವೆ’ ಎಂದರು.

‘ನಮ್ಮ ಮುಂದಿನ ಪೀಳಿಗೆ ಪ್ರೇಮಿಗಳ ದಿನದ ಬದಲು ತಂದೆ ತಾಯಿಯನ್ನು ಪೂಜಿಸುವ ದಿನವನ್ನಾಗಿ ಆಚರಿಸಬೇಕು’ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಿರಾಶ್ರಿತರ ಪುನರ್ವಸತಿ ಕೇಂದ್ರದ ಅಧೀಕ್ಷಕ ದಿವಾಕರ ಶಂಕಿನದಾಸರ, ಸಂಘಟನೆಯ ಮುಖಂಡರಾದ ರಾಘವೇಂದ್ರ ಕಠಾರೆ, ರವಿ ಪಾಂಡ್ರೆ, ಮಂಜುನಾಥ ದೊಡಮನಿ, ಪವನ ನಾಗರಹಳ್ಳಿ, ಪ್ರವೀಣ ಮಾಳದ್ಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.