ADVERTISEMENT

ಬಿಆರ್‌ಟಿಎಸ್‌ ರಸ್ತೆಯಲ್ಲಿ ದೂಳಿನ ಮಜ್ಜನ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 7:28 IST
Last Updated 8 ನವೆಂಬರ್ 2017, 7:28 IST
ವಿದ್ಯಾನಗರದ ಜೆ.ಜಿ. ಕಾಮರ್ಸ್‌ ಕಾಲೇಜಿನ ಎದುರಿನ ಡಾಂಬರ್ ರಸ್ತೆ ಅಗೆದು ಮತ್ತೆ ಮುಚ್ಚಿದ್ದರಿಂದ ಉಂಟಾಗಿರುವ ದೂಳಿನಲ್ಲೇ ವಾಹನಗಳು ಸಾಗಿದವು
ವಿದ್ಯಾನಗರದ ಜೆ.ಜಿ. ಕಾಮರ್ಸ್‌ ಕಾಲೇಜಿನ ಎದುರಿನ ಡಾಂಬರ್ ರಸ್ತೆ ಅಗೆದು ಮತ್ತೆ ಮುಚ್ಚಿದ್ದರಿಂದ ಉಂಟಾಗಿರುವ ದೂಳಿನಲ್ಲೇ ವಾಹನಗಳು ಸಾಗಿದವು   

ಹುಬ್ಬಳ್ಳಿ: ಇತ್ತೀಚೆಗೆ ಸುರಿದ ಮಳೆಯಿಂದಾಗಿ ನೀರು ನಿಂತುಕೊಂಡು ಅವಾಂತರ ಸೃಷ್ಟಿಸಿದ್ದ ವಿದ್ಯಾನಗರದ ಜೆ.ಜಿ. ಕಾಮರ್ಸ್‌ ಕಾಲೇಜಿನ ಎದುರಿನ ರಸ್ತೆಯಲ್ಲಿ ಪ್ರಯಾಣಿಸುವವರಿಗೆ ಇದೀಗ ದೂಳಿನ ಮಜ್ಜನ.

ಬಿಆರ್‌ಟಿಎಸ್‌ ಕಂಪೆನಿಯವರು ಇಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ಅದಕ್ಕೂ ಮೊದಲು ಇಲ್ಲಿ ನೀರು ನಿಲ್ಲದಂತೆ ತಡೆಯಲು ಭಾರಿ ಪೈಪ್‌ಗಳನ್ನು ಅಳವಡಿಸಲು ಸೋಮವಾರ ರಾತ್ರಿ ರಸ್ತೆಯನ್ನು ಅಗೆಯಲಾಗಿತ್ತು. ಮಂಗಳವಾರ ಬೆಳಿಗ್ಗೆ ಅದನ್ನು ಮುಚ್ಚಲಾಗಿದೆ.

ಆದರೆ, ಸಹಸ್ರಾರು ವಾಹನಗಳು ನಿರಂತರವಾಗಿ ಸಂಚರಿಸುತ್ತಿರುವುದರಿಂದ ರಸ್ತೆ ಹದಗೆಟ್ಟು ಸಾಕಷ್ಟು ದೂಳು ಏಳುತ್ತಿದೆ. ಇತ್ತೀಚೆಗಷ್ಟೇ ಪೈಪ್‌ಗಳನ್ನು ಅಳವಡಿಸುವ ಸಲುವಾಗಿ ಬಿಆರ್‌ಟಿಎಸ್‌ ಕಾಮಗಾರಿ ಗುತ್ತಿಗೆ ಹಿಡಿದಿರುವ ಕಂಪೆನಿ ಹೊಸ ರಸ್ತೆಯನ್ನೇ ಅಗೆದು ಸಾರ್ವಜನಿಕರ ಟೀಕೆಗೆ ತುತ್ತಾಗಿತ್ತು. ಮತ್ತೀಗ ರಾತ್ರೋ ರಾತ್ರಿ ರಸ್ತೆ ಅಗೆದು ಕಾಟಾಚಾರಕ್ಕೆ ಮುಚ್ಚಿದ್ದರಿಂದ ಪ್ರಯಾಣಿಕರ ಮುಖಕ್ಕೆ ದೂಳು ಅಡರುತ್ತಿದೆ.

ADVERTISEMENT

ಸುತ್ತಮುತ್ತಲಿನ ಅಂಗಡಿಯವರಿಗೆ ದೂಳು ದುಃಸ್ವಪ್ನವಾಗಿ ಕಾಡುತ್ತಿದೆ. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅಪೋಲೊ ಟೈರ್‌ ಮಳಿಗೆಯ ಉದ್ಯೋಗಿ ಜಾವೇದ್‌ ಅಹ್ಮದ್‌ ಬಳ್ಳಾರಿ, ‘ಬೆಳಿಗ್ಗೆ ಬಂದು ನೋಡುವಷ್ಟರಲ್ಲಿ ರೋಡ್‌ ಕಡಿದು ಮತ್ತೆ ಮುಚ್ಚಿ ಹೋಗಿದ್ದಾರೆ. ಸಾವಿರಾರು ವಾಹನಗಳು ದಿನಾಲೂ ಇದೇ ರಸ್ತೆಯಲ್ಲಿ ಹೋಗುತ್ತವೆ. ನನಗೂ ಬೆಳಿಗ್ಗೆಯಿಂದ ಕಸ ಹೊಡೆದು ಹೊಡೆದೂ ಸಾಕಾಗಿದೆ. ಬೇಕಿದ್ದರೆ ನಮ್ಮ ವರ್ಕ್‌ಶಾಪ್‌ ಫೋಟೊ ತೆಗೀರಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.