ADVERTISEMENT

ಬಿಸಿಲಿನ ನಡುವೆಯೂ ಪ್ರಚಾರದ ಕಸರತ್ತು

ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಚುರುಕಿನ ಪ್ರಚಾರ; ಬಿಸಿಲಿನಿಂದ ರಕ್ಷಣೆಗೆ ಕಾರ್ಯಕರ್ತರು, ಟೊಪ್ಪಿಗೆ ಬಳಕೆ

ಪ್ರಮೋದ ಜಿ.ಕೆ
Published 26 ಏಪ್ರಿಲ್ 2018, 10:37 IST
Last Updated 26 ಏಪ್ರಿಲ್ 2018, 10:37 IST

ಹುಬ್ಬಳ್ಳಿ: ಒಂದೆಡೆ ಚುನಾವಣಾ ಪ್ರಚಾರದ ಕಾವು ದಿನದಿಂದ ದಿನಕ್ಕೆ ಚುರುಕು ಪಡೆದುಕೊಳ್ಳುತ್ತಿದ್ದರೆ, ಇನ್ನೊಂದೆಡೆ ಬಿಸಿಲ ಧಗೆ ಕೂಡ ಹೆಚ್ಚಾಗುತ್ತಿದೆ. ಆದ್ದರಿಂದ ಮತದಾರರ ಮನಗೆಲ್ಲಲು ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ನವರು ನಾನಾ ಕಸರತ್ತು ನಡೆಸುತ್ತಿದ್ದಾರೆ.

ಒಂದು ವಾರದಿಂದ ಬಿಸಿಲು ಹೆಚ್ಚಾಗಿದ್ದರಿಂದ ರಾಜಕೀಯ ನಾಯಕರು ಬೆಳಿಗ್ಗೆ ಮತ್ತು ಸಂಜೆ ಮಾತ್ರ ಹೆಚ್ಚು ಪ್ರಚಾರ ಕಾರ್ಯ ಕೈಗೊಳ್ಳುತ್ತಿದ್ದಾರೆ. ಮಧ್ಯಾಹ್ನದ ವೇಳೆ ಗುಂಪು ಸಭೆ ನಡೆಸುತ್ತಿದ್ದಾರೆ. ಬಿಸಿಲಿನ ಧಗೆಯಿಂದ ಪಾರಾಗಲು ಕಾರ್ಯಕರ್ತರು ಪ್ರಚಾರದ ವೇಳೆ ಟೊಪ್ಪಿಗೆ ಧರಿಸುತ್ತಿದ್ದಾರೆ. ಆಗಾಗ ತಂಪು ಪಾನೀಯ ಮೊರೆ ಹೋಗಿದ್ದಾರೆ.

ಬಿಸಿಲಿರುವುದರಿಂದ ಬೆಳಿಗ್ಗೆಯಿಂದ ಸಂಜೆಯವರೆಗೆ ಒಂದೇ ತಂಡಪ್ರಚಾರ ಮಾಡಲು ಸಾಧ್ಯವಾಗುವುದಿಲ್ಲ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕವು, ನಾಲ್ಕು ತಂಡಗಳನ್ನು ರಚಿಸಿ ಬೇರೆ, ಬೇರೆ ಸಮಯ ನಿಗದಿ ಮಾಡಿದೆ. ಬೆಳಿಗ್ಗೆ 6ರಿಂದ 9 ಗಂಟೆಯ ತನಕ ಮೊದಲ ತಂಡದ ಕಾರ್ಯಕರ್ತರು ನೃಪತುಂಗ ಬೆಟ್ಟ, ಗಾಲ್ಫ್‌ ಕ್ಲಬ್‌ ಮೈದಾನ, ಇಂದಿರಾಗಾಂಧಿ ಗಾಜಿನ ಮನೆ, ಆಯಾ ವಾರ್ಡ್‌ಗಳಲ್ಲಿರುವ ಉದ್ಯಾನ, ಜಿಮ್‌, ಕ್ರಿಕೆಟ್‌ ಅಕಾಡೆಮಿ ಮುಂತಾದ ಕಡೆಗಳಲ್ಲಿ ಪ್ರಚಾರ ನಡೆಸುತ್ತಾರೆ. 9ರಿಂದ 12ರ ತನಕ ಎರಡನೇ ತಂಡದವರು ಅಭ್ಯರ್ಥಿ ಜೊತೆ ತಮ್ಮ ವ್ಯಾಪ್ತಿಯಲ್ಲಿನ ಪ್ರತಿ ಮನೆ ಮನೆಗೆ ಭೇಟಿ ಕೊಡುತ್ತಾರೆ.

ADVERTISEMENT

ಮೂರನೇ ತಂಡ ಮಧ್ಯಾಹ್ನ 2ರಿಂದ ಸಂಜೆ 5 ಗಂಟೆಯ ತನಕ ಮನೆ ಮನೆಗೆ ಹೋಗಿ ಪ್ರಚಾರ ಕಾರ್ಯ ನಡೆಸುತ್ತದೆ. ಸಂಜೆ 6ರಿಂದ 9ರ ತನಕ ನಾಲ್ಕನೇ ತಂಡದ ಕಾರ್ಯಕರ್ತರು ಫುಡ್‌ ಸ್ಟ್ರೀಟ್‌, ರೆಸ್ಟೊರೆಂಟ್‌, ಕೆಫೆಗಳು, ಕಾಲೇಜು ಆವರಣಗಳು ಮತ್ತು ವಸತಿ ನಿಲಯಗಳಲ್ಲಿ ಮತ ಕೇಳುತ್ತಾರೆ.

‘ಟಿಕೆಟ್‌ ಘೋಷಣೆಯಾದ ದಿನದಿಂದಲೇ ಪ್ರಚಾರ ಕಾರ್ಯ ಆರಂಭಿಸಿದ್ದೇವೆ. ಪ್ರತಿ ಮತದಾರನನ್ನೂ ತಲುಪುವ ಗುರಿ ಹೊಂದಿದ್ದೇವೆ. ತಂಡಗಳ ನಡುವಿನ ಸಂವಹನಕ್ಕೆ ವಾಟ್ಸ್‌ ಆ್ಯಪ್‌ ಗ್ರೂಪ್‌ ಮಾಡಿಕೊಂಡಿದ್ದೇವೆ’ ಎಂದು ಇಂಡಿಯನ್‌ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ನ ಅರವಿಂದ ನಗರ ಬ್ಲ್ಯಾಕ್‌ ಅಧ್ಯಕ್ಷ ರಾಜೀವ ಲಡ್ವಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಚಾರಕ್ಕಾಗಿ ಬಿಜೆಪಿ ಕೂಡ ತಂತ್ರ ಹೆಣೆದಿದೆ. ಸೆಂಟ್ರಲ್ ಕ್ಷೇತ್ರದಲ್ಲಿ ಜಗದೀಶ ಶೆಟ್ಟರ್‌ ಮತ್ತು ಪೂರ್ವ ಕ್ಷೇತ್ರದಲ್ಲಿ ಚಂದ್ರಶೇಖರ ಗೋಕಾಕ ಬೆಳಿಗ್ಗೆ 6ರಿಂದ 8ರ ತನಕ ವಾಯುವಿಹಾರಿಗಳನ್ನು ಭೇಟಿಯಾಗುತ್ತಾರೆ. 8.30ರಿಂದ 12ರ ತನಕ ಮನೆ ಮನೆಗೆ ಹೋಗಿ ಮತಯಾಚಿಸುತ್ತಾರೆ. ಮಧ್ಯಾಹ್ನ ವಿಶ್ರಾಂತಿ ಪಡೆದು ಸಂಜೆ 4ರಿಂದ ರಾತ್ರಿ 9ರ ತನಕ ಮತ ಯಾಚನೆ ಮುಂದುವರಿಸುತ್ತಾರೆ. ಇದರ ನಡುವೆ ಕ್ಷೇತ್ರ ವ್ಯಾಪ್ತಿಯಲ್ಲಿನ ಮತದಾರರ ಮದುವೆ ಸಮಾರಂಭಗಳಿಗೂ ಹೋಗುತ್ತಿದ್ದಾರೆ. ಅಲ್ಲಲ್ಲಿ ಗುಂಪು ಸಭೆಗಳನ್ನು ಏರ್ಪಡಿಸುತ್ತಿದ್ದಾರೆ. ಮಹಿಳಾ ಕಾರ್ಯಕರ್ತರೂ ತಂಡ ರಚಿಸಿಕೊಂಡು ಮತಯಾಚಿಸುತ್ತಿದ್ದಾರೆ.

‘ಪ್ರತಿ ವಾರ್ಡ್‌ಗಳಲ್ಲಿ ಕಾರ್ಯಕರ್ತರೇ ಬಿಸಿಲಿನ ನಡುವೆ ಪ್ರಚಾರ ನಡೆಸುತ್ತಿದ್ದಾರೆ. ಅದರ ಮೇಲುಸ್ತುವಾರಿ ನೋಡಿಕೊಳ್ಳುತ್ತೇನೆ. ದಿನಕ್ಕೊಂದು ವಾರ್ಡ್‌ಗೆ ಭೇಟಿ ನೀಡುತ್ತೇನೆ. ಬಿಸಿಲು ಹೆಚ್ಚಿದ್ದಾಗ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯತ್ತೇವೆ’ ಎಂದು ಪೂರ್ವ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ ಗೋಕಾಕ ತಿಳಿಸಿದರು.

ಸೆಂಟ್ರಲ್‌ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ರಾಜಣ್ಣ ಕೊರವಿ ತಮ್ಮ ಬೆಂಬಲಿಗರ ಜೊತೆ ಬೆಳಿಗ್ಗೆ 6 ಗಂಟೆಯಿಂದ ಕ್ರಿಕೆಟ್‌ ಮೈದಾನ, ಕ್ಲಬ್‌ಗಳಿಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಾರೆ. ಮಹಿಳಾ ಮತದಾರರನ್ನು ಸೆಳೆಯಲು ಮಹಿಳಾ ಕಾರ್ಯಕರ್ತರೇ ಅಲ್ಲಲ್ಲಿ ಸಭೆ ನಡೆಸುತ್ತಾರೆ. ಸಂಜೆ 7 ಗಂಟೆಗೆ ಪ್ರತಿದಿನ ಒಂದೊಂದು ವಾರ್ಡ್‌ನಲ್ಲಿ ಬಹಿರಂಗ ಸಭೆ ಆಯೋಜಿಸುತ್ತಿದ್ದಾರೆ. ಎರಡು ದಿನಗಳಿಂದ ವಾರ್ಡ್‌ ವಾಸ್ತವ್ಯ ಕೂಡ ಮಾಡುವ ಮೂಲಕ ಮತದಾರರ ಮನಗೆಲ್ಲಲು ಕಾರ್ಯತಂತ್ರ ರೂಪಿಸಿದ್ದಾರೆ.

ಬಿಸಿಲಿನ ಧಗೆ ಹೆಚ್ಚಿರುವುದರಿಂದ ಪ್ರಚಾರಕ್ಕೆ ಸಮಸ್ಯೆಯೇನೂ ಆಗಿಲ್ಲ. ಕಾರ್ಯಕರ್ತರಿಗೆ ಟೊಪ್ಪಿಗೆ ಕೊಡಿಸಿದ್ದೇವೆ. ಅಲ್ಲಲ್ಲಿ ನೀರು ಅಥವಾ ತಂಪು ಪಾನೀಯ ಕುಡಿದು ಪ್ರಚಾರ ನಡೆಸುತ್ತೇವೆ
– ರಾಜಣ್ಣ ಕೊರವಿ ಜೆಡಿಎಸ್‌ ಅಭ್ಯರ್ಥಿ

ಹಿಂದಿನ ಐದು ಚುನಾವಣೆಗಳ ವೇಳೆ ಮತ ಕೇಳಲು ಹೋದಾಗ ಜನರ ಪ್ರತಿಕ್ರಿಯೆ ಹೇಗಿತ್ತೋ, ಈಗಲೂ ಹಾಗೆ ಇದೆ. ಚುನಾವಣೆಯ ಬಿಸಿ ಮುಂದೆ ಬಿಸಿಲು ಯಾವ ಲೆಕ್ಕವೂ ಅಲ್ಲ
ಜಗದೀಶ ಶೆಟ್ಟರ್‌, ಸೆಂಟ್ರಲ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

41ಕ್ಕೆ ಏರಿದ ತಾಪಮಾನ

ಹುಬ್ಬಳ್ಳಿ: ಒಂದು ವಾರದಿಂದ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಏ.18ರಂದು 35 ಡಿಗ್ರಿ ಸೆಲ್ಸಿಯಸ್‌ ಇತ್ತು. ಎರಡು ದಿನಗಳ ಬಳಿಕ 37ಕ್ಕೆ ಏರಿಕೆಯಾಯಿತು. 21ರಂದು 40 ಡಿಗ್ರಿ ಸೆಲ್ಸಿಯಸ್‌ ಇದ್ದ ಬಿಸಿಲು ಎರಡು ದಿನಗಳ ನಂತರ 38ಕ್ಕೆ ಕುಸಿಯಿತು. 24ರಂದು 40 ಡಿಗ್ರಿ ಮತ್ತು 25ರಂದು (ಬುಧವಾರ) 41 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.