ADVERTISEMENT

ಬೆಳೆ ಪರಿಹಾರ: ಖಾತೆಗೆ ಬಂದ ಹಣ ಕೈಗೆ ಬರಲಿಲ್ಲ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 10:08 IST
Last Updated 16 ಏಪ್ರಿಲ್ 2017, 10:08 IST

ಹುಬ್ಬಳ್ಳಿ: ‘ಬರಗಾಲದಿಂದ ಜಿಲ್ಲೆಯ ರೈತರು ತತ್ತರಿಸಿದ್ದಾರೆ. ಮಳೆ ಇಲ್ಲದೆ ಕಂಗಾಲಾಗಿದ್ದ ರೈತರು ಬೆಳೆ ಪರಿಹಾರ ನಿರೀಕ್ಷೆಯಲ್ಲಿ ಇದ್ದರು. ಆದರೆ, ಹಣ ಖಾತೆಗೆ ವರ್ಗಾವಣೆ ಆಗಿ ಕೈ ಸೇರುವ ಮುನ್ನವೇ ಅದನ್ನು ಸಾಲಕ್ಕೆ ಮುರಿದುಕೊಳ್ಳಲಾಗಿದೆ’ ಎಂದು ಶಿರಗುಪ್ಪಿ ರೈತ ಬಸಪ್ಪ ನರ್ತಿ ಆರೋಪಿಸಿದರು. 

‘28 ಎಕರೆ ಜಮೀನು ಹೊಂದಿರುವ ನಾನು ವಿಜಯಾ ಬ್ಯಾಂಕ್‌ ಸೇರಿದಂತೆ ವಿವಿಧೆಡೆ ಒಟ್ಟು ₹8 ಲಕ್ಷ ಸಾಲ ಮಾಡಿದ್ದೆ. ಮೂರು ವರ್ಷಗಳಿಂದ ಸರಿಯಾಗಿ ಮಳೆ ಇಲ್ಲದೇ ಇರುವುದರಿಂದ ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಹಾಕಿದ್ದ ಬೆಳೆಯು ಕೈಗೆ ಬರಲಿಲ್ಲ. ಸರ್ಕಾರ ಕೊನೆಗೂ ₹10,880 ಬೆಳೆ ಪರಿಹಾರವನ್ನು ಖಾತೆಗೆ ಹಾಕಿತ್ತು. ಅದು ಕೈ ಸೇರುವ ಮುನ್ನವೇ ವಿಜಯಾ ಬ್ಯಾಂಕ್‌ ಭಂಡಿವಾಡ ಶಾಖೆಯಲ್ಲಿ ಮುರಿದುಕೊಳ್ಳಲಾಗಿದೆ’ ಎಂದು ಅವರು ಆರೋಪಿಸಿದರು.

‘ಶಿರಗುಪ್ಪಿ ಗ್ರಾಮ ಒಂದರಲ್ಲೇ 15ಕ್ಕೂ ಹೆಚ್ಚು ರೈತರಿಗೆ ಬಸಪ್ಪ ನರ್ತಿ ಅವರಿಗೆ ಆದಂತೆ ಅನ್ಯಾಯ ಆಗಿದೆ. ಮಳೆ–ಬೆಳೆ ಇಲ್ಲದೇ ರೈತರು ಕಂಗಾಲಾಗಿದ್ದರು. ಜೀವನ ಮಾಡುವುದು ಕಷ್ಟವಾಗಿತ್ತು. ಬೆಳೆ ಪರಿಹಾರಕ್ಕಾಗಿ ಮೂರು ವರ್ಷಗಳಿಂದ ಚಾತಕ ಪಕ್ಷಿಗಳಂತೆ ಕಾದು ಕುಳಿತ್ತಿದ್ದರು. ಇನ್ನೇನು ಪರಿಹಾರ ಕೈಗೆ ಬರಬೇಕು ಎನ್ನುವಷ್ಟರಲ್ಲಿ ರೈತರು ಮಾಡಿದ್ದ ಸಾಲಕ್ಕೆ ಮುರಿದುಕೊಳ್ಳಲಾಗಿದೆ. ಇದರಿಂದ ರೈತರಿಗೆ ಅನ್ಯಾಯವಾಗಿದೆ. ಇದೇ ರೀತಿ ಮಂಟೂರ ಗ್ರಾಮದ ರೈತರಿಗೂ ಅನ್ಯಾಯ ಆಗಿದೆ’ ಎಂದು ರೈತ ಮುಖಂಡ ಶಿವಣ್ಣ ಹುಬ್ಬಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.