ADVERTISEMENT

ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

ಯೂನಿಯನ್‌ ಬ್ಯಾಂಕ್‌ ಎದುರು ಧರಣಿ ನಡೆಸಿದ ನೌಕರರು

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 8:59 IST
Last Updated 20 ಜುಲೈ 2017, 8:59 IST

ಹುಬ್ಬಳ್ಳಿ:  ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬ್ಯಾಂಕ್‌ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ವಿವಿಧ ಬ್ಯಾಂಕುಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ನಗರದ ಯೂನಿಯನ್‌ ಬ್ಯಾಂಕ್‌ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

‘ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ಒಂದೊಂದಾಗಿ ಖಾಸಗೀಕರಣ ಮಾಡಲಾಗುತ್ತಿದೆ. ಇದರಿಂದ ಬ್ಯಾಂಕ್‌ ನೌಕರರು ಮತ್ತು ಅಧಿಕಾರಿಗಳಿಗೆ ಅಭದ್ರತೆ ಕಾಡುತ್ತಿದೆ. ಅಲ್ಲದೆ ಬ್ಯಾಂಕುಗಳ ವಿಲೀನಗೊಳಿಸುತ್ತಿರುವುದು ಖಂಡನೀಯ’ ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

‘ಬ್ಯಾಂಕುಗಳಿಂದ ದೊಡ್ಡ ಮೊತ್ತದ ಸಾಲ ಪಡೆದು ಮರುಪಾವತಿಸದವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಸಾಲ ವಸೂಲಾತಿ ಮಾಡಬೇಕು. ಇಲ್ಲವಾದಲ್ಲಿ ಬ್ಯಾಂಕುಗಳು ದಿವಾಳಿ ಆಗಲಿವೆ. ಈ ಸಂಬಂಧ ಬ್ಯಾಂಕುಗಳು ಕ್ರಮ ಕೈಗೊಳ್ಳಬೇಕು’ ಎಂದು ಸ್ಟೇಟ್‌ ಬ್ಯಾಂಕ್‌ ಯೂನಿಯನ್‌ನ ಪ್ರಾದೇಶಿಕ ಕಾರ್ಯದರ್ಶಿ ರುದ್ರಗೌಡ ಪಾಟೀಲ ತಿಳಿಸಿದರು.

ADVERTISEMENT

‘ಈ ಮೊದಲು ಬ್ಯಾಂಕುಗಳು ಸೇವಾ ಮನೋಭಾವ ಇಟ್ಟುಕೊಂಡು ಕೆಲಸ ಮಾಡುತ್ತಿದ್ದವು. ಆದರೆ, ಈಗ ಬ್ಯಾಂಕ್‌ನಲ್ಲಿ ವ್ಯವಹರಿಸುವ ಗ್ರಾಹಕರಿಗೆ ಸೇವಾ ಶುಲ್ಕ ವಿಧಿಸಲಾಗುತ್ತಿದೆ. ಖಾತೆಗಳಲ್ಲಿ ಕನಿಷ್ಠ ಮೊತ್ತ ಇರಿಸಿದ ಮತ್ತು ನಿಗದಿಗಿಂತ ಹೆಚ್ಚು ಎಟಿಎಂ ಬಳಸಿದ ಗ್ರಾಹಕರಿಗೆ ಸೇವಾ ಶುಲ್ಕ ವಿಧಿಸುತ್ತಿರುವುದು ಖಂಡನೀಯ’ ಎಂದು ತಿಳಿಸಿದರು.

ಸ್ಟೇಟ್‌ ಬ್ಯಾಂಕ್‌ ಅಧಿಕಾರಿಗಳ ಸಂಘದ ಅಧ್ಯಕ್ಷ ರಾಮಮೋಹನ್‌ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.