ADVERTISEMENT

ಬ್ಯಾಂಕ್‌ ಸಿಬ್ಬಂದಿ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಮೇ 2017, 6:02 IST
Last Updated 16 ಮೇ 2017, 6:02 IST

ಹುಬ್ಬಳ್ಳಿ: ನವಲಗುಂದದ ವಿಜಯಾ ಬ್ಯಾಂಕ್‌ ಸಿಬ್ಬಂದಿ ಮೇಲೆ ರೈತ ಶಂಕ್ರಪ್ಪ ಸಂಗಟಿ ಹಲ್ಲೆ ನಡೆಸಿರುವುದನ್ನು ಖಂಡಿಸಿ ಬ್ಯಾಂಕ್‌ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ವಿಜಯ ಬ್ಯಾಂಕ್‌ ಸಿಬ್ಬಂದಿ ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಲ್ಯಾಮಿಂಗ್ಟನ್‌ ರಸ್ತೆಯ ವಿಜಯ ಬ್ಯಾಂಕ್‌ ಮುಂದೆ ಜಮಾಯಿಸಿದ ಸಿಬ್ಬಂದಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬಳಿಕ ಬ್ಯಾಂಕ್‌ನಿಂದ ಚನ್ನಮ್ಮ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.

‘ಮೇ 10ರಂದು ರೈತ ಶಂಕ್ರಪ್ಪ ಸಂಗಟಿ ಎಂಬುವವರು ನವಲಗುಂದ ವಿಜಯ ಬ್ಯಾಂಕ್‌ ಶಾಖೆಗೆ ತೆರಳಿ ಅವರ ಪತ್ನಿಯ ಖಾತೆಗೆ ಸಂಬಂಧಿಸಿದಂತೆ ‘ಚೆಕ್‌ ಲಿಫ್‌’ ಕೊಡುವಂತೆ ಕೇಳಿದ್ದರು. ಆದರೆ, ಪಾಸ್‌ಬುಕ್‌ ಹೊಂದಿರುವವರೇ ಬರಬೇಕು ಎಂದು ಹೇಳಿದ ಡಿ.ಸಂದೀಪ್‌ ಎಂಬುವವರ ಮೇಲೆ ಏಕಾಏಕಿ ಕಪಾಳ ಮೋಕ್ಷ ಮಾಡಿದ್ದಾರೆ.

ADVERTISEMENT

ಬಳಿಕ ವ್ಯವ­ಸ್ಥಾಪಕರ ಕ್ಯಾಬಿನ್‌ಗೂ ನುಗ್ಗಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದರು. ಅವರ ವಿರುದ್ಧ ಕಾನೂನಿನಡಿ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.

‘ಬ್ಯಾಂಕ್‌ ಸಿಬ್ಬಂದಿ ಮೇಲೆ ಹಲ್ಲೆ ನಡಸುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಬ್ಯಾಂಕ್ ಸಿಬ್ಬಂದಿಗೆ ರಕ್ಷಣೆ ಇಲ್ಲವಾಗಿದೆ. ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದರು.

ಬ್ಯಾಂಕ್‌ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆ ಸಂಚಾಲಕ ಸಂತೋಷಕುಮಾರ ಹುಲ್ಲೂರ, ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘದ ಹುಬ್ಬಳ್ಳಿ ಘಟಕ ಪ್ರಧಾನ ಕಾರ್ಯದರ್ಶಿ ಜಯಚಂದ್ರ ಸ್ಟೀಫನ್‌, ವಿಜಯ ಬ್ಯಾಂಕ್‌ ಅಧಿಕಾರಿಗಳ ಸಂಘದ ಉಪ ಪ್ರಧಾನ ಕಾರ್ಯದರ್ಶಿ ತಪಸ್‌ ಘೋಷ್‌, ಚಂದ್ರಶೇಖರ ಶೆಟ್ಟಿ, ರಾಮ್‌ ಮೋಹನ್‌ ಸೇರಿದಂತೆ 300ಕ್ಕೂ ಹೆಚ್ಚು ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ನವಲಗುಂದದಲ್ಲೂ ಪ್ರತಿಭಟನೆ

ನವಲಗುಂದ: ತನ್ನ ಹೆಂಡತಿಯ ಖಾತೆಯಲ್ಲಿದ್ದ ಹಣವನ್ನು ಪಡೆದು­ಕೊಳ್ಳಲು ವಿತ್ ಡ್ರಾ ಸ್ಲಿಪ್  ಕೊಡುವಂತೆ ಒತ್ತಾಯಿಸಿ ಖ್ಯಾತೆ ತೆಗೆದಿದ್ದ ರೈತನೊಬ್ಬ ಬ್ಯಾಂಕ್ ಸಿಬ್ಬಂದಿಯ ಮೇಲೆ ಹಲ್ಲೆ ಖಂಡಿಸಿ ಸೋಮವಾರ ವಿವಿಧ ಬ್ಯಾಂಕ್ ಅಧಿಕಾರಿಗಳು ವಿಜಯಾ ಬ್ಯಾಂಕ್ ಮುಂದೆ ಕೆಲಹೊತ್ತು ಪ್ರತಿಭಟನೆ ನಡೆಸಿದರು.

ಪಟ್ಟಣದ ನಿವಾಸಿಯಾದ ಶಂಕರಪ್ಪ ಸಂಗಟಿ ಎಂಬಾತ ತನ್ನ ಹೆಂಡತಿಯ ಖಾತೆಯಲ್ಲಿದ್ದ ಹಣವನ್ನು ತೆಗೆದು­ಕೊಳ್ಳಲು ವಿತ್ ಡ್ರಾ ಸ್ಲಿಪ್ ಕೊಡುವಂತೆ ಇದೇ 10 ರಂದು ಬ್ಯಾಂಕ್ ಸಿಬ್ಬಂದಿಯಲ್ಲಿ ಒತ್ತಾಯಿಸಿದ್ದ.

ಆದರೆ ಖಾತೆದಾರರು ಇಲ್ಲದೆ ಯಾವುದೇ ಮಾಹಿತಿ ಕೊಡಲು ಬರುವುದಿಲ್ಲ, ನಿಮ್ಮ ಹೆಂಡತಿಯನ್ನು ಕರೆದುಕೊಂಡರೆ ಮಾತ್ರ ಹಣ ನೀಡಲಾಗುವುದೆಂದು ತಿಳಿಸಿದ್ದರಿಂದ ರೊಚ್ಚಿಗೆದ್ದ ಶಂಕ್ರಪ್ಪ ಬ್ಯಾಂಕ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದ ದೃಶ್ಯಾವಳಿಗಳು ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.  

ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿನ ದೃಶ್ಯಾವಳಿಯನ್ನು ಕಂಡ ಮೇಲಾಧಿಕಾರಿ ಚಂದ್ರಶೇಖರ ಯಳ್ಳೂರ ನೇತ್ರತ್ವದಲ್ಲಿ ಆರೋಪಿಯನ್ನು ಬಂಧಿಸಿ ಸೂಕ್ರ ಕ್ರಮ ಕೈಗೊಳ್ಳುವಂತೆ ಇದೇ 12 ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಆದರೆ ಇಲ್ಲಿಯವರೆಗೆ ಆರೋಪಿತನ ಬಂಧನವಾಗಿರದ ಕಾರಣ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂ­ಟದ ಕರ್ನಾಟಕ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ನೇತೃತ್ವದಲ್ಲಿ  ಪ್ರತಿಭಟನೆ ಹಮ್ಮಿಕೊಂಡಿ­ದ್ದರು.  ಆದರೆ ಆರೋಪಿತನಾದ ಶಂಕ್ರಪ್ಪ ಸಂಗಟಿ ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರಿಂದ ಪ್ರತಿಭಟನೆ ಹಿಂಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.