ADVERTISEMENT

ಮತದಾರರ ಪಟ್ಟಿ: ಪರಿಶೀಲನಾ ಸಭೆ

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2017, 8:35 IST
Last Updated 28 ಡಿಸೆಂಬರ್ 2017, 8:35 IST

ಧಾರವಾಡ: ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಮೊದಲ ಹಂತದ ಪ್ರಗತಿ ಪರಿಶೀಲನಾ ಸಭೆ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು.

ಬೆಳಗಾವಿ ವಿಭಾಗದ ಮತದಾರ ಯಾದಿ ವೀಕ್ಷಕರೂ ಆಗಿರುವ ಬೆಳಗಾವಿ ವಿಭಾಗ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ ಪರಿಶೀಲನೆ ನಡೆಸಿದರು.

ಮತದಾರರ ಪಟ್ಟಿಗೆ ಹೊಸ ಹೆಸರುಗಳ ಸೇರ್ಪಡೆ, ಸ್ವೀಕೃತ ಅರ್ಜಿಗಳ ಸಂಖ್ಯೆ, ಬಿಟ್ಟು ಬಿಡತಕ್ಕ ವಿವರಗಳು, ಹೊಸ ಮತಗಟ್ಟೆ ಸ್ಥಾಪನೆ, ಮತಗಟ್ಟೆ ಮಟ್ಟದ ಅಧಿಕಾರಿಗಳ ನೇಮಕ ಹಾಗೂ ಅವರ ಕಾರ್ಯ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆದ ಅವರು, ಇದೇ 29 ಮತದಾರರ ಯಾದಿಗೆ ಹೊಸ ಸೇರ್ಪಡೆ ಹಾಗೂ ಅವಶ್ಯಕ ಮಾಹಿತಿ ಸ್ವೀಕರಿಸಲು ಕೊನೆಯ ದಿನವಾಗಿದ್ದು ಅಧಿಕಾರಿಗಳು ಹೆಚ್ಚು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ADVERTISEMENT

ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮಾತನಾಡಿ, ‘ಈಗಾಗಲೇ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಸಭೆ ಜರುಗಿಸಿ, ಪ್ರತಿ ಮತಗಟ್ಟೆಗಳಿಗೆ ತಮ್ಮ ಪಕ್ಷದ ಏಜೆಂಟರನ್ನು ನೇಮಿಸಿ ಮಾಹಿತಿ ಸಲ್ಲಿಸಲು ಸೂಚಿಸಲಾಗಿತ್ತು. ಆದರೆ, ಇಲ್ಲಿಯವರೆಗೆ ಯಾವುದೇ ರಾಜಕೀಯ ಪಕ್ಷ ಈ ಮಾಹಿತಿಯನ್ನು ಚುನಾವಣಾ ವಿಭಾಗಕ್ಕೆ ಸಲ್ಲಿಸಿಲ್ಲ. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಜಿಲ್ಲಾಧ್ಯಕ್ಷರಿಗೆ ತಕ್ಷಣ ಈ ಕುರಿತು ಪತ್ರ ಬರೆದು ಏಜೆಂಟರ ನೇಮಕಾತಿ ಕುರಿತು ಮಾಹಿತಿ ಪಡೆಯಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅಂತಿಮ ಹಂತದ ಮತದಾರರ ಪಟ್ಟಿ ಪರಿಷ್ಕರಣೆಗೆ ಡಿ.29 ಕೊನೆ ದಿನವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಂಡು ಎಲ್ಲ ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಸೇರ್ಪಡೆಗೊಳ್ಳಬೇಕು ಎಂದು ತಿಳಿಸಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ, ಚುನಾವಣಾ ತಹಶೀಲ್ದಾರ್ ಬಿ.ವಿ.ಲಕ್ಷ್ಮೇಶ್ವರ, ಧಾರವಾಡ ತಹಶೀಲ್ದಾರ್‌ ಪ್ರಕಾಶ ಕುದರಿ, ಪಾಲಿಕೆ ಅಧಿಕಾರಿ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿ ಚುನಾವಣಾ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.