ADVERTISEMENT

ಮದ್ಯ ನಿಷೇಧ ಅಭಿಯಾನ

ಮದ್ಯ ವ್ಯಸನದಿಂದ ಮುಕ್ತರಾದವರಿಂದ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 6:48 IST
Last Updated 20 ಏಪ್ರಿಲ್ 2018, 6:48 IST

ಧಾರವಾಡ: ‘ಪ್ರಸಕ್ತ ಚುನಾವಣೆ ಸಂದರ್ಭದಲ್ಲಿ ಕೆಲ ಅಭ್ಯರ್ಥಿಗಳಿಂದ ಬರಬಹುದಾದ ಮದ್ಯದ ಆಮಿಷ ತಡೆಯುವ ನಿಟ್ಟಿನಲ್ಲಿ ಮದ್ಯ ವ್ಯಸನದಿಂದ ಮುಕ್ತರಾದವರೇ ಜಾಗೃತಿ ಜಾಥಾ ನಡೆಸುತ್ತಿದ್ದಾರೆ’ ಎಂದು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ವಿವೇಕ ಪಾಯಸ್ ಹೇಳಿದರು.

‘ಚುನಾವಣೆ ಸಂದರ್ಭದಲ್ಲಿ ಹಣ, ಹೆಂಡ, ಬಾಡೂಟ ಸಾಮಾನ್ಯ ಎಂಬಂತಾಗಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸ್ವಸಹಾಯ ಸಂಘದ ವತಿಯಿಂದ ರಾಜ್ಯದಲ್ಲಿ 40 ಲಕ್ಷ ಕುಟುಂಬ ಪಾಲುದಾರ ಸದಸ್ಯರು ಹಾಗೂ 34 ಲಕ್ಷ ಫಲಾನುಭವಿಗಳು, ಮದ್ಯ ಮುಕ್ತ ಚುನಾವಣೆ ಮಾಡುವ ಉದ್ದೇಶದಿಂದ ಜನಜಾಗೃತಿ ಆಂದೋಲನ ಆರಂಭಿಸಿದ್ದಾರೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಲ್ಲಿ 10 ಸಾವಿರಕ್ಕೂ ಅಧಿಕ ವೈನ್ ಶಾಪಗಳಿವೆ. ಇನ್ನಷ್ಟು ಮದ್ಯದ ಅಂಗಡಿಗಳನ್ನು ತೆರೆಯಲು ಸರ್ಕಾರ ಚಿಂತನೆ ನಡೆಸಿರುವುದು ದುರಂತ. ಬಿಹಾರದಲ್ಲಿ ಮದ್ಯ ನಿಷೇಧವಾಗಿದೆ. ರಾಜ್ಯದಲ್ಲಿಯೂ ಮದ್ಯನಿಷೇಧ ಮಾಡುವಂತೆ ಜನಜಾಗೃತಿ ವೇದಿಕೆ ವತಿಯಿಂದ ವರದಿ
ಕೊಟ್ಟಿದ್ದೇವೆ. ಆದರೂ, ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಗಂಭೀರ ಸ್ವರೂಪದ ಚಿಂತನೆ ನಡೆಸಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಸುತ್ತೂರು, ಧರ್ಮಸ್ಥಳ, ಮುರುಘಾಮಠ ಸೇರಿದಂತೆ ಅನೇಕ ಪೂಜ್ಯರು ಮದ್ಯ ನಿಷೇಧಕ್ಕೆ ಸಹಮತಸೂಚಿಸಿದ್ದಾರೆ. ರಾಜ್ಯದಲ್ಲಿ ಒಂದೂವರೆ ಕೋಟಿ ಜನ ಮದ್ಯವ್ಯಸನಿಗಳಿದ್ದಾರೆ ಎಂಬುದಾಗಿ ನಿಮ್ಹಾನ್ಸ್‌ ವರದಿ ನೀಡಿದೆ. ಇದು ಕಳವಳಕಾರಿ ಸಂಗತಿ. ಧರ್ಮಸ್ಥಳದ ಧರ್ಮಾಧಿ
ಕಾರಿ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದ ಮೇರೆಗೆ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದರು.

‘ಪಾನಮುಕ್ತ ರಾಜ್ಯ ನಿರ್ಮಾಣ ನಮ್ಮ ಗುರಿಯಾಗಿದೆ. ಇದನ್ನು ಜಾರಿಗೊಳಿಸುವಂತೆ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ಒತ್ತಾಯಿಸಿದ್ದೇವೆ. ಅವರು ಸ್ಪಂದಿಸದಿದ್ದರೆ, ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ವಿವೇಕ ಎಚ್ಚರಿಸಿದರು. ಎಂ. ದಿನೇಶ, ಮಹಾವೀರ ಉಪಾಧ್ಯೆ, ಸುರೇಶ ಮರಿಲಿಂಗಣ್ಣವರ, ಸುರೇಶ, ರೋಹಿತ, ದೇವೆಂದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.