ADVERTISEMENT

‘ಮರಳು ಕಳ್ಳ ಸಾಗಣೆಗೆ ಬಿಗಿ ನಿಯಮ ಕಾರಣ’

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 5:55 IST
Last Updated 17 ಏಪ್ರಿಲ್ 2017, 5:55 IST

ಹುಬ್ಬಳ್ಳಿ: ‘ಸರ್ಕಾರ ಮರಳು ತೆಗೆಯುವುದಕ್ಕೆ ವಿಧಿಸಿದ ಹಲವು ನಿರ್ಬಂಧಗಳಿಂದಾಗಿ ಕಳ್ಳ ಸಾಗಣೆಕೆದಾರರಿಗೆ ಅನುಕೂಲವಾಗಿದೆ’ ಎಂಬುದನ್ನು ವಿಧಾನಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಒಪ್ಪಿಕೊಂಡರು.ಅಸೋಸಿಯೇಶನ್‌ ಆಫ್‌ ಕನ್ಸಲ್ಟಿಂಗ್ ಸಿವಿಲ್‌ ಎಂಜಿನಿಯರ್ಸ್‌ (ಎಸಿಸಿಇ) ಹಾಗೂ ಅಸೋಸಿಯೇಶನ್‌ ಆಫ್‌ ಕನ್ಸಲ್ಟಿಂಗ್ ಸಿವಿಲ್‌ ಎಂಜಿನಿಯರ್ಸ್‌ ಇಂಡಿಯಾ ಹುಬ್ಬಳ್ಳಿ ಕೇಂದ್ರ ಘಟಕದ ಸಹಯೋಗದಲ್ಲಿ ಇಲ್ಲಿನ ರಾಯ್ಕರ್‌ ಮೈದಾನದಲ್ಲಿ ಭಾನುವಾರ ಮುಕ್ತಾಯವಾದ ಮೂರು ದಿನಗಳ ಕಟ್ಟಡ ನಿರ್ಮಾಣ ಸಾಮಗ್ರಿಗಳ ವಸ್ತು ಪ್ರದರ್ಶನ ಮೇಳ ‘ಕಾನ್‌ ಮ್ಯಾಟ್‌’ ಸಮಾರೋಪದಲ್ಲಿ ಅವರು ಮಾತನಾಡಿದರು.

‘ಸರ್ಕಾರವು ಮುಂದಾಲೋಚನೆಯಿಂದಾಗಿ ಮರಳು ಸಾಗಣೆಯ ಮೇಲೆ ಕಠಿಣ ನಿಯಮಗಳನ್ನು ರೂಪಿಸಿದೆ. ಈ ವಿಚಾರದಲ್ಲಿ ನಾವು ಪಕ್ಷಾತೀತವಾಗಿ ಸದನದಲ್ಲಿ ದನಿ ಎತ್ತಿದ್ದೇವೆ. ನಿಯಮಗಳನ್ನು ಸರಳೀಕರಿಸಿದರೆ ಕಡಿಮೆ ದರದಲ್ಲಿ ಮರಳು ಲಭ್ಯವಾಗುತ್ತದೆ. ಕಳ್ಳ ಸಾಗಣೆಗೆ ಕಡಿವಾಣವನ್ನೂ ಹಾಕಿದಂತಾಗುತ್ತದೆ’ ಎಂದರು.‘ಮರಳು ಲಭ್ಯತೆ ಇಲ್ಲದಿರುವುದನ್ನು ಮನಗಂಡ ಸರ್ಕಾರ ಎಂ–ಸ್ಯಾಂಡ್‌ ಉತ್ಪಾದನೆ ಮತ್ತು ಬಳಕೆಗೆ ಉತ್ತೇಜನ ನೀಡುತ್ತಿದೆ. ಆದಾಗ್ಯೂ, ಜನಪರವಾದ ಮರಳು ನೀತಿಯನ್ನು ಶೀಘ್ರವೇ ರೂಪಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌ ಹಾಗೂ ಉಪಮೇಯರ್‌ ಲಕ್ಷ್ಮಿಬಾಯಿ ಬಿಜವಾಡ ಮಾತನಾಡಿ, ‘ಇಂತಹ ಮೇಳಗಳಿಂದ ಸಿವಿಲ್‌ ಎಂಜಿನಿಯರ್‌ಗಳು,ಉದ್ಯಮಿಗಳು ಹಾಗೂ ಗ್ರಾಹಕರಿಗೆ ಅನುಕೂಲವಾಗಲಿದೆ. ಅಲ್ಪ ಸಮಯದಲ್ಲಿ ಮನೆಗಳ ನಿರ್ಮಾಣಕ್ಕೆ ಅಗತ್ಯವಾದ ತಾಂತ್ರಿಕತೆಗಳನ್ನು ಅಳವಡಿಸಲು ಸಾಧ್ಯವಾಗುತ್ತದೆ’ ಎಂದರು.
ಕಾನ್‌ ಮ್ಯಾಟ್‌ ಅಧ್ಯಕ್ಷ ಬಿ. ಮಹೇಶ ಅವರನ್ನು ಸನ್ಮಾನಿಸಲಾಯಿತು. ಎಸಿಸಿಇ ಅಧ್ಯಕ್ಷ ಅಶೋಕ ಕೆ. ಬಸವಾ, ಕಾರ್ಯದರ್ಶಿ ಶ್ರೀಕಾಂತ ವಿ. ಪಾಟೀಲ, ಎಸಿಸಿಇ ಇಂಡಿಯಾ ಅಧ್ಯಕ್ಷ ಸುರೇಶ ಕಿರೇಸೂರ, ಕಾರ್ಯದರ್ಶಿ ಎನ್‌.ಎಸ್‌. ನಾಡಗೀರ ವೇದಿಕೆಯಲ್ಲಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.