ADVERTISEMENT

ಮಹಾದಾಯಿ: ರಾಜ್ಯದ ಹಿತ ಕಾಯಲು ಬದ್ಧ– ಶೆಟ್ಟರ್‌, ಜೋಶಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 5:56 IST
Last Updated 13 ಮಾರ್ಚ್ 2017, 5:56 IST

ಹುಬ್ಬಳ್ಳಿ: ‘ಗೋವಾದಲ್ಲಿ ಯಾವ ಸರ್ಕಾರ ರಚನೆಯಾದರೂ ಮಹಾ ದಾಯಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ರಾಜ್ಯದ ಹಿತರಕ್ಷಣೆಗೆ ಬಿಜೆಪಿ ಬದ್ಧವಾಗಿದೆ’ ಎಂದು ರಾಜ್ಯ ಬಿಜೆಪಿ ನಾಯಕರಾದ ಜಗದೀಶ್‌ ಶೆಟ್ಟರ್‌ ಮತ್ತು ಪ್ರಹ್ಲಾದ ಜೋಶಿ ಹೇಳಿದರು.

‘ಗೋವಾದಲ್ಲಿ ಸರ್ಕಾರ ರಚನೆಗೆ ಕಸರತ್ತು ಆರಂಭವಾಗಿದ್ದು, ಅದೆಲ್ಲ ಮುಗಿಯಬೇಕಿದೆ. ಅಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಎರಡೂ ಪಕ್ಷಗಳು ನಮಗೆ ಸಹಕಾರ ನೀಡಬೇಕಿದೆ. ಮಹಾದಾಯಿಗಾಗಿ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ನಮ್ಮ ಸಹಕಾರ ಮುಂದುವರಿಯುತ್ತದೆ’ ಎಂದು ಸಂಸದ ಪ್ರಹ್ಲಾದ ಜೋಶಿ ಸುದ್ದಿಗಾರರಿಗೆ ಭಾನುವಾರ ತಿಳಿಸಿದರು.

‘ಗೋವಾ ಸರ್ಕಾರ ಮಾತುಕತೆಗೆ ಮುಂದಾಗುತ್ತಿಲ್ಲವಲ್ಲಾ? ಹಸಿರುಪೀಠ ವಿಚಾರಣೆ ನಡೆಸಲಿ ಎನ್ನುತ್ತಿದೆಯಲ್ಲಾ’ ಎಂಬ ಪ್ರಶ್ನೆಗೆ ಉತ್ತರಿಸಿದ ಜೋಶಿ, ‘ಬೇರೆ ಪೀಠಕ್ಕೆ ವರ್ಗಾವಣೆ ಸಾಧ್ಯವಿಲ್ಲ. ನ್ಯಾಯಮಂಡಳಿಯಲ್ಲೂ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಮಾತುಕತೆಯಿಂದಲೇ ವಿವಾದ ಬಗೆಹರಿಸಬೇಕಿದೆ’ ಎಂದರು.

ADVERTISEMENT

‘ಅಂತರ ರಾಜ್ಯ ನದಿ ನೀರಿನ ವಿಚಾರ ನ್ಯಾಯಮಂಡಳಿಯಲ್ಲಿರುವುದರಿಂದ ಪ್ರಧಾನಿ ಮಧ್ಯಪ್ರವೇಶ ಸಾಧ್ಯವಿಲ್ಲ’ ಎಂದು ಜೋಶಿ ಪುನರುಚ್ಚರಿಸಿದರು.

‘ಮಹಾದಾಯಿ ನೀರು ಹಂಚಿಕೆ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ನಮ್ಮ ಹೋರಾಟ ಇದ್ದೇ ಇರುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಹೆಜ್ಜೆ ಇರಿಸಬೇಕು. ನಾವು ಎಂದಿಗೂ ರೈತರ ಪರವೇ ಇದ್ದೇವೆ’ ಎಂದು ಜಗದೀಶ್‌ ಶೆಟ್ಟರ್‌ ಹೇಳಿದರು.

**

ಚಿಲ್ಲರೆ ರಾಜಕಾರಣಕ್ಕೆ ಉತ್ತರ

‘ಪೇಟು–ಮೋದಿ ಎಂಬಂತಹ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್‌ನವರು ಚಿಲ್ಲರೆ ರಾಜಕಾರಣ ಮಾಡಿದ್ದರು. ನಕಾರಾತ್ಮಕವಾಗಿಯೇ ಎಲ್ಲವನ್ನೂ ಬಿಂಬಿಸಿದ್ದರು. ಆದರೆ ಐದು ರಾಜ್ಯ ಗಳ ಚುನಾವಣೆ ಅವರಿಗೆ ತಕ್ಕ ಉತ್ತರ ನೀಡಿದೆ’ ಎಂದು ಪ್ರಹ್ಲಾದ ಜೋಶಿ ಹೇಳಿದರು.

‘ಐದು ರಾಜ್ಯಗಳಲ್ಲಿ ಬಿಜೆಪಿ ಪಡೆದಿರುವ ಮತ ಪ್ರಮಾಣವೇ ಅಧಿಕವಾಗಿದೆ. ಆದರೆ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಗೋವಾದಲ್ಲಿ ಏನೂ ಆಗಲಿಲ್ಲ, ಪಂಜಾಬ್‌ನಲ್ಲಿ ಮೋದಿ ಮೋಡಿ ನಡೆಯಲಿಲ್ಲ ಎನ್ನುತ್ತಿದ್ದಾರೆ. ಬಿಜೆಪಿಗೆ ನಕಾರಾತ್ಮಕ ಅಂಶವೇ ಇದೆ ಎನ್ನುವ ಅವರಿಗೆ ರಾಜಕೀಯ ಜ್ಞಾನ ಕಡಿಮೆ ಎಂದೇ ಹೇಳಬೇಕಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್‌ ಪ್ರತಿಕ್ರಿಯಿಸಿದರು.

‘ರಾಜ್ಯದಲ್ಲೂ ರೈತರು ಸೇರಿದಂತೆ ಜನರು ಕಾಂಗ್ರೆಸ್‌ ಸರ್ಕಾರದ ಆಡ ಳಿತದಿಂದ ಬೇಸತ್ತಿದ್ದಾರೆ. ಗ್ರಾಮಾಂ ತರ ಪ್ರದೇಶದಲ್ಲಿ ಜನರು ರೋಸಿ ಹೋಗಿದ್ದಾರೆ. ಭ್ರಷ್ಟಾಚಾರ ಅತಿ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಅನ್ನು ಕಿತ್ತುಹಾಕುವ ಕೆಲಸ ರಾಜ್ಯದಲ್ಲೂ ಆಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.