ADVERTISEMENT

ಮಹಾದಾಯಿ: ರೈತರಿಂದ ಬೆಂಗಳೂರು ಚಲೊ

ಕಳಸಾ– ಬಂಡೂರಿ ರೈತ ಹೋರಾಟ ಸಮನ್ವಯ ಸಮಿತಿಯ 300ಕ್ಕೂ ಅಧಿಕ ರೈತರಿಂದ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 7:22 IST
Last Updated 22 ಮಾರ್ಚ್ 2017, 7:22 IST
ಮಹಾದಾಯಿ ನದಿ ತಿರುವು ಯೋಜನೆಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ವಿಧಾನಸೌಧ ಚಲೊ ಹಮ್ಮಿಕೊಂಡಿರುವ ರೈತರು ಮಂಗಳವಾರ ಪ್ಯಾಸೆಂಜರ್‌ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು
ಮಹಾದಾಯಿ ನದಿ ತಿರುವು ಯೋಜನೆಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ವಿಧಾನಸೌಧ ಚಲೊ ಹಮ್ಮಿಕೊಂಡಿರುವ ರೈತರು ಮಂಗಳವಾರ ಪ್ಯಾಸೆಂಜರ್‌ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು   

ಹುಬ್ಬಳ್ಳಿ: ಮಹಾದಾಯಿ ನದಿ ತಿರುವು ಯೋಜನೆಯನ್ನು ಆದಷ್ಟು ಬೇಗನೇ ಅನುಷ್ಠಾನಗೊಳಿಸಬೇಕು. ಇದಕ್ಕಾಗಿ ನ್ಯಾಯಮಂಡಳಿ ಹೊರಗೆ ರಾಜಿ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಹಾಗೂ ಗೋವಾ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಲು ಕಳಸಾ–ಬಂಡೂರಿ ರೈತ ಹೋರಾಟ ಒಕ್ಕೂಟವು ಬುಧವಾರ ಬೆಂಗಳೂರು ಚಲೊ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಈ ಹೋರಾಟದಲ್ಲಿ ಭಾಗವಹಿಸಲು ನವಲಗುಂದ, ಹುಬ್ಬಳ್ಳಿ ತಾಲ್ಲೂಕಿನ 300ಕ್ಕೂ ಅಧಿಕ ರೈತರು ಮಂಗಳವಾರ ಇಲ್ಲಿಂದ ಸಂಜೆ ಹೊರಟ ಪ್ಯಾಸೆಂಜರ್‌ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

ಬೆಳಿಗ್ಗೆ 10ಕ್ಕೆ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುವ ರೈತರು, ರಾಜ್ಯ ಬಿಜೆಪಿಯ 17 ಸಂಸದರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್‌ ಅವರ ಮೇಲೆ ಒತ್ತಡ ತರುವಂತೆ ಒತ್ತಾಯಿಸಲಿದ್ದಾರೆ.

ನಂತರ ವಿಧಾನಸೌಧ ಚಲೊ ನಡೆಯಲಿದ್ದು, ಅಧಿವೇಶನ ನಡೆಯುತ್ತಿರುವ ಈ ಹೊತ್ತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮನವಿ ಸಲ್ಲಿಸಲಾಗುವುದು ಎಂದು ಕಳಸಾ–ಬಂಡೂರಿ, ಮಹಾದಾಯಿ ರೈತ ಹೋರಾಟ ಸಮಿತಿ ಅಧ್ಯಕ್ಷ ಲೋಕನಾಥ ಹೆಬಸೂರ ತಿಳಿಸಿದರು.

ಬೆಂಗಳೂರಿಗೆ ತೆರಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನವಲಗುಂದ, ನರಗುಂದ ಹಾಗೂ ಅಣ್ಣಿಗೇರಿಗಳಲ್ಲಿ ಮಹಾದಾಯಿ ನದಿ ನೀರನ್ನು ನಾಲ್ಕು ಜಿಲ್ಲೆಗಳ 11 ತಾಲ್ಲೂಕುಗಳಿಗೆ ಹರಿಸುವಂತೆ ಒತ್ತಾಯಿಸಿ ಒಂದೂವರೆ ವರ್ಷಗಳಿಂದ ಚಳವಳಿ ನಡೆಯುತ್ತಿದೆ.

ಆದರೂ, ಕೇಂದ್ರ ಸರ್ಕಾರ, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ವಹಿಸಿವೆ. ಕೇಂದ್ರ ಹಾಗೂ ಎರಡು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನಾಯಕರು ಈ ವಿವಾದವನ್ನು ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಶಿವಣ್ಣ ಹುಬ್ಬಳ್ಳಿ, ಸುಭಾಷಚಂದ್ರಗೌಡ ಪಾಟೀಲ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ (ನಾರಾಯಣಗೌಡ ಬಣ) ಅಧ್ಯಕ್ಷ ಅಮೃತ ಇಜಾರಿ, ಹೇಮನಗೌಡ ಬಸನಗೌಡ್ರ ಇದ್ದರು.

‘ಪ್ರಧಾನಿ ಮಧ್ಯಸ್ಥಿಕೆ ವಹಿಸಲಿ’
ನವಲಗುಂದ: 
ಇಲ್ಲಿಯ ರೈತ ಒಕ್ಕೂಟದ ಸದಸ್ಯರು ವಿಧಾನಸೌಧಕ್ಕೆ ಹಾಗೂ ಬಿಜೆಪಿ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕಲು ಮಂಗಳವಾರ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಒಕ್ಕೂಟದ ಅಧ್ಯಕ್ಷ ಲೋಕನಾಥ ಹೆಬಸೂರ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ಸಾಲವನ್ನು ಮನ್ನಾ ಮಾಡುವಂತೆ,  ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಪ್ರಧಾನಿ ಮಧ್ಯಸ್ಥಿಕೆ ವಹಿಸಲು ರಾಜ್ಯದ ಸಂಸದರು ಒತ್ತಡ ಹಾಕಬೇಕು ಎಂದರು.

ರೈತ ಮುಖಂಡ ಸುಭಾಸಚಂದ್ರಗೌಡ ಪಾಟೀಲ ಮಾತನಾಡಿದರು.  ಸಂಗಪ್ಪ ನಿಡವಣಿ, ಚಂದ್ರಶೇಖರಯ್ಯ ಕಿಲಾರಿಮಠ, ಶಿವಾನಂದಸ್ವಾಮಿ ಮಠಪತಿ, ವೀರಯ್ಯ ಹಿರೇಮಠ, ಬಸಪ್ಪ ಬೀರಣ್ಣವರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.