ADVERTISEMENT

ಮಾವು ಮಾರಾಟಕ್ಕೆ ವೇದಿಕೆ ಸಜ್ಜು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 5:45 IST
Last Updated 18 ಏಪ್ರಿಲ್ 2017, 5:45 IST

ಧಾರವಾಡ: ‘ರಾಜ್ಯದ ಎರಡನೇ ಅತಿದೊಡ್ಡ ಮಾವು ಬೆಳೆಯುವ ಪ್ರದೇಶವಾಗಿರುವ ಧಾರವಾಡದಲ್ಲಿ ಸ್ಥಳೀಯ ಮಾರುಕಟ್ಟೆ ಉತ್ತೇಜಿಸುವ ಸಲುವಾಗಿ ಇದೇ ಮೊದಲ ಬಾರಿಗೆ ‘ಮಾವು ಪ್ರವಾಸ’ ಕಾರ್ಯಕ್ರಮವನ್ನು ತೋಟಗಾರಿಕೆ ಇಲಾಖೆಯು ಮಾವು ಅಭಿವೃದ್ಧಿ ಮಂಡಳಿ ಸಹಯೋಗದೊಂದಿಗೆ ಏ. 21ರಿಂದ ಪ್ರಾರಂಭಿಸಲಿದೆ’ ಎಂದು ಜಿಲ್ಲಾ ಪಂಚಾಯ್ತಿ ಸಿಇಓ ಆರ್‌.ಸ್ನೇಹಲ್‌ ತಿಳಿಸಿದರು.

‘ಈ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಧಾರವಾಡದ ಕಲಕೇರಿ ಹಾಗೂ ಹಳ್ಳಿಗೇರಿ, ಹುಬ್ಬಳ್ಳಿಯ ಪಾಳ ಗ್ರಾಮದಲ್ಲಿ ಗುಣಮಟ್ಟದ ಮಾವು ಕೃಷಿ ಮಾಡುತ್ತಿರುವ ರೈತರನ್ನು ಆಯ್ಕೆ ಮಾಡಲಾಗಿದೆ. ಮಾವು ಬೆಳೆಯ ಆರಂಭದ ಹಂತದಿಂದ ನೈಸರ್ಗಿಕವಾಗಿ ಹಣ್ಣು ಮಾಡುವ ಹಂತದವರೆಗೂ ಪ್ರತಿಯೊಂದನ್ನೂ ಪ್ರಾತ್ಯಕ್ಷಿಕೆ ಮೂಲಕ ಹಾಗೂ ಕೆಲವನ್ನು ಅಲ್ಪ ಅನುಭವದ ಮೂಲಕ ಕಲಿಯಬಹುದಾದ ಅವಕಾಶ ಇದಾಗಿದೆ. ಈ ಮೂಲಕ ರೈತರಿಗೂ ಅನುಕೂಲ ಮಾಡಿಕೊಡುವ ಉದ್ದೇಶವೂ ಇದೆ’ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘ಮಾವು ಪ್ರವಾಸಕ್ಕೆ ತೆರಳುವ ಗ್ರಾಹಕರ ಸಾರಿಗೆ ವೆಚ್ಚದ ಶೇ 75ರಷ್ಟನ್ನು ಮಾವು ನಿಗಮ ಭರಿಸಲಿದೆ. ಪ್ರವಾಸಕ್ಕಾಗಿ ತಲಾ ₹50 ನೀಡಿ ಹೆಸರು ನೋಂದಾಯಿಸಬೇಕು. ನೀರು, ಬಿಸ್ಕತ್ತು ಹಾಗೂ ಅಲ್ಪೋಪಹಾರ ಒದಗಿಸಲಾಗುವುದು. ಪ್ರವಾಸದಲ್ಲಿ ಒಂದು ಕುಟುಂಬ ₹80ರಂತೆ ಕನಿಷ್ಠ 6 ಕೆ.ಜಿ. ಮಾವು ಖರೀದಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಮೊತ್ತ ನೇರವಾಗಿ ರೈತರಿಗೆ ಸಿಗಲಿದೆ. ತೋಟಗಾರಿಕಾ ಇಲಾಖೆಯಿಂದ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ನೋಂದಣಿಗಾಗಿ ಧಾರವಾಡದಲ್ಲಿ 8123194479 ಹಾಗೂ ಹುಬ್ಬಳ್ಳಿಯಲ್ಲಿ 9480739209 ಸಂಖ್ಯೆಯನ್ನು ಸಂಪರ್ಕಿಸಬಹುದು’ ಎಂದರು.

ADVERTISEMENT

‘ಏ. 21ರಂದು ಕಲಕೇರಿ, ಏ. 25ರಂದು ಹಳ್ಳಿಕೇರಿ, ಏ. 24 ಹಾಗೂ 28ರಂದು ಪಾಳ ಗ್ರಾಮದ ಮಾವಿನ ತೋಟಗಳಿಗೆ ಪ್ರವಾಸ ಆಯೋಜಿಸಲಾಗಿದೆ. ಬೆಳಿಗ್ಗೆ 9.30ಕ್ಕೆ ಪ್ರವಾಸ ಆರಂಭವಾಗಲಿದೆ. ರೈತರು ಮುಂದೆ ಊಟೋಪಚಾರದೊಂದಿಗೆ ಇನ್ನಷ್ಟು ಗ್ರಾಹಕರನ್ನು ಆಕರ್ಷಿಸಲು ಉದ್ದೇಶಿಸಿದಲ್ಲಿ ಅದಕ್ಕೆ ಸಹಕಾರವಿದೆ. ಇದರಿಂದ ರೈತರ ಉತ್ಪನ್ನಗಳಿಗೂ ಉತ್ತೇಜನ ದೊರೆತಂತಾಗುತ್ತದೆ. ಜತೆಗೆ ಗ್ರಾಹಕರಿಗೂ ರಾಸಾಯನಿಕ ಮುಕ್ತ ಮಾವಿನ ಹಣ್ಣು ಹಾಗೂ ಹಳ್ಳಿ ಸೊಗಡಿನಲ್ಲಿ ಒಂದು ದಿನದ ಪ್ರವಾಸ ಮಾಡಿದ ಅನುಭವ ಸಿಗಲಿದೆ’ ಎಂದು ಸ್ನೇಹಲ್ ತಿಳಿಸಿದರು.

ಮಾವು ಮೇಳ ಮೇ 5ರಿಂದ
ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಶ್ರೀಶೈಲ ದಿಡ್ಡಿಮನಿ ಮಾತನಾಡಿ, ‘ಇದರೊಂದಿಗೆ ಈ ಬಾರಿಯ ಮಾವು ಪ್ರದರ್ಶನ ಹಾಗೂ ಮಾರಾಟ ಮೇ 5ರಿಂದ ಆರಂಭವಾಗಲಿದೆ. ಕಳೆದ ಬಾರಿ 127 ವಿವಿಧ ಬಗೆಯ ಮಾವುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಜತೆಗೆ ಮಾವಿನ ಇಳುವರಿಯೂ ಕಡಿಮೆ ಇದ್ದ ಕಾರಣ ಬಹಳಷ್ಟು ಗ್ರಾಹಕರ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗಲಿಲ್ಲ. ಈ ಬಾರಿ ಈಗಾಗಲೇ 20 ಟನ್‌ ಮಾವನ್ನು ನೈಸರ್ಗಿಕವಾಗಿ ಹಣ್ಣು ಮಾಡಲು ಹುಬ್ಬಳ್ಳಿಯ ಉಳವಯೋಗಿ ರೈತ ಉತ್ಪನ್ನ ಸಂಸ್ಥೆಯು ಸಿದ್ಧತೆ ನಡೆಸಿದೆ. ಗ್ರಾಹಕರಿಗೆ ಕಾರ್ಬೈಡ್‌ ಮುಕ್ತ ಮಾವು ನೀಡಬೇಕು ಎನ್ನುವುದು ನಮ್ಮ ಗುರಿ’ ಎಂದರು.

ಐದು ದಿನಗಳ ಕಾಲ ನಡೆಯಲಿರುವ ಈ ಮಾವು ಮೇಳದಲ್ಲಿ ಆರು ಜಿಲ್ಲೆಗಳ ಮಾವು ಬೆಳೆಗಾರರು ಭಾಗವಹಿಸಲಿದ್ದಾರೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ಬೆಳೆಗಾರರು ಹಾಗೂ ಗ್ರಾಹಕರ ನೇರ ಮುಖಾಮುಖಿಗೆ ವೇದಿಕೆ ಕಲ್ಪಿಸಲು ಉದ್ದೇಶಿಸಲಾಗಿದೆ. ಆದರೆ ಈ ಬಾರಿ ಮಳೆ ಕಡಿಮೆಯಾಗಿರುವುದರಿಂದ ಗಾತ್ರದಲ್ಲಿ ಮಾವು ಚಿಕ್ಕದಾಗಿದೆ. ಆದರೆ ಈಗಲೂ ಅದೇ ಅತ್ಯುತ್ತಮ ಗುಣಮಟ್ಟ ಕಾಯ್ದುಕೊಂಡಿದೆ ಎಂದು ಹಲವು ರಫ್ತು ಸಂಸ್ಥೆಗಳು ಪರೀಕ್ಷಿಸಿ ಪ್ರಶಂಸಿವೆ’ ಎಂದರು.

‘ಈ ಬಾರಿ ಶೇ 65ರಷ್ಟು ಮಾವು ಇಳುವರಿ ನಿರೀಕ್ಷಿಸಲಾಗಿದೆ. ಮೇಳದಲ್ಲಿ ಪ್ರಮುಖವಾಗಿ ಆಲ್ಫಾನ್ಸೊ, ಮಲ್ಲಿಕಾ, ಕೇಸರ್‌, ರಸಪುರಿ, ರತ್ನಗಿರಿ ಮತ್ತಿತರ ಪ್ರಮುಖ ತಳಿಗಳ ಹಣ್ಣುಗಳು ಲಭ್ಯ. ಇವುಗಳಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದವರಿಗೆ ವಿಶೇಷ ಆದ್ಯತೆ’ ಎಂದರು.ಆಲ್ಫಾನ್ಸೊ ಮಾವು ಬೆಳೆಯ ಪ್ರಮುಖ ತಾಣವಾಗಿರುವ ಧಾರವಾಡ ಜಿಲ್ಲೆಯಲ್ಲಿ ಬೆಳೆಯುವ ಕ್ಷೇತ್ರ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಪ್ರಮುಖವಾಗಿ ನೀರಿನ ಕೊರತೆಯಿಂದಾಗಿ ಮಾವಿನ ತೋಟಗಳನ್ನು ನಿವೇಶನಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡಲಾಗುತ್ತಿದೆ. ಆದರೆ ನೀರಾವರಿ ಉತ್ತಮವಾಗಿರುವ ಪ್ರದೇಶದಲ್ಲಿ ಇಂದಿಗೂ ಮಾವಿನ ಇಳುವರಿ ಉತ್ತಮವಾಗಿದೆ. ಜತೆಗೆ ಇಲಾಖೆಯ ಪ್ರಮುಖ ಯೋಜನೆಗಳನ್ನು ಅಳವಡಿಸಿಕೊಂಡು ನೈಸರ್ಗಿಕವಾಗಿ ಹಣ್ಣು ಮಾಡಿದ್ದೇ ಆದಲ್ಲಿ ಅದರ ಧಾರಣೆಯೂ ಉತ್ತಮವಾಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.