ADVERTISEMENT

ಮಾಸಾಶನ ಬಿಡುಗಡೆಗಾಗಿ ಕುಂದಗೋಳದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 5:20 IST
Last Updated 25 ಏಪ್ರಿಲ್ 2017, 5:20 IST

ಕುಂದಗೋಳ:  ವಿಧವಾ, ಸಂಧ್ಯಾ ಸುರಕ್ಷಾ, ಅಂಗವಿಕಲರ ಮಾಸಾಶನವನ್ನು ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಜನಪರ ಹೋರಾಟ ಸಮಿತಿ ವತಿಯಿಂದ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ಗಾಳಿ ಮಾರೆಮ್ಮನ ದೇವಸ್ಥಾನದಿಂದ ಮೆರವಣಿಗೆ ಹೊರಟು ಪ್ರಮುಖ ಬೀದಿಗಳಲ್ಲಿ ಸಾಗಿ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಜನಪರ ಹೋರಾಟ ಸಮಿತಿ ಅಧ್ಯಕ್ಷ ನಿಂಗಪ್ಪ ಬಡಿಗೇರ ಮಾತನಾಡಿ ‘ಸರ್ಕಾರ ಒಂದು ವರ್ಷದಿಂದ ಮಾಸಾಶನ ನಿಲ್ಲಿಸಿದ್ದರಿಂದ ವಯೋವೃದ್ಧರು, ವಿಧವೆಯರು, ಅಂಗವಿಕಲರು, ಜೋಗಮ್ಮಗಳು ತೊಂದರೆಗೀಡಾಗಿದ್ದಾರೆ. ಮಾಸಾಶನವನ್ನೇ ಇವರು ನಂಬಿ ಬದುಕುತ್ತಿದ್ದಾರೆ. ಜೂನ್‌ ತಿಂಗಳಲ್ಲಿ ಬೃಹತ್ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಅಸಮಧಾನ ವ್ಯಕ್ತಪಡಿಸಿದರು.

‘ಎಲ್ಲ ಪಿಂಚಣಿದಾರರಿಗೆ ತಿಂಗೊಳಗೆ ಹಣ ಮಾಸಾಶನ ಬಿಡುಗಡೆ ಆಗದಿದ್ದರೆ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.‘ಕೆಲ ತಾಂತ್ರಿಕ ತೊಂದರೆಗಳಿಂದ ಬ್ಯಾಂಕ್‌ಗಳಲ್ಲಿ ಹಣ ವಿತರಣೆ ಮಾಡುವುದು ವಿಳಂಬ ಆಗಿದೆ. ಕೂಡಲೇ ಸರಿಪಡಿಸಿ ಎಲ್ಲ ಅರ್ಹ ಪಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ಹಣ ಜಮೆ ಮಾಡಲಾಗುವುದು’ ಎಂದು ತಹಶೀಲ್ದಾರ್‌ ಮಹದೇವ ಬಣಸಿ ಭರವಸೆ ನೀಡಿದರು.

ADVERTISEMENT

ತಾಲ್ಲೂಕು ಅಂಗವಿಕಲ ಸಂಘದ ಅಧ್ಯಕ್ಷ ಶಂಕರ ಝೇಂಡೆ, ರುದ್ರಪ್ಪ ಹಾದಿಮನಿ, ಖಾಜೇಸಾಬ ಮುಲ್ಲಾ, ಗುರುನಾಥಗೌಡ ಪಾಟೀಲ, ಪ್ರೇಮಾ ಲಮಾಣಿ, ನಾಗವ್ವ ಪಾತ್ರೋಟಿ, ನೀಲಮ್ಮ ಯಲಿಗಾರ, ಬಸವಣ್ಣೆವ್ವ ಜೋಗೇರ, ಮಾಸಾಶನ ವಂಚಿತರು  ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.