ADVERTISEMENT

ಮೇಲ್ಸೇತುವೆ ವಾರದಲ್ಲಿ ಬಳಕೆಗೆ ಮುಕ್ತ?

ಮನೋಜ ಕುಮಾರ್ ಗುದ್ದಿ
Published 26 ಮೇ 2017, 9:07 IST
Last Updated 26 ಮೇ 2017, 9:07 IST

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಅವಳಿ ನಗರದ ಮಧ್ಯೆ ಅನುಷ್ಠಾನಗೊಳ್ಳುತ್ತಿರುವ ಬಿಆರ್‌ಟಿಎಸ್‌ ಸಾರಿಗೆ ಸೇವೆಗೆ ಪೂರಕವಾಗಿ ನಿರ್ಮಿಸಲಾದ 865 ಮೀಟರ್ ಉದ್ದದ ಮೇಲ್ಸೇತುವೆಯು ಇನ್ನೊಂದು ವಾರದಲ್ಲಿ ಸಾರ್ವಜನಿಕ ವಾಹನಗಳ ಬಳಕೆಗೆ ಮುಕ್ತವಾಗುವ ನಿರೀಕ್ಷೆ ಇದೆ.

ಎಪಿಎಂಸಿ ಮುಖ್ಯ ದ್ವಾರದ ಎದುರಿನ ಫೋಕ್ಸ್‌ವ್ಯಾಗನ್‌ ಷೋರೂಂನಿಂದ ನವನಗರ ಸಂಪರ್ಕಿಸುವ ಎಡಬದಿಯ ರಸ್ತೆ ಕಾಮಗಾರಿಯು ಇನ್ನೊಂದು ವಾರದಲ್ಲಿ ಮುಕ್ತಾಯಗೊಳ್ಳಲಿದೆ. ಆಗ ಎರಡೂ ಬದಿಯ ರಸ್ತೆ ಹಾಗೂ ಸೇತುವೆ ಮೇಲೆಯೂ ವಾಹನಗಳನ್ನು ಓಡಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಬಿಆರ್‌ಟಿಎಸ್‌ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಎಂ.ಜಿ. ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ಜನವರಿಯಲ್ಲೇ ಈ ಸೇತುವೆಯ ಬಹುತೇಕ ಕಾಮಗಾರಿ ಮುಕ್ತಾಯವಾಗಿತ್ತು. 2 ತಿಂಗಳ ಹಿಂದೆ ಪ್ರಾಯೋಗಿಕ ಸಂಚಾರವೂ ನಡೆದಿತ್ತು. ನವೆಂಬರ್‌ ವೇಳೆಗೆ ಇಡೀ ಯೋಜನೆ ಪೂರ್ಣಗೊಳಿಸಿ ಬಿಆರ್‌ಟಿಎಸ್‌ ಬಸ್‌ಗಳನ್ನು ಅವಳಿ ನಗರದ ಮಧ್ಯೆ ಸಂಚಾರಕ್ಕೆ ಅಣಿಗೊಳಿಸಲಾಗುತ್ತಿದೆ. ಇದಕ್ಕೆ ಪೂರ್ವಭಾಗಿಯಾಗಿ ಸೇತುವೆಯನ್ನೂ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿದೆ.  ಸೇತುವೆ ಮೇಲೆ ನಮ್ಮ ಬಸ್‌ಗಳಷ್ಟೇ ಸಂಚರಿಸಲಿದ್ದು, ಅಕ್ಕ–ಪಕ್ಕದ ರಸ್ತೆಯಲ್ಲಿ ಉಳಿದ ವಾಹನಗಳು ಸಂಚರಿಸಲಿವೆ’ ಎಂದು ಅವರು ಹೇಳಿದರು.

ADVERTISEMENT

ಮೂರು ಮೇಲ್ಸೇತುವೆಗಳು: ನವನಗರ ಮೇಲ್ಸೇತುವೆಯ ಜೊತೆಗೆ ಬಿಆರ್‌ಟಿಎಸ್‌ ಯೋಜನೆಗಾಗಿ ಉಣಕಲ್‌ ಕ್ರಾಸ್‌ (625 ಮೀಟರ್‌ ಉದ್ದ) ಮತ್ತು ಉಣಕಲ್‌ ಕೆರೆಯ ಎದುರು (475 ಮೀಟರ್‌) ಸೇತುವೆಗಳನ್ನು ನಿರ್ಮಿಸಲಾಗುತ್ತಿದ್ದು, ಇವುಗಳನ್ನೂ ಬರುವ ಆಗಸ್ಟ್‌ ವೇಳೆಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಕೆರೆಯ ಎದುರಿನ ರಸ್ತೆ ಮಧ್ಯೆ ನಿರ್ಮಿಸುತ್ತಿರುವ ಸೇತುವೆ ಬಹುತೇಕ ಮುಕ್ತಾಯದ ಹಂತ ತಲುಪಿದೆ.

ರೈಲ್ವೆ ಇಲಾಖೆ ಅನುಮೋದನೆ ಬಳಿಕ ಆರಂಭವಾಗಿರುವ ನವಲೂರು ಸೇತುವೆ ನಿರ್ಮಾಣ ಕಾರ್ಯವೂ ವೇಗ ಪಡೆದುಕೊಂಡಿದ್ದು, ಅದನ್ನು ಕೂಡಾ ಆಗಸ್ಟ್‌ನಲ್ಲೇ ಮುಗಿಸುವಂತೆ ಸೂಚಿಸಲಾಗಿದೆ ಎಂದು ಹಿರೇಮಠ ಮಾಹಿತಿ ನೀಡಿದರು. ಈ ಸೇತುವೆಗಳನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ನಿರ್ಮಿಸುತ್ತಿದೆ.

ಡಿ.ಎಸ್‌. ಕಾಂಟ್ರಾಕ್ಟರ್ಸ್‌ಗೆ ಗುತ್ತಿಗೆ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮನವಿ ಮೇರೆಗೆ ಧಾರವಾಡದ ಹಳೇ ಬಸ್‌ ನಿಲ್ದಾಣವನ್ನು ಹೊಸದಾಗಿ ನಿರ್ಮಿಸಲು ಮುಂದಾದ ಬಿಆರ್‌ಟಿಎಸ್‌ ಮೊದಲಿದ್ದ ಗುತ್ತಿಗೆದಾರರನ್ನು ಬದಲಿಸಿ ಗೋವಾದ ಡಿ.ಎಸ್‌. ಕಾಂಟ್ರಾಕ್ಟರ್ಸ್‌ಗೆ ಗುತ್ತಿಗೆ ನೀಡಿದೆ.

₹ 14 ಕೋಟಿ ವೆಚ್ಚದ ಈ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಮಹಾರಾಷ್ಟ್ರದ ಶ್ರೀ ಹರಿ ಅಸೋಸಿಯೇಟ್ಸ್‌ ಶೇ 10ರಷ್ಟು ಕಾಮಗಾರಿಯನ್ನೂ ಮುಗಿಸಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಶ್ರೀಹರಿ ಅಸೋಸಿಯೇಟ್ಸ್‌ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಗುತ್ತಿಗೆ ಕೆಲಸದಿಂದ ಕೈಬಿಟ್ಟಿತ್ತು. ಮರು ಟೆಂಡರ್‌ನಲ್ಲಿ ಡಿ.ಎಸ್‌. ಕಾಂಟ್ರಾಕ್ಟರ್ಸ್‌ನವರಿಗೆ ಕೊಟ್ಟಿದ್ದು, ಮುಂದಿನ 3 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.