ADVERTISEMENT

ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 6:17 IST
Last Updated 18 ಜುಲೈ 2017, 6:17 IST

ಹುಬ್ಬಳ್ಳಿ: ‘ರೈತರ ಸಂಪೂರ್ಣ ಕೃಷಿ ಸಾಲವನ್ನು ಮನ್ನಾ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಿಂದೇಟು ಹಾಕುತ್ತಿವೆ’ ಎಂದು ರೈತ ಸಂಘಟನೆಗಳ ಮುಖಂಡರು ಮತ್ತು ಮಠಾಧೀಶರು ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ ಮಠಾಧೀಶರ ಮತ್ತು ರೈತ ಸಂಘಟನೆಗಳ ಬೃಹತ್‌ ಸಮಾವೇಶದಲ್ಲಿ ಆಕ್ರೋಶ ವ್ಯಕ್ತವಾಯಿತು.

‘ನಾವು ಬೆಳೆಯುವುದು ಮಾರಾಟ ಮಾಡುವ ಉದ್ದೇಶಕ್ಕಾಗಿ. ಬೆಳೆಯಲು ನೀರೇ ಇಲ್ಲವೆಂದ ಮೇಲೆ ಜನ ಏನು ತಿನ್ನಬೇಕು. ರಾಜಕಾರಣಿಗಳು ರೈತರ ಕಾಳಜಿ ಮರೆತಿದ್ದಾರೆ’ ಎಂದು ರೈತ ಮುಖಂಡ ಸುಭಾಷಗೌಡ್ರು ಟೀಕಿಸಿದರು. ಭೈರನಹಟ್ಟಿ ದೊರೈಸ್ವಾಮಿಮಠದ ಶಾಂತಲಿಂಗ ಮಹಾಸ್ವಾಮಿಗಳು ಮಾತ­ನಾಡಿ ‘ಈಗ ಎಲ್ಲಾ ಮಠ ಮಾನ್ಯಗಳು ಅನ್ನ ದಾಸೋಹ ಮಾಡುತ್ತಿವೆ. ಇದಕ್ಕೆಲ್ಲಾ ನೇಗಿಲಯೋಗಿಯ ಶ್ರಮವೇ ಕಾರಣ. ಇದೆಲ್ಲ ಗೊತ್ತಿದ್ದೂ ಸರ್ಕಾರ ಸುಮ್ಮನಿದೆ. ಇದು ಕಿವುಡರ ಸರ್ಕಾರ’ ಎಂದು ತರಾಟೆಗೆ ತೆಗೆದುಕೊಂಡರು.

‘ರೈತರ ಸಾಲ ಮನ್ನಾ ಮಾಡಲು ಕ್ರಮ­ಕೈಗೊಳ್ಳಿ ಎಂದು ಮಾಜಿ ಮುಖ್ಯ­ಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಬಳಿ ಮನವಿ ಮಾಡಿದರೆ ನಾನು ಹಣ ಮುದ್ರಿಸುವ ಯಂತ್ರ ಇಟ್ಟುಕೊಂಡಿಲ್ಲ ಎಂದು ಹೇಳಿದ್ದರು. ಕೇವಲ ರಾಜಕಾರಣಿ­ಗಳಿನ್ನು ನಂಬಿ ಹೋರಾಟ ಮಾಡಿದರೆ ಪ್ರತಿಫಲ ಸಿಗುವುದಿಲ್ಲ. ಕಾನೂನು ಪರಿಣಿತರು, ವಿಷಯ ತಜ್ಞರ ಜೊತೆ ಸಮಾಲೋಚಿಸಿ ಮಹದಾಯಿ ಹೋರಾಟಕ್ಕೆ ರೂಪುರೇಷೆ ರೂಪಿಸುತ್ತೇವೆ’ ಎಂದು ಹಿರೇವಡ್ಡಟ್ಟಿಯ ವೀರೇಶ್ವರ ಶಿವಾಚಾರ್ಯರು ತಿಳಿಸಿದರು.

ADVERTISEMENT

ಒಕ್ಕೂಟದ ಉಪಾಧ್ಯಕ್ಷ ರಾಮಣ್ಣ ಬೊಮ್ಮೊಜಿ ಮಾತನಾಡಿ ‘ಜನಪ್ರತಿನಿಧಿ­ಗಳು ನಮ್ಮ ನೆರವಿಗೆ ಬರುತ್ತಾರೆ ಎಂದು ನಂಬಿಕೊಂಡಿದ್ದೆವು. ರೈತರ ಸಾವಿಗೆ ರಾಜಕಾರಣಿಗಳೇ ಕಾರಣರಾಗುತ್ತಿದ್ದಾರೆ. ಆದ್ದರಿಂದ ರೈತರ ಸಮಸ್ಯೆಗಳಿಗೆ ಸ್ಪಂದಿ­ಸುವ ರೈತ ನಾಯಕರನ್ನೇ ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಸಿ ಗೆಲ್ಲಿಸಬೇಕು. ರೈತರಿಗೆ ಮಾತ್ರ ರೈತರ
ಸಂಕಷ್ಟ ಏನೆಂಬುದು ಗೊತ್ತಾಗುತ್ತದೆ’ ಎಂದರು.

‘ಒಂದೆಡೆ ಸಾಲ ಮಾಡಿರುವ ರೈತರು ಅದನ್ನು ತೀರಿಸಲಾಗಿದೆ ಪರದಾಡು­ತ್ತಿದ್ದರೆ, ಇನ್ನೊಂದೆಡೆ ಬ್ಯಾಂಕ್‌ನವರು ಸಾಲ ವಸೂಲಿಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ’ ಎಂದು ಕೆ.ಪಿ.ಸಿ.ಸಿ. ರಾಜ್ಯ ಕಾರ್ಯದರ್ಶಿ ರಾಜಶೇಖರ ಮೆಣಸಿನಕಾಯಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.