ADVERTISEMENT

‘ವಂದೇ ಮಾತರಂನಲ್ಲಿದೆ ಒಗ್ಗಟ್ಟಿನ ಶಕ್ತಿ’

​ಪ್ರಜಾವಾಣಿ ವಾರ್ತೆ
Published 23 ಮೇ 2017, 8:54 IST
Last Updated 23 ಮೇ 2017, 8:54 IST

ಧಾರವಾಡ:  ‘ವಂದೇ ಮಾತರಂ ದೇಶದ ಪ್ರತಿಯೊಬ್ಬರನ್ನು ಒಗ್ಗೂಡಿಸುವ ಶಕ್ತಿ ಮಂತ್ರ. ಆದರೆ, ಅದನ್ನು ಹಾಡುವ ಕುರಿತು ಚರ್ಚೆ ನಡೆಯುತ್ತಿರುವುದು ವಿಷಾದದ ಸಂಗತಿ’ ಎಂದು ಉತ್ತರ ಕರ್ನಾಟಕ ಹಿಂದೂ ಜಾಗರಣ ವೇದಿಕೆ ಪ್ರಾಂತ ಸಂಚಾಲಕ ಶಿವಾನಂದ ಬಡಿಗೇರ ಹೇಳಿದರು.

ತಾಲ್ಲೂಕಿನ ನರೇಂದ್ರ ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗ ದಳ ವತಿಯಿಂದ ಸೋಮವಾರ ಆಯೋಜಿಸಿದ್ದ ರಾಮ ರಾಜ್ಯ ಸ್ಥಾಪನೆಗಾಗಿ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ನಮ್ಮದು ವಿವಿಧ ಜಾತಿ, ಧರ್ಮಗಳ ಜನರು ಏಕತೆಯಿಂದ ಬದುಕುತ್ತಿರುವ ನಾಡು. ಆದರೆ, ಇಲ್ಲಿ ಬದುಕುತ್ತಿರುವವರಿಗೆ ದೇಶಭಕ್ತಿ ಮುಖ್ಯ. ವಂದೇ ಮಾತರಂ ಹಾಡುವುದಿಲ್ಲ ಎನ್ನುವವರಿಗೆ ಇಲ್ಲಿ ಜಾಗವಿಲ್ಲ’ ಎಂದರು.

ADVERTISEMENT

‘ರಾಮ ಮಂದಿರ ನಿರ್ಮಾಣ ಹಿಂದೂಗಳ ಜನ್ಮ ಸಿದ್ಧ ಹಕ್ಕು. ಅದನ್ನು ಪ್ರಶ್ನಿಸಲು ಯಾರಿಂದಲೂ ಸಾಧ್ಯವಿಲ್ಲ. ಹಿಂದೂಗಳು ಒಂದಾಗಿ ರಾಮ ಮಂದಿರ ನಿರ್ಮಾಣಕ್ಕೆ ಪಣ ತೊಡಬೇಕಿದೆ. ಪ್ರಸ್ತುತ ಹಿಂದೂ ಸಮಾಜ ಅನೇಕ ಜಾತಿಗಳ ಹೆಸರಿನಲ್ಲಿ ಒಡೆದು ಹೋಗುತ್ತಿದೆ.

ಏಕತೆ ಎನ್ನುವುದು ಕಾಣುತ್ತಿಲ್ಲ. ಹಿಂದೂ ಎನ್ನುವುದು ಜಾತಿ, ಧರ್ಮವಲ್ಲ. ಅದೊಂದು ಜೀವನ ಪದ್ಧತಿ. ಈ ದೇಶದಲ್ಲಿ ಬದುಕುತ್ತಿರುವ ಪ್ರತಿಯೊಬ್ಬರೂ ಹಿಂದೂ ಎನ್ನುವ ಭಾವನೆ ಮೂಡಬೇಕು. ದೇಶದ ಪ್ರಮುಖ ಮಹಾಪುರುಷರನ್ನು ಜಾತಿಗಳಿಗೆ ಸೀಮಿತಗೊಳಿಸಲಾಗುತ್ತಿದೆ. ಅದು ಸರಿಯಲ್ಲ. ಅವರು ಇಡೀ ಮನುಕುಲಕ್ಕೆ ಮಾರ್ಗದರ್ಶನ ಮಾಡಿದವರು’ ಎಂದರು.  

ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ  ಸ್ವಾಮೀಜಿ ಮಾತನಾಡಿ, ‘ಜಾತಿ, ಮತಗಳನ್ನು ಮೀರಿ ನಾವು ಹಿಂದೂಗಳು ಎನ್ನುವ ಭಾವನೆ ಬೆಳೆಯಬೇಕು. ನಾವು ವಾಸಿಸುತ್ತಿರುವ ದೇಶ ಒಂದು, ನಾವೆಲ್ಲ ಒಂದು ಎನ್ನುವ ಮನಸ್ಥಿತಿ ನಮ್ಮದಾಗಬೇಕು’ ಎಂದರು.

ಚನ್ನಬಸವ ಸ್ವಾಮೀಜಿ, ಮಾಜಿ ಸಚಿವ ಎ.ಬಿ.ದೇಸಾಯಿ, ಆನಂದಗೌಡ ಪಾಟೀಲ, ಎಸ್‌.ಆರ್. ರಾಮನಗೌಡರ, ಎಸ್.ಎಚ್. ಪಾಟೀಲ, ಪ್ರಭಾಕರ ದೇಶಪಾಂಡೆ, ಶಿವಾನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.