ADVERTISEMENT

ವರ್ಷಧಾರೆ: ಉರುಳಿ ಬಿದ್ದ ಮರ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2014, 5:35 IST
Last Updated 20 ಸೆಪ್ಟೆಂಬರ್ 2014, 5:35 IST
ಧಾರಾಕಾರ ಮಳೆಯಲ್ಲಿ ಮಸುಕಾಗಿ ಕಾಣುತ್ತಿರುವ ಮುಮ್ಮಿಗಟ್ಟಿ ಗ್ರಾಮ 					       -ಚಿತ್ರ– ಬಿ.ಎಂ.ಕೇದಾರನಾಥ
ಧಾರಾಕಾರ ಮಳೆಯಲ್ಲಿ ಮಸುಕಾಗಿ ಕಾಣುತ್ತಿರುವ ಮುಮ್ಮಿಗಟ್ಟಿ ಗ್ರಾಮ -ಚಿತ್ರ– ಬಿ.ಎಂ.ಕೇದಾರನಾಥ   

ಹುಬ್ಬಳ್ಳಿ: ಶುಕ್ರವಾರ ಮಧ್ಯಾಹ್ನ ನಗರದಲ್ಲಿ ಒಂದು ತಾಸು ಕಾಲ ಸುರಿದ ರಭಸದ ಮಳೆಯಿಂದಾಗಿ ರಸ್ತೆಗಳಲ್ಲಿ ಅಡಿಗಳ ಎತ್ತರದವರೆಗೂ ನೀರು ಹರಿಯಿತು. ಚರಂಡಿಗಳಲ್ಲಿ ಮಳೆನೀರು ಉಕ್ಕಿಹರಿಯುತ್ತಾ ತಗ್ಗಿನ ಪ್ರದೇಶದ ಮನೆಗಳು, ಅಂಗಡಿಗಳಿಗೂ ನುಗ್ಗಿತು.

ಗುಡುಗು–ಸಿಡಿಲುಗಳ ಸದ್ದಿಲ್ಲದೆ ಬಂದೆರಗಿದ ಮಳೆಯಿಂದಾಗಿ ಹೊರಗೆ ಹೊರಟಿದ್ದ ಮಂದಿ ತೊಂದರೆಗೆ ಒಳಗಾದರು. ಬಹುತೇಕ ರಸ್ತೆಗಳು ಜಲಾವೃತಗೊಂಡವು. ದಾಜೀಬಾನಪೇಟೆ, ಕೊಯಿನ್‌ ರಸ್ತೆ, ವಿದ್ಯಾನಗರ, ಚನ್ನಮ್ಮ ವೃತ್ತ ಮೊದಲಾದ ಕಡೆಗಳಲ್ಲಿ ನೀರು ನಿಂತಿತ್ತು. ಹೊಸೂರು ವೃತ್ತದಲ್ಲಿ ಸಣ್ಣದೊಂದು ಕೆರೆಯೇ ನಿರ್ಮಾಣವಾದಂತಹ ಪರಿಸ್ಥಿತಿ ಇತ್ತು. ಮಳೆಯ ಸಂದರ್ಭ ನಗರದ ಬಹುತೇಕ ಕಡೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ವಾಹನಗಳಿಗೂ ನೀರು ತುಂಬಿಕೊಂಡ ಪರಿಣಾಮ ಚಾಲೂ ಆಗದೇ ಪ್ರಯಾಣಿಕರು ಪರದಾಡುವಂತಾಯಿತು. ಈಗಾಗಲೇ ತಗ್ಗುಗುಂಡಿಗಳಿಂದ ಕೂಡಿರುವ ರಸ್ತೆಗಳಲ್ಲಿ ಕೆಸರು ತುಂಬಿಕೊಂಡ ಪರಿಣಾಮ ಬೈಕ್‌ ಸವಾರರು ಜಾರಿಬಿದ್ದು ಗಾಯಗೊಂಡ ಘಟನೆಗಳೂ ನಡೆದವು.

ಘಂಟಿಕೇರಿಯಲ್ಲಿರುವ ಸರ್ಕಾರಿ ಶಾಲೆ ಸಮೀಪ ಎರಡು ಮರಗಳು ಧರೆಗೆ ಉರುಳಿದವು. ಸಂಜೆ ಈ ಘಟನೆ ನಡೆದಿದ್ದು, ಮಕ್ಕಳು ಅದಾಗಲೇ ಶಾಲೆ ಬಿಟ್ಟು ತೆರಳಿದ್ದ ಕಾರಣ ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಲಿಲ್ಲ. ವಿದ್ಯುತ್‌ ತಂತಿಗಳು ತುಂಡಾಗಿದ್ದು, ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು.
ವಿದ್ಯಾನಗರ ಭಾಗದಲ್ಲಿ ಕೆಲವು ಅಂಗಡಿಗಳಿಗೆ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ. ಆನಂದನಗರ, ರಾಮಲಿಂಗೇಶ್ವರ ನಗರದ ತಗ್ಗುಪ್ರದೇಶಗಳಲ್ಲಿನ ಕೆಲವು ಮನೆಗಳಿಗೆ ಚರಂಡಿ ನೀರು ನುಗ್ಗಿದ ಪರಿಣಾಮ ಜನರು ಪೇಚಾಡುವಂತಾಯಿತು.

ಮನೆಗಳಿಗೆ ನುಗ್ಗಿದ ನೀರು
ಧಾರವಾಡ: ಬಹಳ ದಿನಗಳಿಂದ ಬಿಡುವು ನೀಡಿದ್ದ ಮಳೆ ಶುಕ್ರವಾರ ಮಧ್ಯಾಹ್ನ ನಗರದಲ್ಲಿ ಧಾರಾಕಾರವಾಗಿ ಸುರಿಯಿತು. ಇದರಿಂದ ನಗರಕ್ಕೆ ತುಸು ತಂಪೆರೆದರೂ, ತಗ್ಗಿನ ಪ್ರದೇಶಗಳಿಗೆ ನೀರು ನುಗ್ಗಿ ಸಾರ್ವಜನಿಕ ಜೀವನ ಅಸ್ತವ್ಯಸ್ತಗೊಂಡಿತು.

ಇಲ್ಲಿನ ಶಿವಾನಂದ ನಗರದ 3ನೇ ಅಡ್ಡರಸ್ತೆಯಲ್ಲಿ ಹಲವು ಮನೆಗಳಿಗೆ ಮಳೆನೀರು ನುಗ್ಗಿದ್ದರಿಂದ ನೀರು ಹೊರಹಾಕಲು ನಿವಾಸಿಗಳು ಪರದಾಡಿದರು. ಮದುವೆ ಸಿದ್ಧತೆಯ ಸಂಭ್ರಮದಲ್ಲಿದ್ದ ನೂರ್‌ಜಾನ್‌ ವಾಡ್ಲೆ ಎಂಬುವವರ ಮನೆಯಲ್ಲಿ ಖರೀದಿಸಿದ್ದ ಹೊಸ ವಸ್ತ್ರ, ಪಾತ್ರೆ ಹಾಗೂ ದಿನಸಿ ಸಾಮಾಗ್ರಿಗಳೆಲ್ಲವೂ ನೀರಿನಲ್ಲಿ ಮುಳುಗಿದ್ದವು. ‘ಹಬ್ಬ ಮಾಡಬೇಕೆಂದುಕೊಂಡಿದ್ದೆವು. ಈಗ ಇಲ್ಲಿನ ಅನಾಹುತ ನೋಡಿ’ ಎಂದೆನ್ನುತ್ತಲೇ ಬಕೆಟ್‌ನಿಂದ ನೀರು ಎತ್ತಿ ಹೊರಹಾಕುತ್ತಿದ್ದರು.

‘ಶಿವಾನಂದ ಬಡಾವಣೆಯ 2ನೇ ಅಡ್ಡರಸ್ತೆಯಲ್ಲಿ ಚರಂಡಿಯ ಮೇಲೆ ಮನೆ ಕಟ್ಟಿಕೊಂಡಿದ್ದರಿಂದ ಮಳೆನೀರು ಸರಾಗವಾಗಿ ಹರಿಯಲು ಸಾಧ್ಯವಾಗಿಲ್ಲ. ಪಕ್ಕದ ಖಾಲಿ ನಿವೇಶನದಲ್ಲಿ ನೀರು ನಿಂತು, ರಕ್ಷಣಾ ಗೋಡೆ ಶಿಥಿಲಗೊಂಡು ಕುಸಿದಿದ್ದರಿಂದ ತಗ್ಗಿನ ಮನೆಗಳಿಗೆ ಒಮ್ಮಿಂದೊಮ್ಮೆಲೆ ನೀರು ನುಗ್ಗಿದೆ’ ಎಂದು ಇದೇ ಬಡಾವಣೆಯ ನಿವಾಸಿ ಮೊಹಮ್ಮದ್‌ ರಫೀಕ್‌ ತಿಳಿಸಿದರು.

ಘಟನಾ ಸ್ಥಳಕ್ಕೆ ಪಾಲಿಕೆ ಸದಸ್ಯ ಈಶ್ವರ ಸಾಣಿಕೊಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲ್ಲೂಕಿನಲ್ಲಿ ಮಳೆಯಿಂದ ಯಾವುದೇ ಆಸ್ತಿಪಾಸ್ತಿಗೆ ಹಾನಿಯಾದ ಹಾಗೂ ಪ್ರಾಣಾಪಾಯವಾದ ವರದಿಯಾಗಿಲ್ಲ ಎಂದು ತಹಶೀಲ್ದಾರ್‌ ಆರ್‌.ವಿ.ಕಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.