ADVERTISEMENT

ವಸೂಲಾಗದ ಕರ; ಜಲಮಂಡಳಿಗೆ ಗರ

ಹುಬ್ಬಳ್ಳಿ–ಧಾರವಾಡ, ಕುಂದಗೋಳ ಪಟ್ಟಣದಿಂದ ಬರಬೇಕಿದೆ ₹123.96 ಕೋಟಿ ನೀರಿನ ಕರ

ಬಸವರಾಜ ಸಂಪಳ್ಳಿ
Published 5 ಜನವರಿ 2017, 10:21 IST
Last Updated 5 ಜನವರಿ 2017, 10:21 IST

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಅವಳಿ ನಗರ, ಕುಂದಗೋಳ ಪಟ್ಟಣ ಸೇರಿದಂತೆ 14 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುತ್ತಿರುವ ಜಲಮಂಡಳಿಗೆ ಬಳಕೆದಾರರಿಂದ ₹ 69.47 ಕೋಟಿ ಅಸಲು ಮತ್ತು ₹ 54.49 ಕೋಟಿ ಬಡ್ಡಿ ಸೇರಿದಂತೆ ಒಟ್ಟು ₹123.96 ಕೋಟಿ ನೀರಿನ ಕರ ಬರುವುದು ಬಾಕಿ ಇದೆ.

ಹುಬ್ಬಳ್ಳಿ –ಧಾರವಾಡ ಅವಳಿ ನಗರದಲ್ಲಿ 1.40 ಲಕ್ಷ ನಳಗಳ ಸಂಪರ್ಕವಿದೆ. ಇದರಲ್ಲಿ 600 ಬಳಕೆದಾರರು ₹ 50 ಸಾವಿರಕ್ಕಿಂತ ಹೆಚ್ಚು ನೀರಿನ ಕರ ಪಾವತಿಸಬೇಕಾಗಿದೆ ಎಂದು ಜಲ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಅಶೋಕ ಮಾಡ್ಯಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ಹುಬ್ಬಳ್ಳಿ ನಗರವೊಂದರಲ್ಲೇ 88 ಸಾವಿರ ನಳ ಸಂಪರ್ಕವಿದ್ದು, ಇದರಲ್ಲಿ 44 ಸಾವಿರ ನಳಗಳ ಬಳಕೆದಾರರು ನೀರಿನ ಕರ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದಾರೆ ಎಂದರು.

ನೀರಿನ ಕರವನ್ನು ಹೆಚ್ಚಿನ ಪ್ರಮಾಣದಲ್ಲಿ ಉಳಿಸಿಕೊಂಡವರಲ್ಲಿ ಕೈಗಾರಿಕೋದ್ಯಮಿಗಳು, ಶಿಕ್ಷಣ ಸಂಸ್ಥೆಗಳು, ರೈಲ್ವೆ, ವಿಮಾನ ನಿಲ್ದಾಣ, ಕಿಮ್ಸ್‌, ಕಿರ್ಲೊಸ್ಕರ್‌, ಬಿವಿಬಿ ಎಂಜಿನಿಯರಿಂಗ್‌ ಕಾಲೇಜು ಸೇರಿದೆ ಎಂದರು.

ಹುಬ್ಬಳ್ಳಿ ನಗರ ವ್ಯಾಪ್ತಿಯಲ್ಲಿರುವ 15 ಕೊಳೆಗೇರಿಗಳು ಹಾಗೂ ಉಣಕಲ್‌, ಸಾಯಿನಗರ, ಜಂಗ್ಲಿಪೇಟೆ, ಗೋಪನಕೊಪ್ಪ, ಬೆಂಗೇರಿ, ಬಿಡ್ನಾಳ, ಮಂಟೂರು ರಸ್ತೆ, ತಾರಿಹಾಳ, ಗೋಕುಲ ಗ್ರಾಮ ಸೇರಿದಂತೆ ಹೊಸದಾಗಿ ಸೇರ್ಪಡೆಯಾದ ಗ್ರಾಮಗಳಿಂದ ಶೇ 50ರಷ್ಟು ನೀರಿನ ಕರ ವಸೂಲಿಯಾಗುತ್ತಿಲ್ಲ ಎಂದು ಹೇಳಿದರು.

ನಿರಂತರ ನೀರು ಪೂರೈಕೆ(24x7) ಮಾಡಲಾಗುತ್ತಿರುವ ಹುಬ್ಬಳ್ಳಿಯ 4 ವಾರ್ಡ್‌ಗಳಿಂದಲೂ ಸರಿಯಾಗಿ ನೀರಿನ ಕರ ವಸೂಲಿಯಾಗುತ್ತಿಲ್ಲ. ಶೇ 35ರಷ್ಟು ಕರ ವಸೂಲಿ ಬಾಕಿ ಇದೆ ಎಂದರು. ‘ಸರ್ಕಾರ ಅಕ್ಕಿಯನ್ನೇ ಉಚಿತವಾಗಿ ನೀಡುತ್ತಿರುವಾಗ ನೀರಿಗೇಗೆ ಹಣ ಕೊಡಬೇಕು ಎಂದು ಜನರು  ಪ್ರಶ್ನಿಸುತ್ತಾರೆ. ಹೀಗಾಗಿ ನೀರಿನ ಬಾಕಿ ವಸೂಲಿ ಮಾಡುವುದು ಜಲಮಂಡಳಿಗೆ ಕಷ್ಟವಾಗಿದೆ’ ಎಂದರು.

‘ಬಡವರಿಗೆ ನೀರಿನ ಕರ ಕಡಿಮೆ ಮಾಡಿ ಎಂಬ ಬೇಡಿಕೆಯೂ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ’ ಎಂದು ಅವರು ತಿಳಿಸಿದರು. ‘ರಾಜ್ಯ ಸರ್ಕಾರವು ನೀರಿನ ದರವನ್ನು 20–07–2011ರಲ್ಲಿ ಪರಿಷ್ಕರಿಸಿತು. ಆದರೆ, ಈ ಸಂದರ್ಭದಲ್ಲಿ ಪಾಲಿಕೆ ಪರಿಷ್ಕತ ದರವನ್ನು ಜಾರಿಗೆ ತರಲಿಲ್ಲ. ಬಳಿಕ 30–06–2015ರಂದು ಪರಿಷ್ಕೃತ ದರವನ್ನು ಜಾರಿಗೊಳಿಸಲಾಯಿತು. 2011ರಿಂದ 2015ರ ವರೆಗಿನ ದರಗಳ ವ್ಯತ್ಯಾಸವನ್ನು ಐದು ಕಂತುಗಳನ್ನಾಗಿ ಮಾಡಿ ಗ್ರಾಹಕರ ಬಿಲ್ಲುಗಳಲ್ಲಿ ಸೇರಿಸಲಾಯಿತು. ಇದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದ್ದು, ಪರಿಣಾಮ ಕರ ಪಾವತಿಯಾಗುತ್ತಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.