ADVERTISEMENT

ವಾಯವ್ಯ ಸಾರಿಗೆ ಸಂಸ್ಥೆಗೆ ಹೈಟೆಕ್‌ ಸ್ಪರ್ಶ

ವಾ.ಕ.ರ.ಸಾ.ಸಂಸ್ಥೆ ಪ್ರಗತಿ –ಭವಿಷ್ಯದ ಯೋಜನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 10:03 IST
Last Updated 18 ಫೆಬ್ರುವರಿ 2017, 10:03 IST
ಸಂಸ್ಥೆಯಿಂದ ನೂತನವಾಗಿ ಸಂಚಾರ ಆರಂಭಿಸಿರುವ ಮಿನಿ ಬಸ್‌ಗಳು
ಸಂಸ್ಥೆಯಿಂದ ನೂತನವಾಗಿ ಸಂಚಾರ ಆರಂಭಿಸಿರುವ ಮಿನಿ ಬಸ್‌ಗಳು   
ಹುಬ್ಬಳ್ಳಿ: ‘ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯನ್ನು ಹೈಟೆಕ್‌ಗೊಳಿಸುವುದರ ಜೊತೆಗೆ, ಪ್ರಯಾಣಿಕ ಸ್ನೇಹಿಯಾಗಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಸದಾನಂದ ಡಂಗನವರ ಹೇಳಿದರು. 
 
ಸಂಸ್ಥೆಯ ಕೇಂದ್ರಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರು ಜಿಲ್ಲೆಯ ವ್ಯಾಪ್ತಿಯಲ್ಲಿ 26,000 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ 16 ಲಕ್ಷ ಕಿ.ಮೀ.ವರೆಗೆ ಸಂಸ್ಥೆಯ ಬಸ್‌ಗಳು ಸಂಚರಿಸುತ್ತಿವೆ. 4609 ಹಳ್ಳಿಗಳನ್ನು ತಲುಪುತ್ತಿವೆ ಎಂದು ಹೇಳಿದರು. 
 
‘ಅಂಗವಿಕಲರು, ಹಿರಿಯ ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ಒಟ್ಟು 5ಲಕ್ಷ ಪಾಸ್‌ಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಪ್ರತಿ ನಿಲ್ದಾಣದಲ್ಲಿ, ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಅನುಕೂಲಕ್ಕಾಗಿ ನಿಲ್ದಾಣಗಳಲ್ಲಿ ಪಾಶ್ಚಾತ್ಯ ಶೈಲಿಯ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಅಲ್ಲದೆ, ಶೌಚಾಲಯಗಳ ಸ್ವಚ್ಛತೆಗಾಗಿ ಎರಡು ತಂಡ ರಚಿಸಲಾಗುತ್ತಿದ್ದು, ಈ ಹೊಣೆಯನ್ನು ಖಾಸಗಿಯವರಿಗೆ ವಹಿಸಲಾಗುವುದು’ ಎಂದು ಅವರು ಹೇಳಿದರು. 
 
‘ಕೇಂದ್ರ ಸರ್ಕಾರ ನಾಲ್ಕೈದು ಬಾರಿ ಡೀಸೆಲ್‌ ದರ ಹೆಚ್ಚಿಸಿದರೂ ನಾವು ಬಸ್‌ ಪ್ರಯಾಣ ದರ ಹೆಚ್ಚಿಸಿಲ್ಲ’ ಎಂದರು. 120 ಮಿನಿ ಬಸ್‌:  ಹುಬ್ಬಳ್ಳಿ–ಧಾರವಾಡ ಅವಳಿ ನಗರ ವ್ಯಾಪ್ತಿಯಲ್ಲಿ 120 ಮಿನಿಬಸ್‌ ಸಂಚಾರ ಆರಂಭಿಸಿವೆ. ನಗರದ ಒಳಭಾಗಗಳಲ್ಲಿಯೂ ಈ ಬಸ್‌ ಸಂಚರಿಸುತ್ತಿದ್ದು, ಸಾರ್ವಜನಿಕರಿಗೆ ಅನುಕೂಲವಾಗಿದೆ. ಮುಂದಿನ ವರ್ಷದಲ್ಲಿ 650 ಹೊಸ ಬಸ್‌ಗಳು ಸಂಚಾರ ಆರಂಭಿಸಲಿವೆ ಎಂದು ಅವರು ತಿಳಿಸಿದರು. 
 
ವರದಿ ಸಲ್ಲಿಕೆ: ಬಿಡಿಭಾಗಗಳ ಖರೀದಿ ಮತ್ತು ಗುಜರಿ ಸಾಮಗ್ರಿಗಳ ಕಳ್ಳತನ ಹಗರಣಕ್ಕೆ ಸಂಬಂಧಿಸಿದಂತೆ, ಸಂಸ್ಥೆಯಿಂದ ತನಿಖೆ ನಡೆಸಿ, ಕೆಎಸ್‌ಆರ್‌ಟಿಸಿಗೆ ವರದಿ ಸಲ್ಲಿಸಲಾಗಿದೆ. ಮುಂದಿನ ಕ್ರಮ ಅವರು ತೆಗೆದುಕೊಳ್ಳಬೇಕು’ ಎಂದು ವ್ಯವಸ್ಥಾಪಕ ನಿರ್ದೇಶಕಿ ವಿನೋತ್‌ ಪ್ರಿಯಾ ಹೇಳಿದರು. 
 
ಪ್ರಯಾಣಿಕರಿಗೆ ಟ್ರಾವೆಲ್‌ ಕಾರ್ಡ್‌: ಪ್ರಯಾಣದ ವೇಳೆ ಉದ್ಭವಿಸುವ ಚಿಲ್ಲರೆ ಸಮಸ್ಯೆ ನೀಗಲು ಪ್ರಯಾಣಿಕರಿಗೆ ಟ್ರಾವೆಲ್‌ ಕಾರ್ಡ್‌ ನೀಡಲಾಗುವುದು. ಮುಂಗಡವಾಗಿ ಹಣವನ್ನು ಭರ್ತಿ ಮಾಡಿ, ಪ್ರಯಾಣದ ವೇಳೆ ಈ ಕಾರ್ಡ್‌ಅನ್ನು ಟಿಕೆಟ್‌ ಖರೀದಿಗೆ ಬಳಸಬಹುದು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ವಿನೋತ್‌ ಪ್ರಿಯಾ ಹೇಳಿದರು.
 
ಬಸ್‌ಗಳಲ್ಲಿ ವೈ–ಫೈ ಶೀಘ್ರ: ಸರ್ಕಾರಿ ಬಸ್‌ಗಳಲ್ಲಿ ಸಾರ್ವಜನಿಕರ ಪ್ರಯಾಣಿಕರ ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಶೀಘ್ರ ಉಚಿತ ವೈ–ಫೈ ಸೇವೆ ಆರಂಭಿಸುತ್ತಿದ್ದು, ನಮ್ಮ ಸಂಸ್ಥೆಯ ಬಸ್‌ಗಳಲ್ಲೂ ಈ ಸೌಲಭ್ಯ ಇರಲಿದೆ ಎಂದು ಡಂಗನವರ ಹೇಳಿದರು.
 
ತಿಂಗಳಿಗೊಮ್ಮೆ ಬಸ್‌ ದಿನ: ತಿಂಗಳ ಮೊದಲ ಅಥವಾ ಎರಡನೇ ಸೋಮವಾರ ಬಸ್‌ ದಿನ ಆಚರಿಸಲು ತೀರ್ಮಾನಿಸಿದ್ದೇವೆ. ಅಂದು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಖಾಸಗಿ ವಾಹನ ಬಿಟ್ಟು, ಸರ್ಕಾರಿ ಬಸ್‌ಗಳಲ್ಲಿ ಸಂಚರಿಸಲು ಮನವಿ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
 
ಭವಿಷ್ಯದ ಯೋಜನೆ ವಿವರ
 
- 400- ಮಾರ್ಚ್‌ನಲ್ಲಿ  ಸಂಚಾರ ಆರಂಭಿಸಲಿರುವ ಬಸ್‌ಗಳು
- ವಾಟ್ಸ್‌ಆ್ಯಪ್‌ ಸಂಖ್ಯೆ - ಸಂಸ್ಥೆಯೊಂದಿಗೆ ಸಾರ್ವಜನಿಕರು ಸಂಪರ್ಕ ಸಾಧಿಸಲು ವಾಟ್ಸ್‌ಆ್ಯಪ್‌ ಸಂಖ್ಯೆ ನೀಡಲಾಗುವುದು
- 650 - ಮುಂದಿನ ವರ್ಷ ಸಂಚಾರ ಆರಂಭಿಸುವ ಬಸ್‌ಗಳು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.