ADVERTISEMENT

ವಿದ್ಯುತ್‌ ಕಳ್ಳತನ: 1,039 ಪ್ರಕರಣ

ಮೀಟರ್‌ ರೀಡರ್‌–ಲೈನ್‌ಮನ್‌ರಿಂದ ಹೆಸ್ಕಾಂ ವ್ಯಾಪ್ತಿಯಲ್ಲಿ ಸಮೀಕ್ಷೆ

ಭೀಮಸೇನ ಚಳಗೇರಿ
Published 28 ಆಗಸ್ಟ್ 2014, 10:26 IST
Last Updated 28 ಆಗಸ್ಟ್ 2014, 10:26 IST

ಹುಬ್ಬಳ್ಳಿ: ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ವಿದ್ಯುತ್‌ ಕಳ್ಳತನಕ್ಕೆ ಸಂಬಂಧಪಟ್ಟಂತೆ ಒಟ್ಟು 1,039 ಪ್ರಕರಣಗಳು ಪತ್ತೆಯಾಗಿವೆ.

ಹೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್‌ ಕಳ್ಳತನ ಹಾಗೂ ದುರುಪಯೋಗ ಕುರಿತು ಲೈನ್‌ಮನ್‌ ಹಾಗೂ ಮೀಟರ್‌ ರೀಡರ್‌ಗಳಿಂದ ಸಮೀಕ್ಷೆ ನಡೆಸುವಂತೆ ಇಲ್ಲಿನ ನವನಗರದಲ್ಲಿರುವ ಹೆಸ್ಕಾಂ ಕಚೇರಿಯಲ್ಲಿ ಕಳೆದ ಜೂ. 10ರಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೂಚಿಸಿದ್ದರು. ಈ ಸೂಚನೆಯಂತೆ ಜೂನ್‌, ಜುಲೈ ಮತ್ತು ಆಗಸ್ಟ್‌ನಲ್ಲಿ ಕಂಪೆನಿಯ ಮೀಟರ್‌ ರೀಡರ್‌ ಮತ್ತು ಲೈನ್‌ಮೆನ್‌ ನಡೆಸಿದ ಸಮೀಕ್ಷೆಯಲ್ಲಿ ಈ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.

ವಿದ್ಯುತ್‌ ಕಳ್ಳತನ ಹಾಗೂ ದುರುಪಯೋಗಕ್ಕೆ ಸಂಬಂಧಿಸಿದಂತೆ ಪೈಕಿ ಹುಬ್ಬಳ್ಳಿ ವಲಯ ಕಚೇರಿ ವ್ಯಾಪ್ತಿಯಲ್ಲಿ 844 ಕಳ್ಳತನ ಪ್ರಕರಣಗಳು ಪತ್ತೆ ಹಚ್ಚಲಾಗಿದೆ. ಈ ಪೈಕಿ ಹುಬ್ಬಳ್ಳಿ ನಗರ ಪ್ರದೇಶದಲ್ಲಿ 166 ಹಾಗೂ ಗ್ರಾಮೀಣ ಭಾಗದಲ್ಲಿ 278 ಪ್ರಕರಣಗಳು ಪತ್ತೆಯಾಗಿವೆ. ಇನ್ನು ಧಾರವಾಡ ನಗರ– 269, ಗ್ರಾಮೀಣ– 36 ಹಾಗೂ ಗದಗ ವೃತ್ತ ಕಚೇರಿ ವ್ಯಾಪ್ತಿಯಲ್ಲಿ 10 ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.

ಬೆಳಗಾವಿ ವಲಯ ಕಚೇರಿ ವ್ಯಾಪ್ತಿಯಲ್ಲಿ ಒಟ್ಟು 280 ಕಳ್ಳತನ ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ ವಿಜಾಪುರ ವೃತ್ತ ಕಚೇರಿ ವ್ಯಾಪ್ತಿಯಲ್ಲಿ ಗರಿಷ್ಠ 152 ಪ್ರಕರಣ ಪತ್ತೆಯಾಗಿವೆ. ಉಳಿದಂತೆ ಬೆಳಗಾವಿ ವೃತ್ತ– 7, ಚಿಕ್ಕೋಡಿ– 74 ಹಾಗೂ ಬಾಗಲಕೋಟೆ ವೃತ್ತ ಕಚೇರಿ ವ್ಯಾಪ್ತಿಯಲ್ಲಿ 47 ಪ್ರಕರಣಗಳು ಪತ್ತೆಯಾಗಿವೆ ಎಂದು ಹೆಸ್ಕಾಂ ಒದಗಿಸಿರುವ ದಾಖಲೆಗಳು ಹೇಳುತ್ತವೆ.
ಅಚ್ಚರಿ ಎಂದರೆ, ಹುಬ್ಬಳ್ಳಿ ವಲಯ ವ್ಯಾಪ್ತಿಯಲ್ಲಿ ಬರುವ ಶಿರಸಿ ವೃತ್ತ ಕಚೇರಿ ವ್ಯಾಪ್ತಿಯಲ್ಲಿ ವಿದ್ಯುತ್‌ ಕಳ್ಳತನಕ್ಕೆ ಸಂಬಂಧಪಟ್ಟಂತೆ ಒಂದೇ ಒಂದು ಪ್ರಕರಣ ಪತ್ತೆಯಾಗಿಲ್ಲ. ಆದರೆ, ಶಿರಸಿ ವೃತ್ತ ಕಚೇರಿ ವ್ಯಾಪ್ತಿಯಲ್ಲಿ 1,671 ಅನಧಿಕೃತ ನೀರಾವರಿ ಪಂಪ್‌ಸೆಟ್‌ಗಳಿವೆ ಎಂದು ಇವೇ ದಾಖಲೆಗಳು ಹೇಳುತ್ತವೆ!

ತಾಳೆಯಾಗದ ಅಂಕಿಅಂಶ!
ಹೆಸ್ಕಾಂ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ವಿದ್ಯುತ್‌ ಬಳಕೆ ಮಾಡುತ್ತಿರುವುದನ್ನು ಹೆಸ್ಕಾಂ ಜಾಗೃತ ದಳವೂ ಪತ್ತೆ ಮಾಡುತ್ತದೆ. ಜುಲೈ 1ರಿಂದ ಆಗಸ್ಟ್‌ 20ರವರೆಗೆ ಇಂತಹ ಒಟ್ಟು 485 ಪ್ರಕರಣಗಳನ್ನು ಪತ್ತೆ ಮಾಡಿರುವ ಜಾಗೃತ ದಳ,  ರೂ 1,08,24,229 ದಂಡ ವಸೂಲಿ ಮಾಡಿದೆ ಎಂದು ಹೆಸ್ಕಾಂ ಮೂಲಗಳು ಹೇಳುತ್ತವೆ.

ಅಚ್ಚರಿಯೆಂದರೆ, ಲೈನ್‌ಮನ್‌ ಹಾಗೂ ಮೀಟರ್‌ ರೀಡರ್‌ಗಳಿಂದ ನಡೆದ ಸಮೀಕ್ಷೆಯಲ್ಲಿ ಪತ್ತೆಯಾದ ಪ್ರಕರಣಗಳ ಸಂಖ್ಯೆಗೂ (1,039)  ಜಾಗೃತ ದಳ ಪತ್ತೆ ಮಾಡಿದ ಪ್ರಕರಣಗಳ ಸಂಖ್ಯೆಗೂ ತಾಳೆಯಾಗುತ್ತಿಲ್ಲ. ಈ ಕುರಿತು ಸ್ಪಷ್ಚನೆ ಪಡೆಯಲು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬೂ ಗೋಯಲ್‌ ಚೌಧರಿ ಅವರನ್ನು ಸಂಪರ್ಕಿಸಲು ನಡೆಸಿದ ಪ್ರಯತ್ನಗಳು ಫಲ ನೀಡಲಿಲ್ಲ. ಅವರು ಮೊಬೈಲ್‌ ಕರೆಯನ್ನು ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.