ADVERTISEMENT

ವೇತನಕ್ಕಾಗಿ ಅಲೆದು ಅಲೆದು ಸುಸ್ತಾದರು!

ಮನೋಜ ಕುಮಾರ್ ಗುದ್ದಿ
Published 5 ಸೆಪ್ಟೆಂಬರ್ 2017, 5:02 IST
Last Updated 5 ಸೆಪ್ಟೆಂಬರ್ 2017, 5:02 IST

ಹುಬ್ಬಳ್ಳಿ: ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ನಿವೃತ್ತಿಯಾಗುವ ಪಿಯು ಕಾಲೇಜು ಉಪನ್ಯಾಸಕರ ಸೇವೆಯನ್ನು ಶೈಕ್ಷಣಿಕ ವರ್ಷದ ಅವಧಿ ಮುಗಿಯುವವರೆಗೂ ಮುಂದುವರಿಸಿದ ಸರ್ಕಾರ ಅವರಿಗೆ ನೀಡಬೇಕಿದ್ದ ವೇತನವನ್ನು ವರ್ಷವಾದರೂ ನೀಡಿಲ್ಲ.

ವೇತನ ಯಾವಾಗ ಸಿಗುತ್ತದೋ ಎಂಬ ನಿರೀಕ್ಷೆಯಲ್ಲಿರುವ ವೃದ್ಧ ಉಪನ್ಯಾಸಕರು ಪಿಯು ಇಲಾಖೆ ಕಚೇರಿ ಹಾಗೂ ಖಜಾನೆ ಇಲಾಖೆಗೆ ಅಲೆದಾಡಿ ಸುಸ್ತಾಗಿದ್ದಾರೆ.
ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ಉಪನ್ಯಾಸಕರು ನಿವೃತ್ತಿಯಾದರೆ ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ಹಿನ್ನಡೆಯಾಗುತ್ತದೆ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಅವಧಿ ಮುಗಿಯುವವರೆಗೂ ಮುಂದುವರಿಸಲು 2014ರ ಜೂನ್‌ನಲ್ಲಿ ಆದೇಶ (ಸಂಖ್ಯೆ ಇಡಿ 73, ಎಸ್‌ಟಿಬಿ 2016) ಹೊರಡಿಸಿತ್ತು.

ಈ ಆದೇಶಾನುಸಾರ ಧಾರವಾಡ ಜಿಲ್ಲೆಯಲ್ಲಿ ಏಳೆಂಟು ಜನ ಉಪನ್ಯಾಸಕರು ಶೈಕ್ಷಣಿಕ ವರ್ಷ ಮುಗಿಯುವವರೆಗೆ (ಮಾರ್ಚ್‌ 2017) ಮುಂದುವರಿಸಿತ್ತು. ನಿವೃತ್ತಿಯ ಬಳಿಕವೂ ಸೇವೆ ಸಲ್ಲಿಸಿದ್ದಕ್ಕಾಗಿ ಒಂದು ನಿರ್ದಿಷ್ಟ ವೇತನ ನೀಡಲು ಪ್ರತ್ಯೇಕ ಲೆಕ್ಕ ಶೀರ್ಷಿಕೆಯನ್ನು ನಿಗದಿಪಡಿಸಿ ಪಿಯು ಕಾಲೇಜು ಉಪನ್ಯಾಸಕರಿಗೆಂದೇ ₹ 10.74 ಕೋಟಿ ಅನುದಾನ ನಿಗದಿ ಮಾಡಿತ್ತು.

ADVERTISEMENT

‘ಆದರೆ, ಈ ಹಣವನ್ನು ಸರ್ಕಾರ ಇನ್ನೂ ಬಿಡುಗಡೆ ಮಾಡದಿರುವುದರಿಂದ ನಮಗೆ ವೇತನ ಸಿಕ್ಕಿಲ್ಲ. ಕರ್ತವ್ಯ ನಿರ್ವಹಿಸುವಾಗ ಪ್ರತಿ ತಿಂಗಳು ಕೊಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಒಂದು ವರ್ಷವಾದರೂ ವೇತನ ದೊರೆತಿಲ್ಲ. ಈ ಬಗ್ಗೆ ಕೇಳಿ ಕೇಳಿ ಸಾಕಾಗಿದೆ’ ಎಂದು ಉಪನ್ಯಾಸಕರೊಬ್ಬರು ‘ಪ್ರಜಾವಾಣಿ’ ಬಳಿ ಬೇಸರ ವ್ಯಕ್ತಪಡಿಸಿದರು.

‘ಮಧ್ಯಭಾಗದಲ್ಲಿ ನಿವೃತ್ತಿಯಾದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಸರ್ಕಾರ ನಮ್ಮ ಸೇವೆಯನ್ನು ಮುಂದುವರಿಸಿದೆ. ಹಾಗಿದ್ದ ಮೇಲೆ ನಮಗೂ ಸಕಾಲಕ್ಕೆ ವೇತನ ಪಾವತಿ ಮಾಡುವುದು ಸರ್ಕಾರದ ಕರ್ತವ್ಯ. ಈ ಬಗ್ಗೆ ಹಲವು ಸಾರಿ ಪಿಯು ಇಲಾಖೆಯ ಗಮನ ಸೆಳೆದರೂ ಪ್ರಯೋಜನವಾಗಿಲ್ಲ’ ಎಂದರು.

‘ನಾನು ಕಳೆದ ವರ್ಷವೇ ನಿವೃತ್ತಿಯಾಗಿದ್ದೆ. ಇಲಾಖೆ ನನ್ನ ಸೇವೆಯನ್ನು ಮುಂದುವರಿಸಿತು. ಪಾಠ ಹೇಳುವುದು, ಪರೀಕ್ಷೆ ನಡೆಸುವುದು ಸೇರಿದಂತೆ ಎಲ್ಲ ಕೆಲಸಗಳನ್ನು ಮಾಡಿದ್ದೇನೆ. ಆದರೂ, ಸಕಾಲಕ್ಕೆ ವೇತನ ದೊರೆಯದೇ ಇದ್ದುದರಿಂದ ಸಮಸ್ಯೆಯಾಗಿದೆ’ ಎಂದು ಅವರು ವಿವರಿಸಿದರು.

‘ಕೊಡಲ್ಲ ಅಂತ ಹೇಳ್ರಿ’
ವೇತನ ಬಿಡುಗಡೆಯಾಗದಿರುವ ಕುರಿತು ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಗಣೇಶ ಪೂಜಾರ ಅವರನ್ನು ಸಂಪರ್ಕಿಸಿದಾಗ, ‘ನಿಮ್ಮ ಬಳಿ ಬಂದವರ ಹೆಸರೇನು? ನಿಮ್ಮ ಕ್ಯಾಂಡಿಡೇಟಾ ಅವರು? ಇಲ್ಲಿದ್ದಾಗ ಯಾವ ಕೆಲಸವನ್ನೂ ಮಾಡಿಲ್ಲ, ಪಗಾರ ಕೊಡಲ್ಲ ಅಂತ ಹೇಳ್ರಿ ಅವರಿಗೆ’ ಎಂದು ಏರಿದ ಧ್ವನಿಯಲ್ಲಿ ಹೇಳಿದರು!

‘ವೇತನ ಕೊಡುವುದಾಗಿ ಹೇಳಿಯೇ ಸರ್ಕಾರ ಅವರನ್ನು ಸೇವೆಯನ್ನು ಮುಂದುವರಿಸಿತ್ತಲ್ಲ. ಈಗ ಹಾಗೆ ಹೇಳುವುದು ಸರಿಯೇ’ ಎಂದು ಮರು ಪ್ರಶ್ನೆ ಹಾಕಿದಾಗ, ‘ಡಿಸೆಂಬರ್‌ ತನಕ ಕಾಯೋಕೆ ಹೇಳ್ರಿ. ಇಂಥವರನ್ನು ಅದೇ ಕಾಲೇಜಿನಲ್ಲಿ ಮುಂದುವರಿಸುವ ಬದಲು ಉಪನ್ಯಾಸಕರಿಲ್ಲದ ಕಾಲೇಜಿಗೆ ಹಾಕಿ ಎಂದು ಪಿಯು ಇಲಾಖೆ ನಿರ್ದೇಶಕಿ ಶಿಖಾ ಮೇಡಂ ಅವರಿಗೆ ಶಿಫಾರಸು ಮಾಡಿದ್ದೇನೆ’ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.