ADVERTISEMENT

ಸಮುದಾಯ ಕೃಷಿಹೊಂಡ

ಗುರು ಪಿ.ಎಸ್‌
Published 22 ಮಾರ್ಚ್ 2017, 7:54 IST
Last Updated 22 ಮಾರ್ಚ್ 2017, 7:54 IST

ಹುಬ್ಬಳ್ಳಿ: ಲಭ್ಯವಿರುವ ಅಲ್ಪನೀರನ್ನೇ ಸಮರ್ಪಕವಾಗಿ ಬಳಸಿಕೊಳ್ಳಬೇಕು ಹಾಗೂ ಭವಿಷ್ಯಕ್ಕಾಗಿ ನೀರಿನ ಸಂರಕ್ಷಣೆಗೆ ಮಾರ್ಗ ಕಂಡುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಶರೇವಾಡದ ರೈತ ಕುಟುಂಬವೊಂದು ದಿಟ್ಟ ಹೆಜ್ಜೆ ಇಟ್ಟಿದೆ.

‘ಐದು ಎಕರೆ ಪ್ರದೇಶದಲ್ಲಿ ಬಾಳೆ, ಐದು ಎಕರೆಯಲ್ಲಿ ಮಾವು ಹಾಗೂ ಹತ್ತು ಎಕರೆಯಲ್ಲಿ ಚಿಕ್ಕು ಬೆಳೆಯುತ್ತಿದ್ದೇವೆ. ನೀರಿನ ಸಮರ್ಪಕ ಬಳಕೆಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದೇವೆ’ ಎಂದು ಶರೇವಾಡದ ರೈತ ವೆಂಕಪ್ಪ ಬಸವಣ್ಣೆಪ್ಪ ಮೂಲಗಿ ಹೇಳುತ್ತಾರೆ.

ತೋಟಗಾರಿಕೆ ಇಲಾಖೆಯಿಂದ ₹2.20 ಲಕ್ಷ ಸಹಾಯ ಧನ ಪಡೆದು, ಬಾಳೆಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ ವೆಂಕಪ್ಪ. ಇದರಿಂದ ಶೇ 30ರಿಂದ 40ರಷ್ಟು ನೀರು ಉಳಿತಾಯ ಮಾಡುತ್ತಿದ್ದಾರೆ. ಇನ್ನೆರಡು ಬೆಳೆಗಳನ್ನು ಹನಿ ನೀರಾವರಿ ಪದ್ಧತಿಯಡಿಯಲ್ಲಿಯೇ ಅವರು ಬೆಳೆಯುತ್ತಾರೆ.

ಕುಂದಗೋಳದ ಬಹುತೇಕ ಹೊಲಗಳು ಬೆಳೆಯಿಲ್ಲದೆ ಬರಡು ಭೂಮಿಯಂತೆ ಕಾಣುತ್ತಿದ್ದರೆ, ಇವರ ತೋಟ ಹಣ್ಣುಗಳಿಂದ ಕಂಗೊಳಿಸುತ್ತಿರುವುದು ವಿಶೇಷ. ಸಹೋದರ ಶಿವಪ್ಪ ಮೂಲಗಿ ಜೊತೆಗೂಡಿ ತೋಟವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.

ಸಮುದಾಯ ಹೊಂಡ: ಕಳೆದ ಬಾರಿ ಬರಗಾಲದಿಂದ ಬೇಸತ್ತಿರುವ ಈ ಭಾಗದ ರೈತರು, ಮುಂದಿನ ವರ್ಷವೂ ಅದೇ ಸ್ಥಿತಿ ಬರಬಾರದು ಎಂಬ ಕಾರಣದಿಂದ ಕೃಷಿಹೊಂಡ ನಿರ್ಮಾಣ ಮಾಡಿಕೊಂಡಿದ್ದಾರೆ. ವೆಂಕಪ್ಪ, ಶಿವಪ್ಪ ಅಲ್ಲದೆ, ಇತರೆ ಒಂಬತ್ತು ರೈತರು ಸೇರಿಕೊಂಡು ‘ಆದಿಶಕ್ತಿ ತೋಟಗಾರಿಕಾ ಬೆಳೆಗಾರರ ಸಂಘ’ ರಚಿಸಿಕೊಂಡಿದ್ದಾರೆ. ಎಲ್ಲರೂ ಸೇರಿ ಹಣ ಹೊಂದಿಸಿ, ಸುಮಾರು ಒಂದು ಎಕರೆ ಪ್ರದೇಶದಲ್ಲಿ ಹೊಂಡ ತೋಡಿಸಿದ್ದಾರೆ. ಈಗಾಗಲೇ ಈ ಹೊಂಡಕ್ಕೆ ₹10 ಲಕ್ಷ ವೆಚ್ಚ ಮಾಡಿದ್ದು, ತೋಟಗಾರಿಕಾ ಇಲಾಖೆ ₹4 ಲಕ್ಷ ಮಂಜೂರು ಮಾಡಿದೆ ಎಂದು ರೈತರು ಹೇಳುತ್ತಾರೆ.

ಮೂಲಗಿ ಕುಟುಂಬದವರು 28 ಕಡೆ ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ‘ಮೂರು ಕೊಳವೆಬಾವಿಗಳನ್ನು ತೋಡಿಸಿದ್ದರೂ ಅದರಲ್ಲಿ ಹೆಚ್ಚು ನೀರು ಬರುತ್ತಿಲ್ಲ. ಮುಂದೆ ಮಳೆಯ ನೀರನ್ನಾದರೂ ಸಂಗ್ರಹಿಸಿಟ್ಟುಕೊಳ್ಳಬೇಕು ಹಾಗೂ ಅದು ವ್ಯರ್ಥವಾಗಿ ಹರಿದು ಹೋಗಬಾರದು ಎಂಬ ಕಾರಣಕ್ಕೆ ಕೃಷಿಹೊಂಡ ನಿರ್ಮಿಸಿಕೊಂಡಿದ್ದೇವೆ’ ಎಂದು ಶಿವಪ್ಪ ಮೂಲಗಿ ಹೇಳಿದರು.

12 ಎಕರೆಗೆ ನೀರು: ‘ಹನಿ ನೀರಾವರಿಯಿಂದ ಪ್ರತಿ ಸಸಿಗೂ ಅಗತ್ಯವಿರುವಷ್ಟು ನೀರು ಪೂರೈಕೆಯಾಗುವುದರಿಂದ ಪೋಲಾಗುವುದಿಲ್ಲ. ತೇವಾಂಶವೂ ಚೆನ್ನಾಗಿರುತ್ತದೆ’ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಶಿಲ್ಪಶ್ರೀ ಹೇಳಿದರು.

ಕೃಷಿಗೆ ಕ್ವಾರಿ ನೀರು
‘ನಮ್ಮ ತೋಟದ ಬಳಿಯಲ್ಲಿಯೇ ಕಲ್ಲು ಗಣಿಗಾರಿಕೆ ಕ್ವಾರಿ ಇದೆ. ಕ್ವಾರಿಯಿಂದ ಬರುವ ನೀರನ್ನು ನಮ್ಮ ತೋಟಕ್ಕೆ ಬರುವ ವ್ಯವಸ್ಥೆ ಮಾಡಿಕೊಂಡಿದ್ದೇವೆ. ವ್ಯರ್ಥವಾಗುತ್ತಿದ್ದ ಈ ನೀರನ್ನು ಬೆಳೆಗೆ ಬಳಸಿಕೊಳ್ಳುತ್ತಿದ್ದೇವೆ. ಕ್ವಾರಿಯ ನೀರಾದರೂ ಬೆಳೆಗೆ ಯಾವುದೇ ಹಾನಿಯಾಗಿಲ್ಲ’ ಎಂದು ವೆಂಕಪ್ಪ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.