ADVERTISEMENT

‘ಸಿಂಹಗರ್ಜನೆ’ಯ ಡೊಳ್ಳಿನ ಸದ್ದಿನ ಸಡಗರ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 5:48 IST
Last Updated 3 ಸೆಪ್ಟೆಂಬರ್ 2017, 5:48 IST

ಹುಬ್ಬಳ್ಳಿ: ತಾಳಕ್ಕೆ ತಕ್ಕಂತೆ ಡೊಳ್ಳಿನ ಸದ್ದು, ಅಲೆ ಅಲೆಯಾಗಿ ತೇಲುತ್ತ ಒಮ್ಮೆಲೇ ಬಂಡೆಗೆ ಅಪ್ಪಳಿಸಿದಂತೆ ಭೋರ್ಗರೆತದ ಸದ್ದು... ನಂತರ ಒಮ್ಮೆಲೇ ಗಣಪತಿ ಬಪ್ಪಾ ಮೋರಯಾ ಎಂಬ ಜಯಘೋಷ... ಇವು ಇಲ್ಲಿನ ಹಳೆ ಹುಬ್ಬಳ್ಳಿ ದುರ್ಗದ ಬೈಲ್‌ ಬಳಿಯ ಮ್ಯಾದಾರ ಓಣಿಯ ಗಣಪತಿ ವಿಸರ್ಜನೆ ವೇಳೆ ಕಂಡು ಬಂದ ದೃಶ್ಯಗಳು.

ಕೊಲ್ಹಾಪುರದ ವಾರಣಾ ನಗರದಿಂದ ಬಂದಿದ್ದ 80 ಜನ ಕಲಾವಿದರ ‘ಸಿಂಹಗರ್ಜನೆ’ ಹೆಸರಿನ ತಂಡದವರು ಗಣಪತಿಯ ಮಂಟಪದ ಎದುರು ಒಂದು ಗಂಟೆಗೂ ಹೆಚ್ಚು ಕಾಲ ಆಕರ್ಷಕ ಡೊಳ್ಳಿನ ವಾದನವನ್ನು ಪ್ರಸ್ತುತಪಡಿಸಿದರು.

ಕಿತ್ತಳೆ ಬಣ್ಣದ ಜುಬ್ಬಾ, ಬಿಳಿ ಪೈಜಾಮ, ಕಂದು ಬಣ್ಣದ ಪೇಟಾ, ಮೂಗುನತ್ತು ಧರಿಸಿದ ಯುವತಿಯರು ಹಾಗೂ ಬಿಳಿ ಬಣ್ಣದ ಕುರ್ತಾ, ಧರಿಸಿದ್ದ ಯುವ ಕಲಾವಿದರು ಎರಡು ಮಣ ಭಾರದ ಡೊಳ್ಳುಗಳನ್ನು ಹೊತ್ತುಕೊಂಡು ಭಾವಾವೇಶದಿಂದ ಕುಣಿದು ನೋಡುಗರನ್ನೂ ಕುಣಿಸಿದರು. ಮುಖ್ಯ ಡೊಳ್ಳು ವಾದ್ಯಗಾರನ ಸೂಚನೆಯನುಸಾರ ಡೊಳ್ಳಿನ ಜೊತೆಗೆ ತಾವೂ ತಿರುಗಿ, ಕುಣಿ ಕುಣಿದು ಭಾರಿ ಸದ್ದಿನ ಡೊಳ್ಳು ಬಾರಿಸಿದರು.

ADVERTISEMENT

ಇದರ ಜೊತೆಗೆ ಭಾರಿ ಗಂಟೆಯ ಸದ್ದು ನಾದಕ್ಕೆ ಹೊಸ ಕಳೆಯನ್ನು ತಂದಿತ್ತು. ವಿಜಯಕುಮಾರ್ ಚೌಗಲಾ ನೇತೃತ್ವದ ಸಿಂಹಗರ್ಜನೆ ತಂಡದಲ್ಲಿ 150ಕ್ಕೂ ಅಧಿಕ ಕಲಾವಿದರಿದ್ದು, 80 ಜನರು ಮೊದಲ ಬಾರಿಗೆ ಹುಬ್ಬಳ್ಳಿಗೆ ಕಾರ್ಯಕ್ರಮ ನೀಡಲು ಬಂದಿದ್ದರು. ಡೊಳ್ಳು ವಾದನದ ಸಂದರ್ಭದಲ್ಲಿ ಗಣಪತಿ ಮಂಡಳದವರು ಪಟಾಕಿ ಸಿಡಿಸಿದರು. ನಂತರ ಹೊಸೂರು ಬಾವಿಯಲ್ಲಿ ಸಾರ್ವಜನಿಕ ಗಣಪತಿ ಮೂರ್ತಿಯನ್ನು ವಿಸರ್ಜಿಸಲಾಯಿತು.

ಗಣೇಶ ಮೂರ್ತಿ ವಿಸರ್ಜನೆ
ಧಾರವಾಡ: ಗಣೇಶ ಹಬ್ಬದ ಒಂಬತ್ತನೇ ದಿನವಾದ ಶನಿವಾರ ಜಿಲ್ಲೆಯಲ್ಲಿ ಒಟ್ಟು 292 ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಜರುಗಿತು. ಧಾರವಾಡ, ಹುಬ್ಬಳ್ಳಿ, ಕುಂದಗೋಳ, ನವಲಗುಂದ ಸೇರಿದಂತೆ ಹಲವು ಕಡೆಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸಲಾಯಿತು.

ಗಣೇಶ ಮಂಡಳಿಗಳ ಯುವಕರು ಡಿಜೆ ಸಂಗೀತಕ್ಕೆ ರಸ್ತೆಯುದ್ದಕ್ಕೂ ನೃತ್ಯ ಮಾಡಿದರು. ಘೋಷಣೆ ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗ್ರಾಮೀಣ ಭಾಗದ ಮಂಡಳಿಗಳವರು ಸಮೀಪದ ಕೆರೆ, ಬಾವಿ ಹಾಗೂ ಹೊಂಡಗಳಲ್ಲಿ ವಿಸರ್ಜನೆ ಮಾಡಿದರು. 

ನಗರದ ಯುವಕ ಮಂಡಳಿಗಳು ಹೊಸಯಲ್ಲಾಪುರದ ನುಚ್ಚಂಬ್ಲಿ ಬಾವಿ ಹಾಗೂ ಕೆಲಗೇರಿ ಕೆರೆವರೆಗೆ ಸಾಂಪ್ರಾದಾಯಿಕ ಭಜನೆ, ಹಾಡು, ನೃತ್ಯದೊಂದಿಗೆ ಮೂರ್ತಿಗಳ ಮೆರವಣಿಗೆ ಮಾಡಿದರು. ಯುವಕರು ಡಿಜೆ ಹಾಡಿನ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಗಣೇಶೋತ್ಸವ ಪ್ರಯುಕ್ತ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.